ವಾಷಿಂಗ್ಟನ್, ಅಮೆರಿಕ : ಭಾರತವು ಯುನೈಟೆಡ್ ಸ್ಟೇಟ್ಸ್‌ನ ಕಾರ್ಯತಂತ್ರದ ಪಾಲುದಾರ ದೇಶವಾಗಿದ್ದು, ಅಮೆರಿಕದ ಪ್ರಜೆಯಾಗಿರುವ ಪ್ರತ್ಯೇಕತಾವಾದಿ ಸಿಖ್ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನ ಹಿಂದೆ ಯಾರಿದ್ದಾರೋ ಅವರನ್ನು ಹೊಣೆಗಾರರನ್ನಾಗಿ ಮಾಡಿ ಶಿಕ್ಷೆಗೆ ಗುರಿಯಾಗಿಸಬೇಕು ಎಂದು ಶ್ವೇತಭವನವು ಒತ್ತಾಯಿಸಿದೆ.
ಶ್ವೇತಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ, "ಭಾರತವು ಅಮೆರಿಕದ ಕಾರ್ಯತಂತ್ರದ ಪಾಲುದಾರ. ಎರಡು ದೇಶಗಳ ನಡುವಣ ಬಾಂಧವ್ಯ ಮತ್ತಷ್ಟು ಸದೃಢವಾಗಿದೆ. ನಾವು ಆ ಕಾರ್ಯತಂತ್ರದ ಪಾಲುದಾರಿಕೆಯನ್ನು ಆಳಗೊಳಿಸುತ್ತಿದ್ದೇವೆ. ಜೊತೆಗೆ, ಭಾರತ ಮತ್ತು ಅಮೆರಿಕ ಪೆಸಿಫಿಕ್‌ನ ಕ್ವಾಡ್ ಸದಸ್ಯ ರಾಷ್ಟ್ರಗಳಾಗಿವೆ. ನಾವು ಅವರೊಂದಿಗೆ ಹಲವಾರು ಸಮಸ್ಯೆಗಳ ಕುರಿತು ಚರ್ಚಿಸಲು ಭಾಗವಹಿಸುತ್ತೇವೆ. ಈ ಸಂದರ್ಭದಲ್ಲೇ ಪನ್ನುನ್ ಹತ್ಯೆಯ ಸಂಚಿನ ಆರೋಪಗಳ ಗಂಭೀರತೆಯನ್ನು ಸಹ ಗುರುತಿಸುತ್ತೇವೆ" ಎಂದು ಹೇಳಿದರು.
ಭಾರತ - ಅಮೆರಿಕ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಾನ್ ಕಿರ್ಬಿ, "ನಾವು ಪನ್ನುನ್ ಹತ್ಯೆಯ ಸಂಚಿನ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಬೇಕು ಎಂದು ಬಯಸುತ್ತೇವೆ ಮತ್ತು ಇದರ ಯಾರಿದ್ದಾರೋ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಈಗಾಗಲೇ ನಮ್ಮ ಭಾರತೀಯ ಸಹವರ್ತಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡುತ್ತಿರುವುದು ನಮಗೆ ಸಂತೋಷವಾಗಿದೆ. ಈ ದಾಳಿಗಳಿಗೆ ಕಾರಣರಾದವರನ್ನು ಸಂಪೂರ್ಣ ಹೊಣೆಗಾರರನ್ನಾಗಿ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ" ಎಂದು ಹೇಳಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ವಾರದ ಹಿಂದಷ್ಟೇ ಪ್ರತಿಕ್ರಿಯೆ ನೀಡಿದ್ದ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಅವರು, ಸಿಖ್ ಪ್ರತ್ಯೇಕತಾವಾದಿಯನ್ನು ಕೊಲ್ಲಲು ಸಂಚು ರೂಪಿಸಿದ ಆರೋಪವನ್ನು ಅಮೆರಿಕವು ಭಾರತೀಯ ವ್ಯಕ್ತಿಯ ಮೇಲೆ ಹೊರಿಸಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮತ್ತೊಂದೆಡೆ, ಭಾರತದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿಸಲಾಗುವುದು ಎಂದು ಹೇಳಿದ್ದರು.
ಇದನ್ನೂ ಓದಿ : ಪನ್ನುನ್ ಹತ್ಯೆಗೆ ಸಂಚು : ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ; ಅಮೆರಿಕ ವಕ್ತಾರ
ನಿನ್ನೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ರಾಜ್ಯಸಭೆಗೆ ಹೇಳಿಕೆ ನೀಡಿದ್ದು, ಈ ಪ್ರಕರಣದಲ್ಲಿ ಅಮೆರಿಕ ನೀಡಿದ ಮಾಹಿತಿಯ ಕುರಿತು ಭಾರತ ತನಿಖಾ ಸಮಿತಿಯನ್ನು ರಚಿಸಿದ್ದು, ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ ಎಂದು ಹೇಳಿದ್ದಾರೆ. ಈ ನಡುವೆ ಪನ್ನುನ್ ಭಾರತದ ಸಂಸತ್ ಮೇಲೆ ದಾಳಿ ಮಾಡುವ ಎಚ್ಚರಿಕೆ ನೀಡಿದ್ದಾನೆ. ಇನ್ನೊಂದೆಡೆ ಆತ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆಯೂ ದಾಳಿ ಮಾಡುವ ಎಚ್ಚರಿಕೆ ನೀಡಿದ್ದ.