ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ಪ್ರಜೆಯಾಗಿರುವ ಗೌತಮ್ ರಾಣಾ ಎಂಬುವವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ಲೊವಾಕಿಯಾ ದೇಶಕ್ಕೆ ರಾಯಭಾರಿಯನ್ನಾಗಿ ನೇಮಿಸಲಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಶ್ವೇತ ಭವನ, ರಾಣಾ ಅವರ ನಾಮನಿರ್ದೇಶನವನ್ನು ಈಗಾಗಲೇ ಪ್ರಕಟಿಸಿದ್ದು ಅನುಮೋದನೆ ದೊರೆಯಬೇಕಿದೆ ಎಂದು ತಿಳಿಸಿದೆ.
ಅಮೆರಿಕದ ಹಿರಿಯ ರಾಜತಾಂತ್ರಿಕ ಸೇವೆಗಳ ಅಧಿಕಾರಿಯಾಗಿರುವ ರಾಣಾ, ಅಲ್ಜೀರಿಯಾದಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಸ್ಲೊವೇನಿಯಾದಲ್ಲೂ ರಾಜತಾಂತ್ರಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವಿ. ಇದನ್ನು ಹೊರತುಪಡಿಸಿದಂತೆ, ಇದಕ್ಕೂ ಮುನ್ನ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ವಿಚಾರವಾಗಿ ರಾಷ್ಟ್ರೀಯ ಭದ್ರತಾ ಮಂಡಳಿಯ ನಿರ್ದೇಶಕರಾಗಿದ್ದರು. ನವದೆಹಲಿಯ ಅಮೆರಿಕ ರಾಯಭಾರ ಕಚೇರಿಯಲ್ಲೂ ರಾಜಕೀಯ ವ್ಯವಹಾರಗಳ ವಿಭಾಗದ ಡೆಪ್ಯೂಟಿ ಮಿನಿಸ್ಟರ್ ಕೌನ್ಸಿಲರ್ ಆಗಿದ್ದರು.
ಪೆನ್ಸಿಲ್ವೇನಿಯಾ ವಿವಿಯಿಂದ ಬಿಎ ಮತ್ತು ಬಿಎಸ್ ಪದವಿ, ವಂಡರ್‌ಬಿಟ್ ಯೂನಿವರ್ಸಿಟಿ ಸ್ಕೂಲ್ ಆಫ್ ಲಾದಿಂದ ಜಿ.ಡಿ ಪದವಿ ಹಾಗೂ ನ್ಯಾಷನಲ್ ಡಿಫೆನ್ಸ್ ವಿವಿಯಿಂದ ಎಂಎ ಪದವಿಯನ್ನು ರಾಣಾ ಪಡೆದಿದ್ದಾರೆ. ಇಂಗ್ಲಿಷ್ ಸೇರಿದಂತೆ ಹಿಂದಿ, ಸ್ಪಾನಿಷ್ ಮತ್ತು ಗುಜರಾತಿ ಭಾಷೆಯನ್ನು ಇವರು ಬಲ್ಲರು.