ವಾಷಿಂಗ್ಟನ್ (ಅಮೆರಿಕ): ''ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಭಾರತಕ್ಕೆ ಭೇಟಿ ನೀಡಲು ಸಿದ್ಧರಾಗಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಅವರು, ಪ್ರಮುಖ ಉಪಕ್ರಮಗಳ ಕುರಿತು ತುಂಬಾ ಉತ್ಸುಕರಾಗಿದ್ದಾರೆ'' ಎಂದು ವೈಟ್ ಹೌಸ್ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬೈಡನ್ ಅವರು ಜಿ20 ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ (ಸಿಡಿಸಿ) ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿದರು. ಜೋ ಬೈಡನ್ ಹಾಗೂ ಪತ್ನಿ ಜಿಲ್ ಬೈಡನ್ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಪರೀಕ್ಷೆಯ ನಂತರ ಫಲಿತಾಂಶದ ವರದಿಯಲ್ಲಿ ನೆಗೆಟಿವ್ ಬಂದಿದೆ. ಭಾರತಕ್ಕೆ ಜೋ ಬೈಡನ್ ಅವರ ಪ್ರಯಾಣ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶ್ವೇತಭವನ ತಿಳಿಸಿದೆ.
ನಿಗದಿತ ವೇಳಾಪಟ್ಟಿಯಂತೆ ಬೈಡನ್ ಜಿ20 ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ''ಅಧ್ಯಕ್ಷರ ಆರೋಗ್ಯವನ್ನು ವೈದ್ಯರು ನಿರಂತರವಾಗಿ ಗಮನಿಸುತ್ತಿದ್ದಾರೆ. ಸದ್ಯ ಅವರಿಗೆ ಕೋವಿಡ್ ಲಕ್ಷಣಗಳಿಲ್ಲ. ಭಾರತಕ್ಕೆ ಹೊರಡುವ ಮೊದಲು, ಬೈಡನ್ ಮತ್ತು ಅವರ ಜೊತೆಯಲ್ಲಿರುವ ನಿಯೋಗವನ್ನು ಮತ್ತೊಮ್ಮೆ ಪರೀಕ್ಷಿಸಲಾಗುತ್ತದೆ. ಭೇಟಿಯ ಸಂದರ್ಭದಲ್ಲಿ ಅವರು ಬಹಳ ಎಚ್ಚರಿಕೆಯಿಂದ ಇರುತ್ತಾರೆ'' ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೀನ್ ಪಿಯರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬೈಡನ್ ಗುರುವಾರ ರಾತ್ರಿ ದೆಹಲಿಗೆ ಬರಲಿದ್ದಾರೆ. ಅವರು ಶುಕ್ರವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಸೆ.9 ಮತ್ತು 10ರಂದು ನಡೆಯಲಿರುವ ಜಿ20 ರಾಷ್ಟ್ರಗಳ ಮುಖ್ಯಸ್ಥರ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ದೆಹಲಿ ಪ್ರವಾಸ ಮುಗಿಸಿ ವಿಯೆಟ್ನಾಂಗೆ ತೆರಳಲಿದ್ದಾರೆ. ಜಿ20 ಶೃಂಗಸಭೆಯ ಸಮಯದಲ್ಲಿ ಮೋದಿ ಮತ್ತು ಇತರ ವಿಶ್ವ ನಾಯಕರೊಂದಿಗಿನ ಅವರ ಸಭೆಗಳು ಮತ್ತು ಸಂವಾದಗಳು ಸಿಡಿಸಿ ಸ್ಥಾಪಿಸಿದ ಕೋವಿಡ್-19 ಪ್ರೋಟೋಕಾಲ್‌ಗಳಿಂದ ನಡೆಸಲ್ಪಡುತ್ತವೆ. ಪರೀಕ್ಷೆಯ ನಂತರ ಜಿಲ್ ಬೈಡನ್ ತನ್ನ ಡೆಲವೇರ್ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ ಮತ್ತು ಅಧ್ಯಕ್ಷರೊಂದಿಗೆ ಭಾರತ ಮತ್ತು ವಿಯೆಟ್ನಾಂಗೆ ಪ್ರಯಾಣಿಸುತ್ತಿಲ್ಲ ಎಂದ ಜೀನ್ ಪಿಯರ್ ಅವರು, ಅಧ್ಯಕ್ಷರ ಪ್ರಯಾಣದ ಯೋಜನೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪುನರುಚ್ಚರಿಸಿದರು.
ಜಾನ್ ಕಿರ್ಬಿ ಮಾಹಿತಿ: ''ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಅವಕಾಶವನ್ನು ತಲುಪಿಸುವುದು, ಹವಾಮಾನದಿಂದ ತಂತ್ರಜ್ಞಾನದವರೆಗೆ ಅಮೆರಿಕದ ಜನರಿಗೆ ಪ್ರಮುಖ ಆದ್ಯತೆಗಳ ಮೇಲೆ ಪ್ರಗತಿ ಸಾಧಿಸುವುದು. ಜಿ 20 ಭಾರತದ ಅಧ್ಯಕ್ಷತೆಯಲ್ಲಿ ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಅವರು ನವದೆಹಲಿಗೆ ಆಗಮಿಸಿದ ಸ್ವಲ್ಪ ಸಮಯದ ನಂತರ ಪ್ರಧಾನಿಯವರೊಂದಿಗಿನ ದ್ವಿಪಕ್ಷೀಯ ಸಭೆಯನ್ನು ಅಧ್ಯಕ್ಷರು ಎದುರು ನೋಡುತ್ತಿದ್ದಾರೆ'' ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನದ ಸಂಯೋಜಕ ಜಾನ್ ಕಿರ್ಬಿ ಅವರು ವಾಷಿಂಗ್ಟನ್ ಫಾರಿನ್ ಪ್ರೆಸ್ ಸೆಂಟರ್ ಆಯೋಜಿಸಿದ್ದ ಪ್ರತ್ಯೇಕ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.
ಅಮೆರಿಕ ಅಧ್ಯಕ್ಷ ಬೈಡನ್ ಹೊರತುಪಡಿಸಿ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಯುಕೆ ಪ್ರಧಾನಿ ರಿಷಿ ಸುನಕ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಜಿ20 ಶೃಂಗಸಭೆಯಲ್ಲಿ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದಾರೆ.
ಜಿ20ಯ ಮುಂದಿನ ಅಧ್ಯಕ್ಷ ಸ್ಥಾನ ಯಾರಿಗೆ?: ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 10 ರಂದು ಬ್ರೆಜಿಲ್ ಅಧ್ಯಕ್ಷ ಲುಲಾ ಅವರಿಗೆ ಜಿ20 ಅಧ್ಯಕ್ಷ ಸ್ಥಾನದ ಹಸ್ತಾಂತರಿಸಲಿದ್ದಾರೆ. ಬ್ರೆಜಿಲ್ ಡಿಸೆಂಬರ್ 1ರಂದು ಔಪಚಾರಿಕವಾಗಿ ಜಿ20ಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಜಿ20 ಸದಸ್ಯ ರಾಷ್ಟ್ರಗಳು ಜಾಗತಿಕ ಜಿಡಿಪಿಯ ಸುಮಾರು ಶೇ 85 ಪ್ರತಿಶತವನ್ನು ಪ್ರತಿನಿಧಿಸುತ್ತವೆ. 75 ಪ್ರತಿಶತಕ್ಕಿಂತಲೂ ಹೆಚ್ಚು ಜಾಗತಿಕ ವ್ಯಾಪಾರ ಹೊಂದಿದೆ. ಜೊತೆಗೆ ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಇದೆ. ಜಿ20 ಗುಂಪಿನಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಯುಎಸ್ ಮತ್ತು ಯುರೋಪಿಯನ್ ಒಕ್ಕೂಟ ಒಳಗೊಂಡಿದೆ.
ಇದನ್ನೂ ಓದಿ: PM Modi visits Indonesia: ಜಕಾರ್ತ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ