ಲಂಡನ್ : ಕೆಂಪು ಸಮುದ್ರದಲ್ಲಿ ಕಂಟೈನರ್ ಹಡಗೊಂದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಹೌತಿ ಉಗ್ರರ ಸಣ್ಣ ದೋಣಿಗಳನ್ನು ಅಮೆರಿಕ ಹೊಡೆದುರುಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಯೆಮೆನ್ ನ ಹೌತಿ ನಿಯಂತ್ರಿತ ಪ್ರದೇಶಗಳಿಂದ ಬಂದ ನಾಲ್ಕು ದೋಣಿಗಳು 'ಮೆರ್ಸ್ಕ್ ಹ್ಯಾಂಗ್ ಝೌ' ಹೆಸರಿನ ಹಡಗಿನ ಮೇಲೆ ಗುಂಡು ಹಾರಿಸುತ್ತ, ಹಡಗಿಗೆ ಕೆಲವೇ ಮೀಟರ್ ಹತ್ತಿರಕ್ಕೆ ಬಂದಿದ್ದವು ಎಂದು ಯುಎಸ್ ಮಿಲಿಟರಿ ತಿಳಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.
ಆದರೆ ಹಡಗಿಗೆ ಹತ್ತಿರದಲ್ಲಿದ್ದ ಯುಎಸ್ ಯುದ್ಧನೌಕೆಗಳಲ್ಲಿನ ಹೆಲಿಕಾಪ್ಟರ್ಗಳು ತಕ್ಷಣ ಸಹಾಯಕ್ಕೆ ಧಾವಿಸಿ, ಹೌತಿ ದೋಣಿಗಳ ಮೇಲೆ ಗುಂಡಿನ ದಾಳಿ ನಡೆಸಿವೆ. ಯುಎಸ್ ದಾಳಿಯಲ್ಲಿ ಮೂರು ದೋಣಿಗಳು ಧ್ವಂಸಗೊಂಡು ಅದರಲ್ಲಿದ್ದ ಉಗ್ರರು ಹತರಾಗಿದ್ದಾರೆ. ಮತ್ತೊಂದು ದೋಣಿ ತಪ್ಪಿಸಿಕೊಂಡು ಪಲಾಯನ ಮಾಡಿದೆ ಎಂದು ಬಿಬಿಸಿ ವರದಿ ಮಾಡಿದೆ.
ನವೆಂಬರ್ ತಿಂಗಳಿನಿಂದಲೇ ಹೌತಿ ಉಗ್ರರು ಕೆಂಪು ಸಮುದ್ರದ ಮೂಲಕ ಸಾಗುವ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಗಾಜಾದಲ್ಲಿ ಇಸ್ರೇಲ್ನ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ಗೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಇರಾನ್ ಬೆಂಬಲಿತ ಯೆಮೆನ್ ಬಂಡುಕೋರ ಗುಂಪು ಹೇಳಿಕೊಂಡಿದೆ.
ಪ್ರಸ್ತುತ ದಾಳಿಗೊಳಗಾದ ವಾಣಿಜ್ಯ ಹಡಗು ಮೆರ್ಸ್ಕ್ ಹ್ಯಾಂಗ್ಝೌ ಸಿಂಗಾಪುರದಲ್ಲಿ ನೋಂದಾಯಿಸಲ್ಪಟ್ಟಿದ್ದು, ಡ್ಯಾನಿಶ್ ಸಂಸ್ಥೆಯ ಮಾಲೀಕತ್ವದಲ್ಲಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ತಿಳಿಸಿದೆ. ಕೆಂಪು ಸಮುದ್ರದ ಮೂಲಕ ತನ್ನ ಹಡಗುಗಳ ಸಂಚಾರವನ್ನು ಮುಂದಿನ 48 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ಮೆರ್ಸ್ಕ್ ಹೇಳಿದೆ ಎಂದು ಬಿಬಿಸಿ ವರದಿ ಮಾಡಿದೆ.
ಯೆಮೆನಿ ಸಮಯ ಸಂಜೆ 6.30 ರ ಸುಮಾರಿಗೆ ಹಡಗಿನ ಮೇಲೆ ನಾಲ್ಕು ಹೌತಿ ದೋಣಿಗಳು ದಾಳಿ ನಡೆಸಿದ್ದವು. ದೋಣಿಗಳು ಶಸ್ತ್ರಸಜ್ಜಿತವಾಗಿದ್ದವು ಮತ್ತು ಹಡಗಿಗೆ 20 ಮೀಟರ್ ಹತ್ತಿರದವರೆಗೂ ಬಂದು, ಹೌತಿಗಳು ಹಡಗಿನ ಮೇಲೆ ಹತ್ತಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಹಡಗಿನ ಸಿಬ್ಬಂದಿ ತುರ್ತು ಪರಿಸ್ಥಿತಿ ಕರೆ ಮಾಡಿದ್ದರು ಮತ್ತು ಹಡಗಿನಲ್ಲಿದ್ದ ಭದ್ರತಾ ತಂಡವು ಹೌತಿಗಳತ್ತ ಗುಂಡು ಹಾರಿಸಿತು ಎಂದು ಹೇಳಿಕೆ ತಿಳಿಸಿದೆ. ನಂತರ ಹತ್ತಿರದಲ್ಲಿದ್ದ ಯುಎಸ್ಎಸ್ ಐಸೆನ್ ಹೋವರ್ ವಿಮಾನವಾಹಕ ನೌಕೆ ಮತ್ತು ಯುಎಸ್ಎಸ್ ಗ್ರೇವ್ಲಿ ಡಿಸ್ಟ್ರಾಯರ್ನ ಹೆಲಿಕಾಪ್ಟರ್ಗಳು ಸಹಾಯದ ಕರೆಗೆ ಸ್ಪಂದಿಸಿ ಹೌತಿ ದೋಣಿಗಳನ್ನು ಧ್ವಂಸಗೊಳಿಸಿದವು ಎಂದು ಬಿಬಿಸಿ ವರದಿ ಮಾಡಿದೆ.
ಇದನ್ನೂ ಓದಿ : ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿಯಿಂದ ತೈಲ ಬೆಲೆ ಹೆಚ್ಚಳ ಸಾಧ್ಯತೆ