ವಾಷಿಂಗ್ಟನ್: ಕಳೆದ ಮೂರು ತಿಂಗಳಿಂದಲೂ ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ನಡೆಸುತ್ತಿದ್ದು, ಇಲ್ಲಿಯವರೆಗೆ ಯಶಸ್ಸು ಮಾತ್ರ ಲಭ್ಯವಾಗಿಲ್ಲ. ಯುದ್ಧ ಪೀಡಿತ ಉಕ್ರೇನ್ಗೆ ಈಗಾಗಲೇ ಅನೇಕ ದೇಶಗಳು ಸಹಾಯಹಸ್ತ ಚಾಚಿದ್ದು, ಇದೀಗ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಬರೋಬ್ಬರಿ $700 ಮಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಉಕ್ರೇನ್ಗೆ ರವಾನೆ ಮಾಡಲು ಅಮೆರಿಕ ಮುಂದಾಗಿದ್ದು, ಇದರಲ್ಲಿ ದೀರ್ಘ ಶ್ರೇಣಿಯ ರಾಕೆಟ್ ಸಹ ಒಳಗೊಂಡಿವೆ. ರಷ್ಯಾ ಪಡೆಗಳ ಮೇಲೆ ನಿಖರವಾಗಿ ದಾಳಿ ಮಾಡುವ ಸುಧಾರಿತ ರಾಕೆಟ್ ಇವಾಗಿದ್ದು, ಇವುಗಳನ್ನ ಉಕ್ರೇನ್ಗೆ ಒದಗಿಸಲು ಯುಎಸ್ ಅಧ್ಯಕ್ಷ ಜೋ ಬೈಡನ್ ಒಪ್ಪಿಕೊಂಡಿದ್ದಾರೆ.
ರಷ್ಯಾದ ಮೇಲೆ ದಾಳಿ ಮಾಡಲು ಈ ಕ್ಷಿಪಣಿ ಬಳಕೆ ಬಳಕೆ ಮಾಡಲ್ಲ ಎಂದು ಉಕ್ರೇನ್ ಭರವಸೆ ನೀಡಿದ ಬಳಿಕ ಯುಎಸ್ ಈ ರಾಕೆಟ್ ಒದಗಿಸಲು ನಿರ್ಧಾರ ಕೈಗೊಂಡಿದೆ. ಎದುರಾಳಿ ಪಡೆಗಳು ಮೇಲೆ ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಈ ಕ್ಷೀಪಣಿ, ಸುಮಾರು 80 ಕಿಲೋ ಮೀಟರ್ ದೂರದ ಗುರಿ ನಿಖರವಾಗಿ ಹೊಡೆಯಬಲ್ಲದು ಎಂದು ತಿಳಿದು ಬಂದಿದೆ.
ಉಳಿದಂತೆ ಮದ್ದುಗುಂಡುಗಳು, ಕೌಂಟರ್ ಫೈರ್ ರಾಡಾರ್, ವಾಯು ಕಣ್ಗಾವಲು ರಾಡರ್ ಮತ್ತು ಆಂಟಿ ಟ್ಯಾಂಕ್ ಕ್ಷಿಪಣಿಗಳು ಇದರಲ್ಲಿ ಒಳಗೊಂಡಿವೆ. ಕಳೆದ ಫೆಬ್ರವರಿ 24ರಿಂದಲೂ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿದ್ದು, ಇಲ್ಲಿಯವರೆಗೆ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ.
ಇದನ್ನೂ ಓದಿ: ಆಫ್ಘಾನಿಸ್ತಾನದಲ್ಲಿ JeM, LeT ತರಬೇತಿ ಶಿಬಿರ : UN ವರದಿ
ಉಕ್ರೇನ್ಗೆ ಈಗಾಗಲೇ ಯುರೋಪ್ ರಾಷ್ಟ್ರಗಳು ಬೆಂಬಲ ಘೋಷಣೆ ಮಾಡಿದ್ದು, ಫ್ರಾನ್ಸ್, ಜಪಾನ್, ಲಂಡನ್ ಸೇರಿದಂತೆ ಅನೇಕ ದೇಶಗಳು ಯುದ್ದ ಉಪಕರಣ ರವಾನೆ ಮಾಡಿವೆ. ಮಾನವೀಯ ದೃಷ್ಟಿಯಿಂದ ಭಾರತ ಕೂಡ ವೈದ್ಯಕೀಯ, ಆಹಾರ ಸೇರಿದಂತೆ ಅಗತ್ಯ ವಸ್ತು ಉಕ್ರೇನ್ಗೆ ರವಾನೆ ಮಾಡಿದೆ.