ನವದೆಹಲಿ: ವೀಸಾ ಅರ್ಜಿದಾರರೇ ಎಚ್ಚರ!, ಭಾರತದಲ್ಲಿನ ಅಮೆರಿಕದ ರಾಯಭಾರ ಕಚೇರಿ ತನ್ನ ಗ್ರಾಹಕ ಸೇವಾ ಕೇಂದ್ರವನ್ನು ಬೇರೊಂದು ಪ್ಲಾಟ್ಫಾರ್ಮ್ಗೆ ವರ್ಗ ಮಾಡುತ್ತಿದ್ದು, ಜುಲೈ 25 ರಿಂದ 28 ರವರೆಗೆ ವೀಸಾ ಅರ್ಜಿಗಳ ಸ್ವೀಕಾರ, ಹಣ ಪಾವತಿ ಸೇವೆ ಇರುವುದಿಲ್ಲ.
ಹೀಗಂತ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮತ್ತು ಅಮೆರಿಕ ಧೂತಾವಾಸ ಟ್ವೀಟ್ ಮೂಲಕ ತಿಳಿಸಿದೆ. ಅಂದರೆ, ಅಮೆರಿಕಕ್ಕೆ ಹೋಗಬಯಸುವ ಪ್ರಯಾಣಿಕರು ವೀಸಾ ಬಯಸಿ ಅಮೆರಿಕ ಧೂತಾವಾಸಕ್ಕೆ ಕರೆ, ಅರ್ಜಿ ಸಲ್ಲಿಕೆ, ಹಣ ಪಾವತಿ ಮಾಡ ಬಯಸಿದಲ್ಲಿ ಸೂಚಿತ ದಿನಗಳಂದು ಸೇವೆ ಇರುವುದಿಲ್ಲ. ತಮ್ಮ ಗ್ರಾಹಕ ಸೇವೆಯನ್ನು ಹೊಸ ಪ್ಲಾಟ್ಫಾರ್ಮ್ಗೆ ಬದಲಿಸಲು ಉದ್ದೇಶಿರುವ ಕಾರಣ ಸೇವೆ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಜುಲೈ 26 ರಿಂದ 28 ರವರೆಗೆ ಯಾವುದೇ ಅರ್ಜಿಗಳ ಸ್ವೀಕೃತಿ ಇರುವುದಿಲ್ಲ. 25 ರಿಂದ 28 ರವರೆಗೆ ಶುಲ್ಕ ಪಾವತಿ ಸೇವೆಗಳನ್ನು ಸ್ಥಗಿತ ಮಾಡಲಾಗಿರುತ್ತದೆ. ಜುಲೈ 29 ರಂದು ಎಲ್ಲ ಸೇವೆಗಳನ್ನು ಪುನರಾರಂಭ ಮಾಡಲಾಗುವುದು. ಹೀಗಾಗಿ ಗ್ರಾಹಕರು ಸಹಕರಿಸಬೇಕು ಎಂದು ಧೂತಾವಾಸ ಕೋರಿದೆ.
ಪ್ರವಾಸಿ ವೀಸಾ ಸಂದರ್ಶನ ಅವಧಿ ಕಡಿತ: ಅಮೆರಿಕಕ್ಕೆ ಭೇಟಿ ನೀಡುವ ಭಾರತೀಯರಿಗೆ ಬೇಕಾಗಿರುವ ಪ್ರವಾಸಿ ವೀಸಾ ಪಡೆಯುವುದು ಮೊದಲು ತ್ರಾಸದಾಯಕವಾಗಿತ್ತು. ಅರ್ಜಿ ಸಲ್ಲಿಸಿದ ಬಳಿಕ ತಿಂಗಳುಗಟ್ಟಲೇ ಅದಕ್ಕಾಗಿ ಕಾಯಬೇಕಿತ್ತು. ಆದರೆ, ಇದೀಗ ಅದರ ಸಮಯವನ್ನು ಶೇ.50 ರಷ್ಟು ಕಡಿತ ಮಾಡಲಾಗಿದೆ. ಈ ವರ್ಷ(2023) ಕನಿಷ್ಠ ಒಂದು ಮಿಲಿಯನ್ ವೀಸಾಗಳನ್ನು ಪ್ರಕ್ರಿಯೆಗೊಳಿಸುವ ಗುರಿ ಹೊಂದಲಾಗಿದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿರುವ ಗಾರ್ಸೆಟ್ಟಿ, ವೀಸಾ ಪ್ರಕ್ರಿಯೆಯಲ್ಲಿನ ಪ್ರಗತಿಯನ್ನು ಚುರುಕುಗೊಳಿಸಲಾಗಿದೆ. ಭಾರತದಲ್ಲಿನ ಯುಎಸ್ ಮಿಷನ್ ಪ್ರಸ್ತುತ ವೀಸಾಗಳನ್ನು ಹಿಂದೆಂದಿಗಿಂತಲೂ ವೇಗವಾಗಿ ಪ್ರಕ್ರಿಯೆಗೊಳಿಸುತ್ತಿದೆ ಎಂದು ಹೇಳಿದ್ದಾರೆ.
ನಮ್ಮ ಯೋಜನೆಗಳು ಫಲಿತಾಂಶ ತಂದಿವೆ. ಪ್ರವಾಸಿ ವೀಸಾದ ಸಂದರ್ಶನಕ್ಕಾಗಿ ಕಾಯುವ ಸಮಯ ಶೇಕಡಾ 50 ಕ್ಕಿಂತ ಕಡಿಮೆ ಮಾಡಲಾಗಿದೆ. ಅಮೆರಿಕದ ಸೊಬಗನ್ನು ಸವಿಯಲು ಬಯಸುವ ಪ್ರವಾಸಿಗರಿಗೆ ಉಂಟಾಗುವ ಅಡೆತಡೆಗಳನ್ನು ನಿವಾರಿಸಲಾಗಿದೆ ಎಂದು ತಿಳಿಸಿದರು.
ವೀಸಾಕ್ಕಾಗಿ ಇಲ್ಲಿ ಭೇಟಿ ನೀಡಿ: ಗ್ರಾಹಕರ ಸೇವಾ ಕೇಂದ್ರವನ್ನು ಬದಲಿಸಿದ ಬಳಿಕ ಜುಲೈ 29 ರಿಂದ ಸೇವೆ ಆರಂಭವಾಗಲಿದ್ದು, ಬಳಿಕ ವೀಸಾ ಅರ್ಜಿದಾರರು ಅಮೆರಿಕ ರಾಯಭಾರ ಕಚೇರಿಯ ಗ್ರಾಹಕ ಸೇವೆಗಾಗಿ ಹೊಸ ಇ-ಮೇಲ್ support-India@usvisascheduling.com ಅಥವಾ ಅರ್ಜಿಗಳಿಗಾಗಿ USTravelDocs ವೆಬ್ಸೈಟ್ ಅನ್ನು ಸಂಪರ್ಕಿಸಿ.
ಇದನ್ನೂ ಓದಿ: ಅಮೆರಿಕ ವೀಸಾ ಪಡೆಯಲು ಕಾಯುವ ಅವಧಿ ಅರ್ಧದಷ್ಟು ಕಡಿತ