ವಾಷಿಂಗ್ಟನ್ (ಅಮೆರಿಕ): ಅಮೆರಿಕ ತೀವ್ರ ಆರ್ಥಿಕ ಹಿಂಜರಿತ, ಹಣದುಬ್ಬರ ಮತ್ತು ಸಾಲದ ಸಮಸ್ಯೆಗಳಿಂದ ಬಳಲುತ್ತಿದೆ. ಇಂಥ ಸಮಯದಲ್ಲಿ ಹೊಸ ಬಿಕ್ಕಟ್ಟನ್ನೂ ಎದುರಿಸುತ್ತಿದೆ. ಅದುವೇ ದಿವಾಳಿತನ. ಅಧ್ಯಕ್ಷ ಜೋ ಬೈಡನ್ ಸರ್ಕಾರವು ಈ ಎಲ್ಲ ಸಂಕಷ್ಟಗಳ ನಿವಾರಣೆಯ ಸವಾಲು ಎದುರಿಸುತ್ತಿದೆ. ಸಾಲದ ಮಿತಿ ಹೆಚ್ಚಿಸಲು ಕಾಂಗ್ರೆಸ್ (ಅಮೆರಿಕ ಸಂಸತ್ತು) ಅನುಮೋದನೆಯ ಮುದ್ರೆ ಒತ್ತದ ಕಾರಣ ಸರ್ಕಾರ ಹಣಕ್ಕಾಗಿ ಪರದಾಡುತ್ತಿದೆ. ಬೈಡನ್ ಅವರು ಆಸ್ಟ್ರೇಲಿಯಾದ ಪ್ರಮುಖ ಭೇಟಿ ರದ್ದುಪಡಿಸಿದ್ದು ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದು ಅರ್ಥೈಸಿಕೊಳ್ಳಬಹುದು.
ಸಾಲಗಳು ಯಾವುವು?: ಖರ್ಚು ಆದಾಯಕ್ಕಿಂತ ಹೆಚ್ಚಾದಾಗ ಸರ್ಕಾರಗಳು ಸಾಲ ಮಾಡುವುದು ಸಾಮಾನ್ಯ. ಮುಖ್ಯವಾಗಿ ಈ ಉದ್ದೇಶಕ್ಕಾಗಿ ಬಾಂಡ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವುದಲ್ಲದೆ, ಅಲ್ಲಿಯವರೆಗೆ ಬಡ್ಡಿ ಕೊಡುವುದಾಗಿ ಬಾಂಡ್ ಮೂಲಕ ಭರವಸೆ ನೀಡಲಾಗುತ್ತದೆ. ಅಮೆರಿಕ ಕೂಡಾ ಅದನ್ನೇ ಮಾಡುತ್ತಿದೆ. ಆದರೆ ಯಾವುದೇ ದೇಶವು ಅತಿಯಾದ ಸಾಲದ ಮೇಲೆ ನಿಯಂತ್ರಣ ಹೊಂದಿರಲೇಬೇಕು. ನೂರು ವರ್ಷಗಳ ಹಿಂದಿನಿಂದಲೂ ಅಮೆರಿಕ ಸರ್ಕಾರದ ಸಾಲವನ್ನು ಕಾಂಗ್ರೆಸ್ ನಿಯಂತ್ರಿಸುತ್ತಿದೆ. ಆದರೆ ಸಾಲದ ಮಿತಿಯನ್ನು ಅಗತ್ಯಗಳಿಗೆ ಅನುಗುಣವಾಗಿ ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗುತ್ತಿದೆ. 1917 ರಿಂದ ಸರ್ಕಾರದ ಸಾಲದ ಮಿತಿಯನ್ನು 78 ಬಾರಿ ಪರಿಷ್ಕರಿಸಲಾಗಿದೆ. ಇದು ಸಾಮಾನ್ಯವಾಗಿ ಪ್ರತಿ ಬಾರಿ ನಡೆಯುವ ಪ್ರಕ್ರಿಯೆ. ಆದರೆ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ನರ ನಡುವೆ ಬೆಳೆಯುತ್ತಿರುವ ರಾಜಕೀಯ ಸಂಘರ್ಷ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗಿ ಈ ಬಾರಿ ವಿತ್ತ ಸಚಿವರು ಕೈ ಎತ್ತಬೇಕಾದ ಸ್ಥಿತಿಗೆ ತಲುಪಿದ್ದಾರೆ.
$31.4 ಟ್ರಿಲಿಯನ್ ಸಾಲ: 2021ರ ವೇಳೆಗೆ ಸರ್ಕಾರದ ಸಾಲ 28.5 ಟ್ರಿಲಿಯನ್ ಡಾಲರ್ ಇತ್ತು. ಇದು ದೇಶದ ಜಿಡಿಪಿಗಿಂತ ಶೇ.24ರಷ್ಟು ಹೆಚ್ಚು. ಬೃಹತ್ ಮೊತ್ತದ ಹೆಚ್ಚಿನ ಮೊತ್ತವನ್ನು ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ದೇಶೀಯವಾಗಿ ಸಂಗ್ರಹಿಸಿದ್ದರೆ ಸುಮಾರು 7 ಟ್ರಿಲಿಯನ್ ಡಾಲರ್‌ಗಳನ್ನು ವಿದೇಶದಿಂದ ಸಂಗ್ರಹಿಸಲಾಗಿದೆ. ಜಪಾನ್ ಮತ್ತು ಚೀನಾದಿಂದ ಬಾಂಡ್‌ಗಳನ್ನು ಖರೀದಿಸಿದ ಅನೇಕ ಜನರಿದ್ದಾರೆ. ಪ್ರಸ್ತುತ ಯುಎಸ್ ಸರ್ಕಾರದ ಸಾಲದ ಮಿತಿ $31.4 ಟ್ರಿಲಿಯನ್ ಆಗಿದೆ. ಇದನ್ನೂ ಮೀರಿ ಸಾಲ ಮಾಡಲು ಬೈಡನ್ ಸರ್ಕಾರವು ಕಾಂಗ್ರೆಸ್ ಅನುಮತಿ ಕೇಳುತ್ತಿದೆ. ಆದರೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಸಂಖ್ಯಾತ್ಮಕ ಮುನ್ನಡೆ ಹೊಂದಿರುವ ರಿಪಬ್ಲಿಕನ್ನರು ಸಾಲದ ಮಿತಿ ಹೆಚ್ಚಿಸುವುದನ್ನು ವಿರೋಧಿಸುತ್ತಿದ್ದಾರೆ. ಹೆಚ್ಚು ಸಾಲ ಎಂದರೆ ಸರ್ಕಾರಕ್ಕೆ ಆರ್ಥಿಕತೆಯ ಮೇಲೆ ಯಾವುದೇ ನಿಯಂತ್ರಣವಿಲ್ಲದಂತಾಗುತ್ತದೆ. ಭವಿಷ್ಯದ ವೆಚ್ಚವನ್ನು ಕಡಿಮೆ ಮಾಡಬೇಕು ಎಂದು ವಾದಿಸುತ್ತಾರೆ. ಆದ್ರೆ ಬೈಡನ್ ಜೊತೆ ರಿಪಬ್ಲಿಕನ್ನರು ಮಾತುಕತೆ ನಡೆಸುತ್ತಿದ್ದು, ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ.
ಆರ್ಥಿಕ ದಿವಾಳಿ: ಮತ್ತೊಂದೆಡೆ, ಯುಎಸ್ ಹಣಕಾಸು ಸಚಿವ ಯೆಲೆನ್ ಈಗಾಗಲೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮಿತಿ ಹೆಚ್ಚಿಸದಿದ್ದಲ್ಲಿ ಜೂನ್ 1 ರಿಂದ ಯಾವುದೇ ಕ್ಷಣದಲ್ಲಿಯೂ ಸರ್ಕಾರದ ಪಾವತಿಗಳು ನಿಲ್ಲುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರವು ಸಾಲದ ಮಿತಿಯನ್ನು ತಲುಪಿದ್ರೆ ಹೆಚ್ಚಿನ ಸಾಲ ಪಡೆಯಲು ಸಾಧ್ಯವಿಲ್ಲ. ಖಜಾನೆಯಲ್ಲಿರುವ ಹಣ ಮತ್ತು ತೆರಿಗೆಯಿಂದ ಬರುವ ಹಣವನ್ನು ಮಾತ್ರ ಸರ್ಕಾರ ಖರ್ಚು ಮಾಡಬಹುದು. ಸರ್ಕಾರವು ತನ್ನ ಸಾಲ, ಬಡ್ಡಿ ಮತ್ತು ಬಿಲ್‌ಗಳನ್ನು ಪೂರೈಸಲು ಸಾಧ್ಯವಾಗದಿದ್ದಾಗ ಅದನ್ನು ತಾಂತ್ರಿಕವಾಗಿ 'ದಿವಾಳಿ' ಎಂದು ಪರಿಗಣಿಸಲಾಗುತ್ತದೆ.
ಅಂತಾರಾಷ್ಟ್ರೀಯ ಪ್ರಭಾವ: ಅಮೆರಿಕದ ಇತಿಹಾಸದಲ್ಲಿ ಸರ್ಕಾರಕ್ಕೆ ಪಾವತಿ ಕೊರತೆ ಎಂದಿಗೂ ಬಂದಿಲ್ಲ. ಒಂದು ವೇಳೆ ಬಂದರೆ ಅದು ಇದೇ ಮೊದಲ ಬಾರಿ. ಇಂಥ ದುಸ್ಥಿತಿ ಸಂಭವಿಸಿದ್ರೆ ಅಮೆರಿಕ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಆರ್ಥಿಕತೆಯ ಗಂಭೀರ ಪರಿಣಾಮ ಬೀರಬಹುದು. ಹಲವು ದೇಶಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಲಿವೆ.
ಅಮೆರಿಕದಲ್ಲಿ ಸರ್ಕಾರಿ ನೌಕರರ ವೇತನ, ಪಿಂಚಣಿ, ಭತ್ಯೆಗಳು ಸ್ಥಗಿತಗೊಳ್ಳಲಿವೆ. ಸರಕಾರ ನೀಡುವ ಕಲ್ಯಾಣ ನಿಧಿಯ ಮೇಲೆ ಅವಲಂಬಿತರಾದ ಹಲವು ವರ್ಗದ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಬಡ್ಡಿ ದರಗಳು ಗಗನಕ್ಕೇರುತ್ತವೆ. ಪರಿಣಾಮ, ನೀವು ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಹೆಚ್ಚು ಪಾವತಿಸಬೇಕಾಗುತ್ತದೆ. ಸ್ಟಾಕ್ ಮಾರುಕಟ್ಟೆಗಳು ಕುಸಿತಗೊಳ್ಳುತ್ತವೆ. ಬೃಹತ್ ನಿರುದ್ಯೋಗದೊಂದಿಗೆ ಆರ್ಥಿಕ ಕುಸಿತಕ್ಕೆ ಕಾರಣವಾಗುತ್ತವೆ.
ಅಲ್ಪಾವಧಿಗೆ ತನ್ನ ಬಿಲ್‌ಗಳನ್ನು ಪಾವತಿಸಲು ಅಮೆರಿಕಕ್ಕೆ ತಾತ್ಕಾಲಿಕವಾಗಿ ಸಾಧ್ಯವಾಗದಿದ್ದರೂ 80 ಲಕ್ಷ ಜನ ಉದ್ಯೋಗಗಳು ಕಳೆದುಕೊಳ್ಳುತ್ತಾರೆ. ಶೇ.45ರಷ್ಟು ಷೇರುಪೇಟೆ ಕುಸಿಯಲಿದೆ ಎಂದು ಶ್ವೇತಭವನದ ಮೂಲಗಳು ಆತಂಕ ವ್ಯಕ್ತಪಡಿಸಿರುವುದು ಗಮನಾರ್ಹ. ಎಲ್ಲಕ್ಕಿಂತ ಹೆಚ್ಚಾಗಿ, ಯುಎಸ್ ಆರ್ಥಿಕತೆಯ ಮೇಲಿನ ವಿಶ್ವಾಸವು ದುರ್ಬಲಗೊಳ್ಳುತ್ತದೆ. ಜಾಗತಿಕ ಹಣಕಾಸು ವಲಯದ ಪಿವೋಟ್ ಆಗಿ ಚಾಲನೆಯಲ್ಲಿರುವ ಡಾಲರ್ ಪ್ರಾಬಲ್ಯವು ಅಪಾಯದಲ್ಲಿದೆ. ಚೀನಾದ ಕರೆನ್ಸಿ ಪರ್ಯಾಯವಾಗಿ ಬೆಳೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಬೈಡನ್ ಪ್ರವಾಸ ಮುಂದೂಡಿಕೆ: ಸಿಡ್ನಿಯಲ್ಲಿ ನಡೆಯಬೇಕಿದ್ದ ಕ್ವಾಡ್ ಶೃಂಗಸಭೆ ರದ್ದು