ವಾಷಿಂಗ್ಟನ್ ಡಿಸಿ (ಅಮೆರಿಕ): ವಿಶ್ವದಾದ್ಯಂತ ಭಯೋತ್ಪಾದನೆ ಎದುರಿಸಲು ವಾಷಿಂಗ್ಟನ್ ಬದ್ಧವಾಗಿದೆ. ಜೊತೆಗೆ 26/11 ಮುಂಬೈ ದಾಳಿಯಲ್ಲಿ ಭಾಗಿಯಾಗಿರುವವರನ್ನು ನ್ಯಾಯಾಂಗದ ಮುಂದೆ ತರಲು ಪ್ರಕ್ರಿಯೆಗಳನ್ನು ಮುಂದುವರೆಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ. 26/11 ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾ ಹಸ್ತಾಂತರ ಪ್ರಕ್ರಿಯೆಯು ಬಾಕಿ ಉಳಿದಿರುವ ವಿಷಯವಾಗಿದೆ ಎಂದು ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ಹೇಳಿದ್ದಾರೆ.
ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ಹೇಳಿಕೆ: ಈ ಪ್ರಕರಣವು ನಾವು ಗಮನಿಸಿದಂತೆ, ಬಾಕಿ ಉಳಿದಿರುವ ಹಸ್ತಾಂತರದ ವಿಷಯವಾಗಿದೆ. ಹಾಗಾಗಿ, ಇದು ಬಾಕಿ ಉಳಿದಿರುವ ಕಾರಣದಿಂದಲೇ ನಾವು ಯಾವುದೇ ನಿರ್ದಿಷ್ಟ ಪ್ರತಿಕ್ರಿಯೆ ನೀಡಲು ಹೋಗಿಲ್ಲ. ಹಸ್ತಾಂತರದ ವಿಷಯದಲ್ಲಿ ಅಗತ್ಯವಿರುವ ನಿರ್ದಿಷ್ಟ ಕ್ರಮಗಳನ್ನು ನ್ಯಾಯಾಂಗ ಇಲಾಖೆ ನಿರ್ವಹಣೆ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ವೇದಾಂತ್ ಪಟೇಲ್ ತಿಳಿಸಿದರು. ಪ್ರಪಂಚದಾದ್ಯಂತದ ಭಯೋತ್ಪಾದನೆಯನ್ನು ಎದುರಿಸಲು ಅಮೆರಿಕ ಬದ್ಧವಾಗಿದೆ ಎಂದು ಅವರು ಹೇಳಿದರು.
ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಬದ್ಧ: ವಿಶ್ವಾದ್ಯಂತ ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಬದ್ಧರಾಗಿದ್ದೇವೆ. 2008ರ ಮುಂಬೈ ದಾಳಿಯಲ್ಲಿ ಭಾಗಿಯಾಗಿರುವವರನ್ನು ನ್ಯಾಯಾಂಗದ ಮುಂದೆ ತರಲು ನಾವು ಕರೆ ನೀಡುತ್ತೇವೆ ಎಂದು ವೇದಾಂತ್ ಪಟೇಲ್ ಹೇಳಿದರು. ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಆರೋಪಿ ತಹವ್ವುರ್ ರಾಣಾ ಶೀಘ್ರದಲ್ಲೇ ಭಾರತೀಯ ನ್ಯಾಯಾಂಗ ವಿಚಾರಣೆಯನ್ನು ಎದುರಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಮೇ ತಿಂಗಳ ಆರಂಭದಲ್ಲಿ, ಭಾರತಕ್ಕೆ ಬಂದಿದ್ದ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಕೂಡಾ, ಅಮೆರಿಕದ ನ್ಯಾಯಾಲಯವು ತಹವ್ವುರ್ ರಾಣಾನನ್ನು ಹಸ್ತಾಂತರಿಸಬೇಕೆಂದು ಆದೇಶವನ್ನು ನೀಡಿದೆ ಎಂದು ಹೇಳಿದ್ದರು. ಭಯೋತ್ಪಾದಕರನ್ನು ನ್ಯಾಯಾಂಗದ ಮುಂದೆ ತರಲು ಎರಡೂ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವುದು ಒಂದು ರೀತಿಯ ಸಹಯೋಗ ಮತ್ತು ಸಹಕಾರವಾಗಿದೆ. ಈ ಪ್ರಕ್ರಿಯೆ ನಿಲ್ಲುವುದಿಲ್ಲ ಎಂದು ಅವರು ಹೇಳಿದರು.
ಮುಂಬೈ ದಾಳಿಯಲ್ಲಿ 10 ಪಾಕಿಸ್ತಾನಿ ಭಯೋತ್ಪಾದಕರು 60 ಗಂಟೆಗಳಿಗೂ ಹೆಚ್ಚು ಕಾಲ ಮುತ್ತಿಗೆ ಹಾಕಿದ್ದರು. ಆರು ಅಮೆರಿಕನ್ನರು ಸೇರಿದಂತೆ 160ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದ್ದರು. ಹಲವರನ್ನು ಹತ್ಯೆ ಮಾಡಿದ್ದರು. ಮುಂಬೈ ದಾಳಿಯಲ್ಲಿನ ಪಾತ್ರಕ್ಕಾಗಿ ಭಾರತದ ಹಸ್ತಾಂತರ ಕೋರಿಕೆಯ ಮೇರೆಗೆ ರಾಣಾ ಅವರನ್ನು ಅಮೆರಿಕದಲ್ಲಿ ಬಂಧಿಸಲಾಯಿತು. ರಾಣಾ ತನ್ನ ಬಾಲ್ಯದ ಗೆಳೆಯ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ಪಾಕಿಸ್ತಾನಿ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾಗೆ ಭಯೋತ್ಪಾದಕ ದಾಳಿಗಳನ್ನು ಸಂಘಟಿಸಲು ಸಹಾಯ ಮಾಡಲು ಸಂಚು ರೂಪಿಸಿದ್ದ ಎಂದು ಭಾರತೀಯ ಅಧಿಕಾರಿಗಳು ಆರೋಪಿಸಿದ್ದಾರೆ.
ಹೆಡ್ಲಿ ಮತ್ತು ರಾಣಾ ಪಾಕಿಸ್ತಾನದ ಮಿಲಿಟರಿ ಹೈಸ್ಕೂಲ್‌ನಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದರು. ಶಿಕಾಗೋದಲ್ಲಿನ ವಲಸೆ ಕಾನೂನು ಕೇಂದ್ರ ಹಾಗೂ ಮುಂಬೈನಲ್ಲಿರುವ ಉಪಗ್ರಹ ಕಚೇರಿಯನ್ನು 2006 ಮತ್ತು 2008ರ ನಡುವೆ ರಾಣಾ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಕೆ ಮಾಡಲಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳುತ್ತಾರೆ. 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹೆಡ್ಲಿ ತಪ್ಪೊಪ್ಪಿಕೊಂಡಿದ್ದು, ರಾಣಾ ವಿರುದ್ಧ ಸಾಕ್ಷಿ ಹೇಳಿದ್ದ. ಆರೋಪಿ ರಾಣಾನನ್ನು ಚಿಕಾಗೋ ಫೆಡರಲ್ ನ್ಯಾಯಾಲಯವು ಮುಂಬೈ ಹತ್ಯಾಕಾಂಡದ ಆರೋಪಗಳಿಂದ ಖುಲಾಸೆಗೊಳಿಸಿತ್ತು ಎಂದು ತಿಳಿಸಿದರು.
ಹೇಬಿಯಸ್ ಕಾರ್ಪಸ್ ರಿಟ್‌ಗಾಗಿ ರಾಣಾ ಸಲ್ಲಿದ್ದ ಅರ್ಜಿ ತಿರಸ್ಕೃತ: ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ರಿಟ್ ಅನ್ನು ಯುಎಸ್ ನ್ಯಾಯಾಲಯ ನಿರಾಕರಿಸಿದೆ. ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಪ್ರಮಾಣೀಕರಣವನ್ನು ನೀಡಲು ದಾರಿ ಮಾಡಿಕೊಟ್ಟಿದೆ. 26/11 ಮುಂಬೈ ದಾಳಿಯ ಅಪರಾಧಿಗಳನ್ನು ನ್ಯಾಯಾಂಗದ ಎದುರು ಕರೆ ತರುವಲ್ಲಿ ಭಾರತದ ಹೋರಾಟಕ್ಕೆ ವಿಜಯವಾಗಿದೆ. ಯುಎಸ್ ನ್ಯಾಯಾಲಯವು 62 ವರ್ಷದ ರಾಣಾ ಅವರನ್ನು ಮೇ ತಿಂಗಳಲ್ಲಿ ಭಾರತಕ್ಕೆ ಹಸ್ತಾಂತರಿಸಲು ಅನುಮೋದಿಸಿತು.
ಈ ವರ್ಷದ ಜೂನ್‌ನಲ್ಲಿ, ಪ್ರಸ್ತುತ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಡಿಟೆನ್ಶನ್ ಸೆಂಟರ್‌ನಲ್ಲಿ ಬಂಧಿತರಾಗಿದ್ದ ತಹವ್ವುರ್ ರಾಣಾ, 2008ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿಗಳನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂಬ ಯುಎಸ್ ಸರ್ಕಾರದ ಕೋರಿಕೆಗೆ ಸಮ್ಮತಿಸಿದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೇಬಿಯಸ್ ಕಾರ್ಪಸ್ ರಿಟ್ ಅನ್ನು ಸಲ್ಲಿಸಿದರು. ಪ್ರತ್ಯೇಕ ಆದೇಶದ ಮೂಲಕ ಹೇಬಿಯಸ್ ಕಾರ್ಪಸ್ ರಿಟ್‌ಗಾಗಿ ತಹವ್ವುರ್ ರಾಣಾ ಅವರ ಅರ್ಜಿಯನ್ನು ನ್ಯಾಯಾಲಯವು ನಿರಾಕರಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ನ ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್ನ ನ್ಯಾಯಾಧೀಶ ಡೇಲ್ ಎಸ್ ಫಿಶರ್ ಅವರು, ಆಗಸ್ಟ್ 10ರಂದು ಆದೇಶ ನೀಡಿದ್ದರು.
ಇದನ್ನೂ ಓದಿ: ಯಾಸಿನ್ ಮಲಿಕ್ ಪತ್ನಿ ಪಾಕ್ ಹಂಗಾಮಿ ಪ್ರಧಾನಿಯ ಸಲಹೆಗಾರ್ತಿ