ವಿಶ್ವಸಂಸ್ಥೆ: ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕುವುದು ವಿಶ್ವದ ತಕ್ಷಣದ ಆದ್ಯತೆಯಾಗಬೇಕಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸುವುದು ಭಾರತದ ನೇರ ಹಿತಾಸಕ್ತಿಯಾಗಿದೆ ಎಂದು ಅವರು ಬುಧವಾರ ಭದ್ರತಾ ಮಂಡಳಿಗೆ ತಿಳಿಸಿದರು.
ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಭಾರತದ ಸಾಮಾನ್ಯ ಮತ್ತು ತಕ್ಷಣದ ಆದ್ಯತೆಗಳನ್ನು ಪಟ್ಟಿ ಮಾಡಿದ ಅವರು ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಯನ್ನು ತಡೆಗಟ್ಟುವುದು ಮತ್ತು ಅಂತರ್ಗತ ಸರ್ಕಾರವನ್ನು ರಚಿಸುವ ವಿಷಯಗಳು ಆದ್ಯತೆಯ ವಿಷಯಗಳಾಗಿವೆ ಎಂದರು. ಪ್ರವಾಹ, ಭೂಕಂಪ ಮತ್ತು ನಿರಾಶ್ರಿತರ ಆಗಮನದಿಂದ ತತ್ತರಿಸಿರುವ ದೇಶದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ಗಮನ ಸೆಳೆದ ಅವರು, ಆಫ್ಘನ್ ಜನರಿಗೆ ನೆರವು ನೀಡುವುದು ಅಗತ್ಯವಾಗಿದೆ ಎಂದರು.
"ಭಾರತವು ಅಫ್ಘಾನಿಸ್ತಾನಕ್ಕೆ ಭೌತಿಕ ಮಾನವೀಯ ಸಹಾಯವನ್ನು ನೀಡಿದೆ ಮತ್ತು ಅಫ್ಘಾನ್ ವಿದ್ಯಾರ್ಥಿಗಳಿಗೆ ತನ್ನ ಶೈಕ್ಷಣಿಕ ವಿದ್ಯಾರ್ಥಿವೇತನವನ್ನು ಮುಂದುವರಿಸಿದೆ. ಮಾನವೀಯ ನೆರವಿನ ಪ್ರಯತ್ನಗಳಲ್ಲಿ ನಾವು ಯುಎನ್ಡಬ್ಲ್ಯೂಎಫ್ಪಿ (ವಿಶ್ವ ಆಹಾರ ಕಾರ್ಯಕ್ರಮ) ಮತ್ತು ಯುಎನ್ಒಡಿಸಿ (ಮಾದಕವಸ್ತು ಮತ್ತು ಅಪರಾಧ ತಡೆ ಕಚೇರಿ) ಸೇರಿದಂತೆ ವಿವಿಧ ಯುಎನ್ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ" ಎಂದು ಹೇಳಿದರು.
ಅಫ್ಘಾನಿಸ್ತಾನದ ಜನರ ಅನುಕೂಲಕ್ಕಾಗಿ ನಮ್ಮ ಮಾನವೀಯ ನೆರವು ಮುಂದುವರಿಯುತ್ತದೆ ಎಂದು ಅವರು ತಿಳಿಸಿದರು. ಭಾರತವನ್ನು ಅಫ್ಘಾನಿಸ್ತಾನದ ಪಕ್ಕದ ನೆರೆಹೊರೆ ಎಂದು ಬಣ್ಣಿಸುವ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೇರಿದಂತೆ ಇಡೀ ಕಾಶ್ಮೀರವು ಭಾರತದ ಭಾಗವಾಗಿದೆ ಎಂದು ಕಾಂಬೋಜ್ ಪುನರುಚ್ಚರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿನೀವಾದಲ್ಲಿನ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್ಎ) ಮುಖ್ಯಸ್ಥ ರಮೇಶ್ ರಾಜಸಿಂಘಮ್, ಅಫ್ಘಾನಿಸ್ತಾನದ ಜನರಿಗೆ ಹಿಂದೆಂದಿಗಿಂತಲೂ ಹೆಚ್ಚು ಈಗ ನೆರವಿನ ಅಗತ್ಯವಿದೆ ಎಂದರು. ಪೂರ್ವ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ಹಿಂದಿರುಗುವ ಆಫ್ಘನ್ನರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಪಾಕಿಸ್ತಾನವು ತನ್ನ ದೇಶದಲ್ಲಿ ವಾಸಿಸುತ್ತಿದ್ದ 1 ಮಿಲಿಯನ್ ಅಫ್ಘಾನ್ ನಿರಾಶ್ರಿತರಿಗೆ ದೇಶ ತೊರೆಯುವಂತೆ ಆದೇಶಿಸಿದೆ. ಹೀಗಾಗಿ ಪಾಕಿಸ್ತಾನದಿಂದ 4,50,000 ಕ್ಕೂ ಹೆಚ್ಚು ಆಫ್ಘನ್ನರು ಮರಳಿದ್ದಾರೆ. ಅವರಲ್ಲಿ 85 ಪ್ರತಿಶತಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ : 'ತೆರಿಗೆ ಕಟ್ಟಬೇಡಿ, ಚುನಾವಣೆ ಬಹಿಷ್ಕರಿಸಿ': ಬಾಂಗ್ಲಾದೇಶ ಜನತೆಗೆ ಪ್ರತಿಪಕ್ಷ ಬಿಎನ್ಪಿ ಕರೆ