ನ್ಯೂಯಾರ್ಕ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಮಹಿಳೆಯರು ಒಂದೊಂದೇ ಹಕ್ಕನ್ನು ಕಳೆದುಕೊಳ್ಳುತ್ತಿದ್ದು, ಇದು ವಿಶ್ವವನ್ನೇ ಕಳವಳಕ್ಕೀಡು ಮಾಡಿದೆ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಸೇರಿದಂತೆ 6 ತರಗತಿಯ ನಂತರದ ಎಲ್ಲ ಶಾಲೆಗಳನ್ನು ಬಂದ್ ಮಾಡುವುದಾಗಿ ಅಲ್ಲಿನ ಮತಿಗೇಡಿ ಸರ್ಕಾರ ಹೇಳಿದ್ದು, ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ದೇಶೀಯ ಮತ್ತು ಅಂತಾರಾಷ್ಟ್ರೀಯ ಎನ್ಜಿಒಗಳಲ್ಲಿ ಮಹಿಳೆಯರು ಕೆಲಸ ಮಾಡುವುದನ್ನು ತಾಲಿಬಾನ್ ನಿಷೇಧಿಸಿ ಈಚೆಗೆ ಆದೇಶ ಹೊರಡಿಸಿತ್ತು. ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಳವಳ ವ್ಯಕ್ತಪಡಿಸಿತ್ತು. ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದು ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಮತ್ತು ಇದರ ಪರಿಣಾಮ ಭೀಕರವಾಗಿರುತ್ತದೆ ಎಂದು ಹೇಳಿದೆ.
ತಾಲಿಬಾನ್ ಸರ್ಕಾರದ ಈ ನಿರ್ಧಾರ ತೀವ್ರ ಆತಂಕಕಾರಿಯಾಗಿದೆ. ಮಹಿಳೆಯರಿಗೆ ವಿವಿಧ ನಿರ್ಬಂಧ ವಿಧಿಸುತ್ತಿರುವುದು ದೇಶದ ಹಿತರಕ್ಷಣೆಗೆ ಮಾರಕವಾಗಲಿದೆ. ಉದ್ಯೋಗ, ಶಿಕ್ಷಣ, ಸಾಮಾಜಿಕ ಸಮಾನತೆಯಿಂದ ಮಹಿಳೆಯರನ್ನು ದೂರ ಇಡುತ್ತಿರುವುದು ಗಾಬರಿ ಹುಟ್ಟಿಸುತ್ತಿದೆ. ಈ ಎಲ್ಲಾ ನಿರ್ಬಂಧಗಳನ್ನು ಸರ್ಕಾರ ಹಿಂಪಡೆಯಬೇಕು ಎಂದು ವಿಶ್ವಸಂಸ್ಥೆ ಹೇಳಿಕೆ ನೀಡಿದೆ.
ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಹೇರಲಾಗುತ್ತಿರುವ ನಿರ್ಬಂಧಗಳು ಮೂಲಭೂತ ಹಕ್ಕುಗಳ ಹರಣವಾಗಿದೆ. ಉನ್ನರ ಶಿಕ್ಷಣ ನಿರ್ಬಂಧದ ವಿರುದ್ಧ ಅಲ್ಲಿನ ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸಿ ರಸ್ತೆಗೆ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ಹತ್ತಿಕ್ಕಲು ಅಲ್ಲಿನ ಪಡೆಗಳು ಮಹಿಳೆಯರ ಮೇಲೆ ದಾಳಿ ಮಾಡಿ, ಹೀನಾಯವಾಗಿ ನಡೆಸಿಕೊಳ್ಳುತ್ತಿವೆ.
ತಾಲಿಬಾನ್ ಸರ್ಕಾರ ದೇಶೀಯ ಮತ್ತು ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್ಜಿಒ) ಮಹಿಳೆಯರು ಕೆಲಸ ಹೋಗುವುದನ್ನು ನಿಷೇಧಿಸಿದೆ. ಇದು ಭದ್ರತಾ ಮಂಡಳಿಯನ್ನು ಕಳವಳಗೊಳಿಸಿದೆ. ಮಾನವೀಯ ಹಕ್ಕುಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಇದು ವಿಶ್ವಸಂಸ್ಥೆ ಸೇರಿದಂತೆ ವಿವಿಧ ದೇಶಗಳು ಆ ದೇಶಕ್ಕೆ ನೀಡುತ್ತಿರುವ ನೆರವು, ಆರೋಗ್ಯ ಸೇವೆಗಳ ಮೇಲೆ ಸರ್ಕಾರದ ಈ ನಿರ್ಬಂಧಗಳು ಪರಿಣಾಮ ಬೀರುತ್ತವೆ. ಅಫ್ಘಾನ್ ಜನರಿಗೆ ತಾಲಿಬಾನ್ ನೀಡಿದ ವಾಗ್ದಾನದ ವಿರುದ್ಧವಾಗಿವೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿದೆ.
ಓದಿ: ಎನ್ಜಿಒ ಕೆಲಸ, ಮಸೀದಿ ಬೋಧನೆಯಲ್ಲಿ ಪಾಲ್ಗೊಳ್ಳಬೇಡಿ: ಮಹಿಳೆಯರಿಗೆ ತಾಲಿಬಾನ್ ನಿಷೇಧ