ಲಂಡನ್ : ಅಫ್ಘಾನಿಸ್ತಾನದಲ್ಲಿ ನಡೆದ ಯುದ್ಧದ ಸಮಯದಲ್ಲಿ ತನ್ನ ಮಿಲಿಟರಿ ಸಿಬ್ಬಂದಿಗೆ ಸಹಾಯ ಮಾಡಿ, ಸದ್ಯ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಅಫ್ಘಾನಿಸ್ತಾನ ನಾಗರಿಕರನ್ನು ತನ್ನ ದೇಶಕ್ಕೆ ಕರೆಸಿಕೊಳ್ಳಲು ಯುನೈಟೆಡ್ ಕಿಂಗ್ಡಮ್ ಮುಂದಾಗಿದೆ. ಯುದ್ಧದಲ್ಲಿ ಸಹಾಯ ಮಾಡಿದ ಅನೇಕರಿಗೆ ಬ್ರಿಟಿಷ್ ವೀಸಾ ನೀಡುವ ವಾಗ್ದಾನ ಮಾಡಲಾಗಿತ್ತು. ಅದರಂತೆ ಈಗ ಅವರೆಲ್ಲರಿಗೂ ವೀಸಾ ನೀಡಿ ವಿಶೇಷ ವಿಮಾನದ ಮೂಲಕ ಅವರನ್ನು ತನ್ನ ದೇಶಕ್ಕೆ ಕರೆಸಿಕೊಳ್ಳಲಿದೆ ಯುನೈಟೆಡ್ ಕಿಂಗ್ಡಮ್.
ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಅಫ್ಘಾನಿ ನಿರಾಶ್ರಿತರು ನವೆಂಬರ್ 1 ರ ಒಳಗೆ ದೇಶ ತೊರೆಯುವಂತೆ ಪಾಕಿಸ್ತಾನ ಸರ್ಕಾರ ಆದೇಶ ಹೊರಡಿಸಿದೆ. ಒಂದೊಮ್ಮೆ ದೇಶ ಬಿಡಲು ವಿಫಲವಾದರೆ ಅಂಥವರನ್ನು ಬಲವಂತವಾಗಿ ಗಡಿಯಿಂದ ಆಚೆ ಕಳುಹಿಸಲಾಗುವುದು ಎಂದು ಪಾಕ್ ಸರ್ಕಾರ ಎಚ್ಚರಿಕೆ ನೀಡಿದೆ.
ನೆರವಾದವರಿಗೆ ಆಶ್ರಯ: ಈ ಹಿನ್ನೆಲೆಯಲ್ಲಿ ಯುನೈಟೆಡ್ ಕಿಂಗ್ಡಮ್ ತನಗೆ ನೆರವಾದವರನ್ನು ಕರೆಸಿಕೊಳ್ಳುವ ಪ್ರಯತ್ನಗಳನ್ನು ಆರಂಭಿಸಿದೆ. ಅಫ್ಘಾನಿಸ್ತಾನ ಯುದ್ಧದ ಸಮಯದಲ್ಲಿ ಸಾವಿರಾರು ಅಫ್ಘಾನಿಗಳು ಬ್ರಿಟಿಷ್ ಸೇನೆಗಾಗಿ ಅನುವಾದಕರಾಗಿ, ಬ್ರಿಟಿಷ್ ಕೌನ್ಸಿಲ್ಗಳಲ್ಲಿ ಶಿಕ್ಷಕರಾಗಿ ಹಾಗೂ ಇನ್ನೂ ಹಲವಾರು ರೀತಿಯ ಕೆಲಸಗಳನ್ನು ಮಾಡಿದ್ದರು. ಇವರೆಲ್ಲರೂ ಈಗ ತಾಲಿಬಾನ್ನಿಂದ ರಕ್ಷಿಸಿಕೊಳ್ಳಲು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ.
ಯುಕೆಯ ಪುನರ್ವಸತಿ ಯೋಜನೆಯ ಪಟ್ಟಿಯಲ್ಲಿರುವ ಸುಮಾರು 3,250 ಪುರುಷರು, ಮಹಿಳೆಯರು ಮತ್ತು ಮಕ್ಕಳು ಇಸ್ಲಾಮಾಬಾದ್ನ ಅತಿಥಿ ಗೃಹಗಳು ಮತ್ತು ಹೋಟೆಲ್ಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಸರ್ಕಾರದ ಇತ್ತೀಚಿನ ಅಂಕಿ - ಅಂಶಗಳು ತಿಳಿಸಿವೆ. ಈ ನಿರಾಶ್ರಿತರು ಪಾಕಿಸ್ತಾನದಲ್ಲಿ ಕಾನೂನು ಬದ್ಧವಾಗಿ ಯಾವುದೇ ನೌಕರಿ ಮಾಡುವಂತಿಲ್ಲ. ಅಲ್ಲದೇ ಇವರ ಮಕ್ಕಳನ್ನು ಇಲ್ಲಿ ಶಾಲೆಗೆ ಕೂಡ ಸೇರಿಸಲಾಗುವುದಿಲ್ಲ.
ಸುರಕ್ಷಿತ ಸ್ಥಳಗಳಿಗೆ ರವಾನೆ: ಯುನೈಟೆಡ್ ಕಿಂಗ್ಡಮ್ ಅಫ್ಘಾನಿಸ್ತಾನದಿಂದ ಸುಮಾರು 24,600 ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಕ್ಟೋಬರ್ 3 ರಂದು ಪಾಕಿಸ್ತಾನದ ಮಧ್ಯಂತರ ಸರ್ಕಾರವು ಅಕ್ರಮ ವಲಸಿಗರಿಗೆ ದೇಶ ತೊರೆಯಲು 28 ದಿನಗಳ ಕಾಲಾವಕಾಶ ನೀಡುವುದಾಗಿ ಘೋಷಿಸಿತು. ಹಾಗೆ ಮಾಡದವರನ್ನು ನವೆಂಬರ್ 1 ರಿಂದ ಬಲವಂತವಾಗಿ ಗಡೀಪಾರು ಮಾಡಲಾಗುವುದು.
ಪಾಕಿಸ್ತಾನದ ಈ ಕ್ರಮದಿಂದ ಪಾಕಿಸ್ತಾನಕ್ಕೆ ಪಲಾಯನ ಮಾಡಿದ ಮತ್ತು ಔಪಚಾರಿಕ ನಿರಾಶ್ರಿತರ ಸ್ಥಾನಮಾನವನ್ನು ಪಡೆಯಲು ಸಾಧ್ಯವಾಗದ 1.73 ಮಿಲಿಯನ್ ಆಫ್ಘನ್ನರು ದೇಶ ತೊರೆಯುವುದು ಅನಿವಾರ್ಯವಾಗಲಿದೆ. ಗಡೀಪಾರು ಬೆದರಿಕೆಯನ್ನು ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಸರ್ಕಾರಗಳು ಖಂಡಿಸಿವೆ.
ಇದನ್ನೂ ಓದಿ : ಹಿಜ್ಬುಲ್ಲಾ-ಹಮಾಸ್-ಜಿಹಾದ್ ನಾಯಕರ ಸಭೆ; ಇಸ್ರೇಲ್ ವಿರುದ್ಧ ಮುಂದಿನ ಕ್ರಮದ ಚರ್ಚೆ