ಕೀವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಝೆಲೆನ್ಸ್ಕಿ ವಕ್ತಾರರಾದ ಸೆರ್ಹಿ ನೈಕಿಫೊರೊವ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಸೆರ್ಹಿ ನೈಕಿಫೊರೊವ್, ಉಕ್ರೇನ್ ಅಧ್ಯಕ್ಷರ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಉಕ್ರೇನಿಯನ್ ಮಾಧ್ಯಮ ಸಂಸ್ಥೆ 'ದಿ ಕೀವ್ ಇಂಡಿಪೆಂಡೆಂಟ್' ಸಹ ವರದಿ ಮಾಡಿದೆ. ಈ ಪ್ರಕಾರ, 'ಅಪಘಾತದ ನಂತರ ಝೆಲೆನ್ಸ್ಕಿ ಅವರನ್ನು ವೈದ್ಯರು ಪರೀಕ್ಷಿಸಿದ್ದು, ಗಂಭೀರವಾಗಿ ಗಾಯಗೊಂಡಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಜೊತೆಗೆ, ಝೆಲೆನ್ಸ್ಕಿ ಕಾರು ಚಾಲಕನಿಗೆ ಸಹ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಕೂಲಂಕಷವಾಗಿ ತನಿಖೆ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಯುದ್ಧದ ನಡುವೆ ಫೋಟೋಗೆ ಪೋಸ್ ನೀಡಿದ ಝೆಲೆನ್ಸ್ಕಿ ದಂಪತಿ; ಟೀಕೆಗೊಳಗಾದ ಉಕ್ರೇನ್ ಅಧ್ಯಕ್ಷ
ಇನ್ನೊಂದೆಡೆ, ರಷ್ಯಾ ಮತ್ತು ಉಕ್ರೇನ್ ನಡುವೆ ಕಳೆದ 6-7 ತಿಂಗಳುಗಳಿಂದ ಜಾರಿಯಲ್ಲಿರುವ ಯುದ್ಧ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಯುದ್ಧದಲ್ಲಿ ಉಕ್ರೇನ್ ಅಪಾರ ಪ್ರಮಾಣದ ಹಾನಿ ಅನುಭವಿಸಿದ್ದರೂ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಎದೆಗುಂದಿಲ್ಲ. ತಮ್ಮ ಸೇನೆಯೊಂದಿಗೆ ಹೋರಾಟ ಮುಂದುವರಿಸಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಉಕ್ರೇನಿಯನ್ ಪಡೆಗಳು ಆಯಕಟ್ಟಿನ ನಗರವಾದ ಇಜಿಯಂ ಪ್ರವೇಶಿಸಿದ್ದು, ಇದು ಗಮನಾರ್ಹವಾದ ಮಿಲಿಟರಿ ವಿಜಯಕ್ಕಿಂತ ಹೆಚ್ಚು. ಕಳೆದ ಆರು ತಿಂಗಳುಗಳಲ್ಲಿ ವಶಪಡಿಸಿಕೊಂಡ ಭೂಪ್ರದೇಶವನ್ನು ಹಿಡಿದಿಟ್ಟುಕೊಳ್ಳಲು ರಷ್ಯಾ ಪಡೆಗಳು ಹರಸಾಹಸ ಪಡುತ್ತಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಉಕ್ರೇನ್ ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾ ದಾಳಿ: ಕೀವ್ ಪಡೆಗಳಿಂದ ನಿರಂತರ ಹೋರಾಟ