ಕೀವ್: ರಣರಂಗವಾಗಿ ಮಾರ್ಪಟ್ಟಿರುವ ಉಕ್ರೇನ್‌ನಲ್ಲಿ ಈಗ ಸಾವಿರಾರೂ ಪ್ರೇಮ ಜೋಡಿಗಳು ಮದುವೆಯಾಗುತ್ತಿದ್ದಾರೆ. ರಷ್ಯಾದ ಯುದ್ಧದಿಂದ ಜೀವನವೇ ಬದಲಾಗುತ್ತಿದೆ. ಸಾವೋ - ಬದುಕೋ.. ಯಾವುದಾದರೂ ಸರಿ ಇದ್ದಷ್ಟು ದಿನ ಒಂದಾಗಿ ಬಾಳುವ ನಿರ್ಧಾರಕ್ಕೆ ಪ್ರೇಮಿಗಳು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಉಕ್ರೇನಿನ ರಾಜಧಾನಿ ಕೀವ್ನಲ್ಲಿಯೇ ಸುಮಾರು 4,000 ಜೋಡಿಗಳು ಪ್ರೇಮ ವಿವಾಹವಾಗಿದ್ದಾರೆ.
ಈ ಪ್ರೇಮವ ಈಗ ವಿಶ್ವದಾದ್ಯಂತ ಸಂಚಲನ ಮೂಡಿಸುತ್ತಿದೆ. ಕೆಲವು ಸೈನಿಕರು ಯುದ್ಧಕ್ಕೆ ಹೋಗುವ ಮೊದಲು ಮದುವೆಯಾಗುತ್ತಿರುವುದು ವಿಶೇಷ. ಇನ್ನು ಕೆಲವರು ಮುಂದೇನಾಗುತ್ತದೋ ಎಂಬ ಭಯದಿಂದ ಬೇಗನೇ ಮದುವೆಯಾಗಿದ್ದಾರೆ. ಕೆಲವು ದಿನಗಳ ಕಾಲ ಒಟ್ಟಿಗೆ ವಾಸಿಸುವ ಆಲೋಚನೆಯೊಂದಿಗೆ ಈ ಲವ್ಬರ್ಡ್ಸ್ಗಳು ಒಂದಾಗುತ್ತಿದ್ದಾರೆ.
ಎಲ್ಲವೂ ಕೂಡಿ ಬಂದರೆ... ನಮ್ಮ ಬದುಕನ್ನು ದಂಪತಿಯಾಗಿ ಮುಂದುವರಿಸುತ್ತೇವೆ. ಇಲ್ಲದಿದ್ದರೆ ಗಂಡ - ಹೆಂಡತಿಯರಾಗಿಯೇ ಸಾಯುತ್ತೇವೆ ಎಂದು ಉಕ್ರೇನಿಯನ್ ದಂಪತಿಗಳಾದ ಇಹೋರ್ ಜಕ್ವಾಟ್ಸಿಕ್ ಮತ್ತು ಕ್ಯಾಥರೀನ್ ಲೈಟ್ವಿನೆಂಕೊ ಹೇಳಿದರು. ಈ ಜೋಡಿ ಕೀವ್‌ನ ಚರ್ಚ್‌ವೊಂದರಲ್ಲಿ ಉಂಗುರ ಬದಲಿಸಿಕೊಳ್ಳುವ ಮೂಲಕ ಪ್ರೇಮ ವಿವಾಹವಾದರು.
ಓದಿ: ರಷ್ಯಾದೊಂದಿಗಿನ ತಂದೆಯ ಹೋರಾಟದ ನಡುವೆಯೂ ದೇಶಕ್ಕೆ ಪದಕ ಗೆದ್ದಕೊಟ್ಟ ಉಕ್ರೇನಿನ ಯುವ ಈಜು ಸ್ಪರ್ಧಿ!
ಯುದ್ಧದ ಹಿನ್ನೆಲೆ ಉಕ್ರೇನ್‌ನಲ್ಲಿ ಪ್ರಸ್ತುತ ಮಾರ್ಷಲ್ ಕಾನೂನು ಜಾರಿಯಲ್ಲಿದ್ದು, ಸೈನಿಕರು ಮತ್ತು ನಾಗರಿಕರ ವಿವಾಹಗಳನ್ನು ಅನುಮತಿಸಲಾಗಿದೆ. ಅರ್ಜಿ ಸಲ್ಲಿಸಿದ ದಿನದಂದೇ ಮದುವೆಯಾಗಲು ಇಲ್ಲಿನ ಆಡಳಿತ ಅವಕಾಶವನ್ನು ಒದಗಿಸಿದೆ. ಸಾಮಾನ್ಯ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗೆ ಮದುವೆ ನಡೆಯಬೇಕಿತ್ತು. ಯುದ್ಧ ಪ್ರಾರಂಭವಾದ 3 ತಿಂಗಳವರೆಗೆ ಮದುವೆ ನೋಂದಣಿಗಳು ನಡೆಯಲಿಲ್ಲ. ಇತ್ತೀಚೆಗೆ ಕೀವ್‌ನಲ್ಲಿ ಕೇಂದ್ರ ನಾಗರಿಕ ನೋಂದಣಿ ಸಂಪೂರ್ಣವಾಗಿ ಲಭ್ಯವಾಯಿತು.
ಏಪ್ರಿಲ್ನಲ್ಲಿ ರಷ್ಯಾ ಪಡೆಗಳು ಕೀವ್ ಪ್ರದೇಶದಿಂದ ಹಿಂದೆ ಸರಿದಾಗ ಎಗ್ಗಿಲ್ಲದೇ ಮದುವೆಗಳು ನಡೆಯುತ್ತಿವೆ. ಯುದ್ಧದ ಪರಿಣಾಮದಿಂದ ವಿವಿಧ ದೇಶಗಳಿಗೆ ಹೋದವರು ಈಗ ಉಕ್ರೇನ್‌ಗೆ ಮರಳುತ್ತಿದ್ದಾರೆ. ಅಷ್ಟೇ ಅಲ್ಲ ಹಲವಾರ ಜೋಡಿಗಳು ಹಾಗೆಯೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ವಿಶೇಷ. ‘ನಾಳೆ ಏನಾಗುತ್ತೋ ಗೊತ್ತಿಲ್ಲ. ಅದಕ್ಕಾಗಿಯೇ ನಾವು ಇಷ್ಟು ಬೇಗ ಮದುವೆಯಾಗುತ್ತಿದ್ದೇವೆ’ ಎಂಬುದು ನವ ವಿವಾಹಿತರ ಮಾತಾಗಿದೆ.
ಡೇರಿಯಾ ಪೊನೊಮಕೆರೆಂಕೊ 22 ವರ್ಷದ ನವವಿವಾಹಿತೆ ಯುದ್ಧದ ನಂತರ ಪೋಲೆಂಡ್ನಿಂದ ಕೀವ್ಗೆ ಮರಳಿದ್ದಾರೆ. ಇವರು ಕೀವ್ಗೆ ಬಂದ ಬಳಿಕ 23 ವರ್ಷದ ತಮ್ಮ ಗೆಳೆಯ ಯೆವ್ಗೆನಿ ನಲಿವೈಕೊ ಅವರನ್ನು ವರಿಸಿ ಉಕ್ರೇನ್‌ನಲ್ಲಿಯೇ ಉಳಿದುಕೊಂಡರು. ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ನಾವು ತಡಮಾಡದೇ ವಿವಾಹ ಮಾಡಿಕೊಂಡಿದ್ದೇವೆ ಎಂದು ಡೇರಿಯಾ ಹೇಳಿದರು.
ಓದಿ: ಬೆಲಾರಸ್ ಗಡಿಗೆ ರಷ್ಯಾ ಪರಮಾಣು ಕ್ಷಿಪಣಿ ರವಾನೆ.. ಲಿಥುವೇನಿಯಾ, ಉಕ್ರೇನ್‌ಗೆ ಕಾದಿದೆಯಾ ಗಂಡಾಂತರ?
ಇಂತಹ ಸಂದರ್ಭಗಳಲ್ಲಿ ಜನರು ಪ್ರಾಮಾಣಿಕರಾಗಿರುತ್ತಾರೆ. ಯಾವುದೇ ಸಮಸ್ಯೆಗಳ ಎದುರಾದರೂ ಸಹ ಜೀವನ ನಡೆಸಲೇಬೇಕಾಗಿದೆ ಎಂಬುದು 30ರ ಹರೆಯದ ಅನ್ನಾ ಕಾರ್ಪೆಂಕೊ ಅವರ ಮನದ ಮಾತು. ಇವರು ಏಳು ವರ್ಷಗಳಿಂದ ಸಹಬಾಳ್ವೆ ನಡೆಸುತ್ತಿದ್ದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಕೆಲವರು ಎರಡನೇ ಬಾರಿ ಮದುವೆಯಾಗುತ್ತಿದ್ದಾರೆ.
18 ವರ್ಷಗಳ ಹಿಂದೆ ವಿವಾಹವಾಗಿದ್ದ ಪಾವ್ಲೋ ಮತ್ತು ಒಕ್ಸಾನಾ ಸಾವ್ರಿಹಾ ಈಗ ಮರು ಮದುವೆಯಾಗಿರುವುದು ವಿಶೇಷ. ಒಟ್ಟಿನಲ್ಲಿ ಯುದ್ಧ ನಡುವೆ ಇಲ್ಲಿನ ನಾಗರಿಕರು ಮದುವೆಯಾಗಿ ಸ್ವಲ್ಪ ದಿನವಾದ್ರೂ ಸರಿ ತಮ್ಮ ನೆಚ್ಚಿನವರ ಜೊತೆ ಜೀವನ ಹಂಚಿಕೊಳ್ಳುವ ನಿರ್ಧಾರಕ್ಕೆ ಬಂದಿರುವುದು ವಿಶಿಷ್ಟವಾಗಿದೆ.