ನ್ಯೂಯಾರ್ಕ್ (ಯುಎಸ್): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕೆ ಇಂಗ್ಲೆಂಡ್, ಫ್ರಾನ್ಸ್ ಮತ್ತು ಅಮೆರಿಕ ಬೆಂಬಲ ನೀಡಿದ್ದರೆ, ಚೀನಾ ಮತ್ತು ರಷ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತವಲ್ಲದೇ, ಬ್ರೆಜಿಲ್, ಜರ್ಮನಿ, ಜಪಾನ್ಗೂ ಶಾಶ್ವತ ಸದಸ್ಯತ್ವ ನೀಡುವ ಬಗ್ಗೆ ಮೂರು ರಾಷ್ಟ್ರಗಳು ಒಪ್ಪಿಗೆ ನೀಡಿವೆ. ಇದಲ್ಲದೇ, ಯುನೈಟೆಡ್ ಅರಬ್ ಎಮಿರೇಟ್ಸ್ ಸಹ ಭಾರತದ ಪರವಾಗಿ ಮತ ಹಾಕಿದೆ.
ವಿಶ್ವಸಂಸ್ಥೆಯಲ್ಲಿ ಇಂಗ್ಲೆಂಡ್ನ ಖಾಯಂ ಪ್ರತಿನಿಧಿ ಡೇಮ್ ಬಾರ್ಬರಾ ವುಡ್‌ವರ್ಡ್ ಮಾತನಾಡಿ, ಭದ್ರತಾ ಮಂಡಳಿಯು ಪ್ರಪಂಚದ ಹೆಚ್ಚು ಪ್ರತಿನಿಧಿತ್ವ ಹೊಂದಬೇಕು. ಶಾಶ್ವತ ಮತ್ತು ಶಾಶ್ವತವಲ್ಲದ ದೇಶಗಳ ವಿಸ್ತರಣೆಗಾಗಿ ಈ ಹಿಂದಿನಿಂದಲೂ ಬೆಂಬಲಿಸುತ್ತ ಬಂದಿದೆ. ಹೀಗಾಗಿ ಖಾಯಂ ಸದಸ್ಯತ್ವಕ್ಕೆ ಬ್ರೆಜಿಲ್, ಜರ್ಮನಿ, ಭಾರತ ಮತ್ತು ಜಪಾನ್ ದೇಶಗಳಿಗೆ ಅವಕಾಶ ನೀಡಬೇಕು ಎಂದು ಹೇಳಿದರು.
ವಿಶ್ವದ ಶಕ್ತಿಯಾಗಿ ಹೊರಹೊಮ್ಮುವ ದೇಶಗಳು, ಭದ್ರತಾ ಮಂಡಳಿಯ ಜವಾಬ್ದಾರಿ ಹೊರುವುದಕ್ಕೆ ನಾವು ಬೆಂಬಲ ನೀಡುತ್ತೇವೆ. ಹೊಣೆಯನ್ನು ನಿಭಾಯಿಸುವುದಕ್ಕಾಗಿ ಮಂಡಳಿಯ ವಿಸ್ತರಣೆಗೆ ದೇಶ ಬೆಂಬಲ ನೀಡುತ್ತದೆ. ಜರ್ಮನಿ, ಬ್ರೆಜಿಲ್, ಭಾರತ ಮತ್ತು ಜಪಾನ್‌ನ ಖಾಯಂ ಸದಸ್ಯತ್ವದಕ್ಕೆ ನಮ್ಮ ಒಪ್ಪಿಗೆಯಿದೆ ಎಂದು ಅಮೆರಿಕದ ಖಾಯಂ ಪ್ರತಿನಿಧಿ ಹೇಳಿದರು.
ಏನಿದು ಭದ್ರತಾ ಮಂಡಳಿ: ವಿಶ್ವಸಂಸ್ಥೆಯ ಪ್ರಮುಖ ಅಂಗವಾಗಿರುವ ಭದ್ರತಾ ಮಂಡಳಿ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಪ್ರಮುಖ ಜಾಗತಿಕ ಸಂಸ್ಥೆಯಾಗಿದೆ. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ ಶಾಂತಿ ಕಾಪಾಡಲು ಅವುಗಳ ಮೇಲೆ ನಿರ್ಬಂಧ, ಹೊಣೆ ವಿಧಿಸುವ ವಿಶೇಷ(ವಿಟೋ) ಅಧಿಕಾರವನ್ನು ಈ ಮಂಡಳಿ ಹೊಂದಿದೆ.
ಕೌನ್ಸಿಲ್‌ನ 5 ಶಾಶ್ವತ ಮತ್ತು ಹತ್ತು ಚುನಾಯಿತ ಸದಸ್ಯರು ಅಂತರ್ಯುದ್ಧಗಳು, ನೈಸರ್ಗಿಕ ವಿಪತ್ತುಗಳು, ಶಸ್ತ್ರಾಸ್ತ್ರ ಸಾಗಣೆ ಮತ್ತು ಭಯೋತ್ಪಾದನೆ ಪಿಡುಗು ನಿರ್ಮೂಲನೆ ಸೇರಿದಂತೆ ಅಂತಾರಾಷ್ಟ್ರೀಯ ಭದ್ರತೆಗೆ ಇರುವ ಬೆದರಿಕೆಗಳನ್ನು ನಿಭಾಯಿಸಲು ನಿಯಮಿತವಾಗಿ ಸಭೆ ಸೇರಿ ನಿರ್ಣಯ ತೆಗೆದುಕೊಳ್ಳುತ್ತವೆ.
ಮಂಡಳಿಯು 1946 ರಲ್ಲಿ ಸ್ಥಾಪನೆಯಾದಾಗಿನಿಂದ ಈವರೆಗೂ ಯಾವುದೇ ಬದಲಾವಣೆ ಕಂಡಿಲ್ಲ. ಚೀನಾ, ಫ್ರಾನ್ಸ್, ರಷ್ಯಾ, ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳು ಮಾತ್ರ ಇದರಲ್ಲಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಪ್ರತಿವರ್ಷ 10 ಶಾಶ್ವತವಲ್ಲದ ಸದಸ್ಯ ರಾಷ್ಟ್ರಗಳು 2 ವರ್ಷಕ್ಕೆ ಅನುಗುಣವಾಗಿ ಇದಕ್ಕೆ ಆಯ್ಕೆಯಾಗುತ್ತವೆ.
ಭಾರತ ಇದುವರೆಗೆ ಎರಡು ವರ್ಷಗಳ ಕಾಯಂ ಸದಸ್ಯ ಸ್ಥಾನಕ್ಕೆ 8 ಅವಧಿಗೆ ಆಯ್ಕೆಯಾಗಿದೆ. ಅತಿ ದೊಡ್ಡ ಪ್ರಜಾಪ್ರಭುತ್ವ ಮತ್ತು ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದು, ಭದ್ರತಾ ಮಂಡಳಿ ಖಾಯಂ ಸದಸ್ಯತ್ವವನ್ನು ಪಡೆಯಲು ಅರ್ಹವಾಗಿದೆ. ಕಾಕತಾಳೀಯವಾಗಿ ಈ ವರ್ಷ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನವನ್ನು ಹೊಂದಿದೆ.
ಓದಿ: ಸಂಸತ್ತಿನ ಮೇಲೆ ದಾಳಿ, ಒಸಾಮಾ ಬಿನ್ ಲಾಡೆನ್‌ಗೆ ಆತಿಥ್ಯ ನೀಡಿದ್ದ ದೇಶವನ್ನು ನಂಬುವುದು ಕಷ್ಟ: ಜೈಶಂಕರ್