ವಾಶಿಂಗ್ಟನ್ (ಅಮೆರಿಕ) : ತಮ್ಮ ರಿಯಲ್ ಎಸ್ಟೇಟ್ ಉದ್ಯಮವನ್ನು ವಿಸ್ತರಿಸುವ ಪ್ರಕ್ರಿಯೆಯಲ್ಲಿ ಡೊನಾಲ್ಡ್ ಟ್ರಂಪ್ ಹಲವಾರು ವರ್ಷಗಳವರೆಗೆ ವಂಚನೆ ಎಸಗಿದ್ದಾರೆ ಎಂದು ಇಲ್ಲಿನ ನ್ಯಾಯಾಲಯವೊಂದು ಸೆಪ್ಟೆಂಬರ್ 26 ರಂದು ತೀರ್ಪು ನೀಡಿದೆ. ನ್ಯೂಯಾರ್ಕ್ನ ಅಟಾರ್ನಿ ಜನರಲ್ ಸಲ್ಲಿಸಿದ ಸಿವಿಲ್ ಮೊಕದ್ದಮೆಯ ವಿಚಾರಣೆ ನಡೆಸಿ ತೀರ್ಪು ನೀಡಿದ ನ್ಯಾಯಾಧೀಶ ಆರ್ಥರ್ ಎಂಗೊರೊನ್, ಮಾಜಿ ಅಧ್ಯಕ್ಷ ಟ್ರಂಪ್ ಮತ್ತು ಅವರ ಕಂಪನಿಯು ತಮ್ಮ ಆಸ್ತಿಗಳ ಬೆಲೆಗಳನ್ನು ಅತ್ಯಧಿಕ ಪ್ರಮಾಣದಲ್ಲಿ ನಮೂದಿಸುವ ಮೂಲಕ ಬ್ಯಾಂಕುಗಳು, ವಿಮಾದಾರರು ಮತ್ತು ಇತರರಿಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ವ್ಯವಹಾರಗಳನ್ನು ಕುದುರಿಸಲು ಮತ್ತು ಸಾಲ ಪಡೆಯಲು ಬಳಸಲಾದ ಕಾಗದ ಪತ್ರಗಳಲ್ಲಿ ತಮ್ಮ ಆಸ್ತಿಗಳ ಬೆಲೆಗಳನ್ನು ವಾಸ್ತವಕ್ಕಿಂತ ಅತಿಹೆಚ್ಚು ಪ್ರಮಾಣದಲ್ಲಿ ತೋರಿಸಿ ಹಾಗೂ ತಮ್ಮ ನಿವ್ವಳ ಸಂಪತ್ತನ್ನು ವಾಸ್ತವಕ್ಕಿಂತ ಹೆಚ್ಚು ತೋರಿಸಿ ಬ್ಯಾಂಕ್ಗಳು, ವಿಮಾ ಕಂಪನಿಗಳು ಮತ್ತು ಇತರರಿಗೆ ಟ್ರಂಪ್ ಮತ್ತು ಅವರ ಕಂಪನಿಗಳು ಮೋಸ ಮಾಡಿವೆ ಎಂದು ನ್ಯಾಯಾಧೀಶ ಆರ್ಥರ್ ಎಂಗೊರೊನ್ ಹೇಳಿದ್ದಾರೆ.
ಮಾಡಿದ ವಂಚನೆಗೆ ಶಿಕ್ಷೆಯಾಗಿ ಟ್ರಂಪ್ ಅವರ ಕೆಲ ವ್ಯಾಪಾರ ಪರವಾನಗಿಗಳನ್ನು ರದ್ದುಪಡಿಸುವಂತೆ ನ್ಯಾಯಾಧೀಶ ಎಂಗೊರೊನ್ ಆದೇಶಿಸಿದರು. ಮುಂದಿನ ದಿನಗಳಲ್ಲಿ ನ್ಯೂಯಾರ್ಕ್ನಲ್ಲಿ ಟ್ರಂಪ್ ಅವರ ಕಂಪನಿಗಳು ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗದಂತೆ ಮಾಡಲು ಈ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ಟ್ರಂಪ್ ಅವರ ಕಂಪನಿಗಳ ವ್ಯವಹಾರಗಳ ಬಗ್ಗೆ ಮೇಲ್ವಿಚಾರಣೆ ಮಾಡಲು ನೇಮಿಸಲಾದ ಸ್ವತಂತ್ರ ಮೇಲ್ವಿಚಾರಕರನ್ನು ಮುಂದುವರಿಸುವುದಾಗಿ ನ್ಯಾಯಾಧೀಶರು ತಿಳಿಸಿದರು.
ತೀರ್ಪಿನ ಬಗ್ಗೆ ಪ್ರತಿಕ್ರಿಯೆಗಾಗಿ ಮಾಡಿದ ಮನವಿಗೆ ಟ್ರಂಪ್ ವಕ್ತಾರರು ತಕ್ಷಣ ಪ್ರತಿಕ್ರಿಯಿಸಲಿಲ್ಲ. ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಟ್ರಂಪ್ ಬಹಳ ಹಿಂದಿನಿಂದಲೂ ವಾದಿಸುತ್ತಿದ್ದಾರೆ.
ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರು ದಾಖಲಿಸಿರುವ ಮೊಕದ್ದಮೆಯಲ್ಲಿ ತೀರ್ಪುಗಾರರಿಲ್ಲದೆ ವಿಚಾರಣೆ ನಡೆಯುವ ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ಈ ತೀರ್ಪು ಬಂದಿರುವುದು ಗಮನಾರ್ಹ. ಶ್ರೀಮಂತ ಮತ್ತು ಚಾಣಾಕ್ಷ ರಿಯಲ್ ಎಸ್ಟೇಟ್ ಉದ್ಯಮಿಯಾಗಿ, ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದ ಟ್ರಂಪ್ ಅವರ ಚಾಣಾಕ್ಷತನದ ಇಮೇಜ್ಗೆ ಈ ತೀರ್ಪಿನಿಂದ ಧಕ್ಕೆಯಾಗಿದೆ.
ಟ್ರಂಪ್, ಅವರ ಕಂಪನಿ ಮತ್ತು ಪ್ರಮುಖ ಕಾರ್ಯನಿರ್ವಾಹಕರು ತಮ್ಮ ವಾರ್ಷಿಕ ಹಣಕಾಸು ವರದಿಗಳಲ್ಲಿ ಪದೇ ಪದೇ ಸುಳ್ಳು ಹೇಳುವ ಮೂಲಕ ಸಾಲ ಪಡೆಯುವಾಗ ತಮಗೆ ಅನುಕೂಲ ಮಾಡಿಕೊಂಡಿದ್ದಾರೆ ಮತ್ತು ಕಡಿಮೆ ವಿಮಾ ಪ್ರೀಮಿಯಂಗಳಂಥ ಪ್ರತಿಫಲಗಳನ್ನು ಪಡೆದಿದ್ದಾರೆ ಎಂದು ನ್ಯಾಯಾಧೀಶ ಎಂಗೊರಾನ್ ಕಂಡುಕೊಂಡಿದ್ದಾರೆ.
ಇದನ್ನೂ ಓದಿ : ಬ್ಯಾಂಕ್ ಲಾಕರ್ನಲ್ಲಿನ 18 ಲಕ್ಷ ರೂ. ತಿಂದು ಹಾಕಿದ ಗೆದ್ದಲು; ಮಹಿಳೆ ಕಂಗಾಲು!