ಹೂಸ್ಟನ್ (ಅಮೆರಿಕ) : ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತ ಯುವತಿ ಸಾವನ್ನಪ್ಪಿದ್ದಾರೆ. ಟೆಕ್ಸಾಸ್‌ನ ಡಲ್ಲಾಸ್‌ನಿಂದ ಉತ್ತರಕ್ಕಿರುವ 25 ಕಿಲೋಮೀಟರ್ ದೂರದಲ್ಲಿರುವ ಅಲೆನ್ ಪ್ರೀಮಿಯರ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದು, ಇತರ ಏಳು ಮಂದಿ ಗಾಯಗೊಂಡಿದ್ದರು. ತೆಲಂಗಾಣದ ತಾಟಿಕೊಂಡ ಐಶ್ವರ್ಯಾ ಅವರೂ ಕೂಡ ಈ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಐಶ್ವರ್ಯಾ ಅವರ ತಂದೆ ನರಸಿರೆಡ್ಡಿ ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ಶಾಪಿಂಗ್ ಮಾಲ್ಗೆ ತೆರಳಿದ್ದಾಗ ಕಪ್ಪು ಕಾರಿನಲ್ಲಿ ಬಂದ ದುಷ್ಕರ್ಮಿ ಅಂಗಡಿಗಳ ಹೊರಗಿನಿಂದ ಗುಂಡಿನ ದಾಳಿ ನಡೆಸಿದ್ದ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ದಾಳಿಕೋರನ ಮೇಲೆ ಪ್ರತಿದಾಳಿ ನಡೆಸಿದ್ದರು.
ದಾಳಿಕೋರ ಗುಂಡು ಹಾರಿಸಿದ ನಂತರ ಸ್ವತಃ ಗುಂಡು ಹಾರಿಸಿಕೊಂಡಿದ್ದಾನೆಯೇ ಅಥವಾ ಪೊಲೀಸರ ಪ್ರತೀಕಾರದ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾನೆಯೇ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆರೋಪಿ ಸಾವನ್ನಪ್ಪಿದ ಬಳಿಕ ಸ್ಥಳಕ್ಕಾಗಮಿಸಿದ ಆ್ಯಂಬುಲೆನ್ಸ್ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು. ಗಾಯಾಳುಗಳು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.
ಟೆಕ್ಸಾಸ್‌ನ ಮಾಲ್‌ನಲ್ಲಿ ಗುಂಡಿನ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಗುಂಡಿನ ಚಕಮಕಿ ವೇಳೆ ನೂರಾರು ಜನರು ಓಡಿಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೆಲವರು ಹೆದರಿ ಅಲ್ಲೇ ಅಡಗಿಕೊಂಡಿದ್ದರು. ಪೊಲೀಸರು ಬಂದು ಸಂಪೂರ್ಣ ಅಂಗಡಿ ಸಂಕೀರ್ಣವನ್ನು ಪರಿಶೀಲಿಸಿದ ನಂತರ ಜನರು ತಮ್ಮ ಮನೆಗಳಿಗೆ ತೆರಳಿದ್ದರು. ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ದಾಳಿಕೋರ ಮೃತಪಟ್ಟಿರುವುದನ್ನು ಕಾಣಬಹುದು.
ಶನಿವಾರ ಮುಂಜಾನೆ ಶೂಟೌಟ್: ಟೆಕ್ಸಾಸ್ ದಾಳಿಗೂ ಮುನ್ನ ಮತ್ತೊಂದು ಗುಂಡಿನ ದಾಳಿಯ ಘಟನೆ ನಡೆದಿತ್ತು. ಉತ್ತರ ಕ್ಯಾಲಿಫೋರ್ನಿಯಾದ ಕಾಲೇಜ್ ಕ್ಯಾಂಪಸ್ ಬಳಿ ಅಪಾರ್ಟ್ಮೆಂಟ್ವೊಂದರಲ್ಲಿ ಶನಿವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ 17 ವರ್ಷದ ಬಾಲಕಿ ಸಾವನ್ನಪ್ಪಿ, ಐವರು ಗಾಯಗೊಂಡಿದ್ದರು. ಪೊಲೀಸ್ ಮುಖ್ಯಸ್ಥ ಬಿಲ್ಲಿ ಆಲ್ಡ್ರಿಡ್ಜ್ ಪ್ರತಿಕ್ರಿಯಿಸಿ, "ಮುಂಜಾನೆ 3.30ರ ಸುಮಾರಿಗೆ (ಸ್ಥಳೀಯ ಕಾಲಮಾನ) ಚಿಕೋದಲ್ಲಿನ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಆರು ಜನರ ಮೇಲೆ ಗುಂಡು ಹಾರಿಸಲಾಗಿದೆ. ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. 17 ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ" ಎಂದು ತಿಳಿಸಿದ್ದರು. 21 ಮತ್ತು 19 ವರ್ಷದ ಇಬ್ಬರು ಯುವಕರು ಮತ್ತು 17 ವರ್ಷದ ಬಾಲಕಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 18 ಮತ್ತು 20 ವರ್ಷದ ಇತರ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ ಎಂದು ಆಲ್ಡ್ರಿಡ್ಜ್ ಮಾಹಿತಿ ನೀಡಿದ್ದರು. ಗುಂಡಿನ ದಾಳಿ ಒಂದು ಪ್ರತ್ಯೇಕ ಘಟನೆಯಂತೆ ಕಂಡುಬಂದಿದೆ. ಸಮುದಾಯಕ್ಕೆ ಯಾವುದೇ ಬೆದರಿಕೆ ಇಲ್ಲ. ಶೂಟರ್ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: ಟೆಕ್ಸಾಸ್‌ನಲ್ಲಿ ಬಸ್ಗೆ ಕಾಯುತ್ತಿದ್ದ ಜನರ ಮೇಲೆ ನುಗ್ಗಿದ ಕಾರು: 7 ಸಾವು, 10 ಮಂದಿಗೆ ಗಾಯ