ಲೇಕ್ ಚಾರ್ಲ್ಸ್ (ಲೂಸಿಯಾನ): ಅಮೆರಿಕದ ಲೂಸಿಯಾನದಲ್ಲಿ ಆಘಾತಕಾರಿ ಘಟನೆ ಸಂಭವಿಸಿದೆ. ಲೇಕ್ ಚಾರ್ಲ್ಸ್ ಸಿಟಿಯಲ್ಲಿ ಗುಂಡು ಹಾರಿಸಲಾಗಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಹದಿಹರೆಯದವರ ಮೇಲೆ ಗುಂಡಿನ ದಾಳಿ: ಲೇಕ್ ಚಾರ್ಲ್ಸ್ ಸಿಟಿಯಲ್ಲಿ ನಡೆಯುತ್ತಿದ್ದ ಹೌಸ್ ಪಾರ್ಟಿಯಲ್ಲಿ ಆರು ಹದಿಹರೆಯದವರ ಮೇಲೆ ಗುಂಡು ಹಾರಿಸಲಾಗಿದೆ. ಆರು ಮಂದಿಯ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಗ್ನೇಯ ಲೂಸಿಯಾನ ಪಟ್ಟಣದ ಲೇಕ್ ಚಾರ್ಲ್ಸ್‌ನಲ್ಲಿರುವ ಮನೆಯೊಂದರಲ್ಲಿ ಶನಿವಾರ ಮಧ್ಯರಾತ್ರಿ ಗುಂಡಿನ ದಾಳಿ ನಡೆದಿದೆ. ಆ ಮನೆಯಲ್ಲಿ ಪಾರ್ಟಿ ನಡೆಯುತ್ತಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು (Calcasieu Parish sheriff's deputies ) ಪ್ರತಿಕ್ರಿಯಿಸಿದ್ದು, ನಾವು ಸ್ಥಳಕ್ಕೆ ತಲುಪಿದಾಗ ಗುಂಡಿನ ದಾಳಿಗೆ ಗಾಯಗೊಂಡ ಹದಿಹರೆಯದವರನ್ನು ಕಂಡುಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಗಲಾಟೆ ಬಳಿಕ ಗುಂಡಿನ ದಾಳಿ: ಗುಂಡಿನ ದಾಳಿಗೆ ಒಳಗಾದವರೆಲ್ಲರೂ 15 ರಿಂದ 19 ವರ್ಷದೊಳಗಿನವರು ಎಂದು ಜಿಲ್ಲಾಧಿಕಾರಿಗಳ ಕಚೇರಿ ಭಾನುವಾರದಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪಾರ್ಟಿ ಸಂದರ್ಭ ಹೊಡೆದಾಟ ನಡೆದಿದ್ದು, ಯಾರೋ ಒಬ್ಬರು ಬಂದೂಕು ಹೊರತೆಗೆದು ಗುಂಡು ಹಾರಿಸಲು ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಂಕಿತನನ್ನು ಗುರುತಿಸಲಾಗಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ.
ಪೋಷಕರು ಮಕ್ಕಳ ಮೇಲೆ ಕಣ್ಣಿಡುವಂತೆ ಒತ್ತಾಯ: ಅಧಿಕಾರಿ ಟಾನಿ ಮಂಕ್ಯೂಸೋ (Calcasieu Parish Sheriff Tony Mancuso) ಮಾತನಾಡಿ, ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು. ಜೊತೆಗೆ ಪೋಷಕರು ತಮ್ಮ ಮಕ್ಕಳ ಮೇಲೆ ಕಣ್ಣಿಡುವಂತೆ ಸೂಚಿಸಿದರು. ಗುಂಡಿನ ದಾಳಿ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಯುತ್ತಿದೆ. ನಾವು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ. ಸಾಕ್ಷಿದಾರರೊಂದಿಗೆ ಸಂಪರ್ಕದಲ್ಲಿದ್ದೇವೆ, ಅವರೊಂದಿಗೆ ಮಾತನಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳ ಸ್ಪೋಟ: ಚಿಕಿತ್ಸೆ ಫಲಕಾರಿಯಾಗದೇ 12ರ ಬಾಲಕಿ ಸಾವು. ಮೃತರ ಸಂಖ್ಯೆ 3ಕ್ಕೆ ಏರಿಕೆ
ಅಧಿಕಾರಿ ಕೊಟ್ಟ ಮಾಹಿತಿ: ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಪಾರ್ಟಿ ನಡೆಯುತ್ತಿತ್ತು. ಇದು ಹದಿಹರೆಯದವರಿಂದ ತುಂಬಿದ ಪಾರ್ಟಿ ಆಗಿತ್ತು. ಆದರೆ ಈ ವೆಪನ್ಸ್ (ಗನ್) ಮಕ್ಕಳ ಕೈಗೆ ಹೇಗೆ ಸಿಗುತ್ತಿವೆ ಎಂಬುದರ ಬಗ್ಗೆ ನಾವು ಮತ್ತೊಮ್ಮೆ ಆಲೋಚನೆ ಮಾಡಬೇಕಾಗಿದೆ. ಹದಿಹರೆಯದವರ ಹಿಂಸಾಚಾರವು ನಮ್ಮ ದೇಶದಲ್ಲಿ ಒಂದು ಸಮಸ್ಯೆ ಆಗಿದೆ. ಮಕ್ಕಳು ಹೇಗಿದ್ದಾರೆ? ಏನಾಗುತ್ತಿದ್ದಾರೆ? ಎಂಬುದನ್ನು ತಿಳಿದುಕೊಳ್ಳುವುದು ಪೋಷಕರಾದ ನಮ್ಮ ಕರ್ತವ್ಯ ಕೂಡ ಹೌದು. ಸದ್ಯ ಗಾಯಗೊಂಡ ಹದಿಹರೆಯದವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿ ಟಾನಿ ಮಂಕ್ಯೂಸೋ ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: ನಾಗರಹಾವು ಓಡಿಸಲು ಹಾಕಿದ ಹೊಗೆ ಆವರಿಸಿ ಹೊತ್ತಿ ಉರಿದ ಮನೆ.. ಎಲ್ಲ ಸರ್ವನಾಶ... ದಿಕ್ಕು ತೋಚದಾದ ಕುಟುಂಬ