ಇಸ್ಲಾಮಾಬಾದ್ : ಪಂಜಾಬ್ ಪ್ರಾಂತ್ಯದ ಚುನಾವಣೆ ನಡೆಸಲು ಹಣ ಬಿಡುಗಡೆ ಮಾಡುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಶುಕ್ರವಾರ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (ಎಸ್‌ಬಿಪಿ) ಗೆ ಆದೇಶ ನೀಡಿದ್ದು, ಫೆಡರಲ್ ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ (ಸಿಜೆಪಿ) ಉಮರ್ ಅತಾ ಬಂಡಿಯಲ್, ನ್ಯಾಯಮೂರ್ತಿ ಇಜಾಜ್ ಉಲ್ ಅಹ್ಸನ್ ಮತ್ತು ನ್ಯಾಯಮೂರ್ತಿ ಮುನಿಬ್ ಅಖ್ತರ್ ಅವರನ್ನೊಳಗೊಂಡ ತ್ರಿಸದಸ್ಯ ಸುಪ್ರೀಂ ಕೋರ್ಟ್ ಪೀಠವು ಚೇಂಬರ್ ವಿಚಾರಣೆಯ ನಂತರ ಈ ನಿರ್ದೇಶನಗಳನ್ನು ನೀಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಪಂಜಾಬ್ ಪ್ರಾಂತ್ಯದಲ್ಲಿ ಮೇ 14 ರಂದು ಚುನಾವಣೆ ನಡೆಸುವಂತೆ ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ (ECP) ಏಪ್ರಿಲ್ 4 ರಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಹಾಗೆಯೇ ಫೆಡರಲ್ ಸರ್ಕಾರವು ಏಪ್ರಿಲ್ 10 ರೊಳಗೆ ಚುನಾವಣಾ ಆಯೋಗಕ್ಕೆ 21 ಶತಕೋಟಿ ರೂ. ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಆದರೆ, ಇಸಿಪಿ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದು, ಫೆಡರಲ್ ಸರ್ಕಾರ ಚುನಾವಣೆಗೆ ಹಣ ನೀಡಿಲ್ಲ ಎಂದು ತಿಳಿಸಿದೆ. ನಂತರ ನ್ಯಾಯಾಲಯಕ್ಕೆ ಹಾಜರಾಗಿ ವಿಳಂಬದ ವಿವರಣೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
ಸಮನ್ಸ್‌ಗೆ ಅನುಗುಣವಾಗಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಡೆಪ್ಯೂಟಿ ಗವರ್ನರ್ ಸಿಮಾ ಕಾಮಿಲ್, ವಿಶೇಷ ಹಣಕಾಸು ಕಾರ್ಯದರ್ಶಿ, ಇಸಿಪಿ ಕಾರ್ಯದರ್ಶಿ ಒಮರ್ ಹಮೀದ್ ಮತ್ತು ಪಾಕಿಸ್ತಾನದ ಅಟಾರ್ನಿ ಜನರಲ್ (ಎಜಿಪಿ) ಮನ್ಸೂರ್ ಉಸ್ಮಾನ್ ಅವಾನ್ ಅವರು ಇಂದು ಪೀಠದ ಮುಂದೆ ಹಾಜರಾಗಿದ್ದರು. ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸದಿರುವ ಬಗ್ಗೆ ನ್ಯಾಯಾಧೀಶರು ಬೇಸರ ವ್ಯಕ್ತಪಡಿಸಿದ್ದಾರೆ ಮತ್ತು ಆದೇಶಗಳನ್ನು ಜಾರಿಗೊಳಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪಾಕಿಸ್ತಾನಕ್ಕೆ 1 ಶತಕೋಟಿ ಡಾಲರ್ ದ್ವಿಪಕ್ಷೀಯ ಹಣಕಾಸು ಬೆಂಬಲ ನೀಡುವುದಾಗಿ ಹೇಳಿದೆ. ಇದನ್ನು ಯುಎಇ ಅಂತರಾಷ್ಟ್ರೀಯ ಹಣಕಾಸು ನಿಧಿಗೆ (IMF) ದೃಢಪಡಿಸಿದೆ. ಸಾಲ ಮರುಪಾವತಿಯ ಸುಸ್ತಿದಾರನಾಗುವುದರಿಂದ ತಪ್ಪಿಸಿಕೊಳ್ಳಲು ಈ ಒಪ್ಪಂದವು ಪಾಕಿಸ್ತಾನಕ್ಕೆ ನಿರ್ಣಾಯಕವಾಗಿದೆ ಎಂದು ಪಾಕಿಸ್ತಾನಿ ಮಾಧ್ಯಮ ಹೇಳಿದೆ.
ಈ ಬಗ್ಗೆ ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಅವರು ಶುಕ್ರವಾರ ಟ್ವೀಟ್ ಮಾಡಿದ್ದು, IMF ಪ್ರೋಗ್ರಾಂ - 9 ನೇ ಪರಿಶೀಲನಾ ನವೀಕರಣ: ಯುಎಇ ಅಧಿಕಾರಿಗಳು ಪಾಕಿಸ್ತಾನಕ್ಕೆ ಒಂದು ಬಿಲಿಯನ್ ಯುಎಸ್ ಡಾಲರ್ ದ್ವಿಪಕ್ಷೀಯ ಬೆಂಬಲ ನೀಡುವುದಾಗಿ IMF ಗೆ ದೃಢಪಡಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಈಗ ಯುಎಇ ಅಧಿಕಾರಿಗಳಿಂದ ಹೇಳಲಾದ ಠೇವಣಿ ತೆಗೆದುಕೊಳ್ಳಲು ಅಗತ್ಯವಾದ ದಾಖಲಾತಿಗಳನ್ನು ತಯಾರಿಸುತ್ತಿದೆ ಎಂದು ಬರೆದಿದ್ದಾರೆ. ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನ ಇಂದು ಚೀನಾದಿಂದ ತನ್ನ ಕೊನೆಯ ಹಣಕಾಸು ಧನಸಹಾಯವನ್ನು ಸ್ವೀಕರಿಸಲಿದೆ ಎಂದು ಅವರು ಸ್ವಲ್ಪ ಸಮಯದ ನಂತರ ಮತ್ತೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಕ್ರಿಮಿನಲ್ ಮೊಕದ್ದಮೆ: ಮತ್ತೆ ನ್ಯೂಯಾರ್ಕ್ಗೆ ಬಂದಳಿದ ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್