ಖಾರ್ಟೂಮ್ (ಸುಡಾನ್) : ಸುಡಾನ್ ಸಶಸ್ತ್ರ ಪಡೆಗಳು (ಎಸ್‌ಎಎಫ್) ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವೆ ಏಪ್ರಿಲ್ 15 ರಿಂದ ಆರಂಭವಾಗಿರುವ ಹಿಂಸಾತ್ಮಕ ಸಂಘರ್ಷದ ನಂತರ ಸುಮಾರು 1.4 ಮಿಲಿಯನ್ ಜನ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ (OCHA) ಕಚೇರಿ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.
ಸುಡಾನ್‌ನಲ್ಲಿ 8,43,100 ಕ್ಕೂ ಹೆಚ್ಚು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಇಂಟರ್ ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ (IOM) ವರದಿಯಲ್ಲಿ ಬಹಿರಂಗವಾಗಿದೆ. ವೈಟ್ ನೈಲ್ (25.2 ಪ್ರತಿಶತ), ವೆಸ್ಟ್ ಡಾರ್ಫರ್ (18.6 ಪ್ರತಿಶತ) ಮತ್ತು ನೈಲ್ ನದಿ (13.8 ಪ್ರತಿಶತ) ಪ್ರದೇಶಗಳಲ್ಲಿನ ಜನ ಅತ್ಯಧಿಕ ಸಂಖ್ಯೆಯಲ್ಲಿ ಸ್ಥಳಾಂತರಗೊಂಡಿದ್ದಾರೆ.
ದೇಶದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡವರ ಪೈಕಿ ರಾಜಧಾನಿ ಖಾರ್ಟೂಮ್ನಿಂದ ಅತಿ ಹೆಚ್ಚು ಶೇ 72ರಷ್ಟು ಅಂದರೆ ಸುಮಾರು 6 ಲಕ್ಷ 50 ಸಾವಿರ ಜನ ಸ್ಥಳಾಂತರವಾಗಿದ್ದಾರೆ. ಇದರ ನಂತರ ಪಶ್ಚಿಮ ಡಾರ್ಫರ್ನಿಂದ ಶೇ 19, ದಕ್ಷಿಣ ಡಾರ್ಫರ್ನಿಂದ ಶೇ 5.6, ಉತ್ತರ ಡಾರ್ಫರ್ನಿಂದ ಶೇ 2.2, ಉತ್ತರ ಕೊರ್ಡೊಫಾನ್ನಿಂದ ಶೇ 1 ಮತ್ತು ಮಧ್ಯ ಡಾರ್ಫರ್ನಿಂದ ಶೇ 0.21 ರಷ್ಟು ಜನ ಸ್ಥಳಾಂತರವಾಗಿದ್ದಾರೆ.
ಜೊತೆಗೆ 248,000 ಕ್ಕೂ ಹೆಚ್ಚು ಜನರು ನೆರೆಯ ದೇಶಗಳಾದ ಮಧ್ಯ ಆಫ್ರಿಕಾದ ಗಣರಾಜ್ಯ, ಚಾಡ್, ಈಜಿಪ್ಟ್, ಇಥಿಯೋಪಿಯಾ ಮತ್ತು ದಕ್ಷಿಣ ಸುಡಾನ್ ಗಡಿ ದಾಟಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಮಿತಿ (UNHCR) ಹೇಳಿದೆ. OCHA ವರದಿಯ ಪ್ರಕಾರ ಲಕ್ಷಾಂತರ ಜನರು ಮೂಲಭೂತ ಆರೋಗ್ಯ ಸೇವೆಗಳು ಸಹ ಲಭ್ಯವಿಲ್ಲದೆ ಸಂಕಷ್ಟದಲ್ಲಿದ್ದಾರೆ.
ಆರೋಗ್ಯ ಸೇವೆ ನೀಡುವ ಆಸ್ಪತ್ರೆಗಳು ಸೇರಿದಂತೆ ವೈದ್ಯಕೀಯ ಕೇಂದ್ರಗಳ ಮೇಲೆ ಒಟ್ಟು 34 ದಾಳಿಗಳು ನಡೆದಿವೆ. ಇದರಲ್ಲಿ 21 ದಾಳಿಗಳಲ್ಲಿ ಆಸ್ಪತ್ರೆಗಳು ಹಾನಿಗೀಡಾಗಿವೆ. ಸಂಘರ್ಷ ಆರಂಭವಾದಾಗಿನಿಂದ 10 ಜನ ವೈದ್ಯಕೀಯ ಸಿಬ್ಬಂದಿಗೆ ಗಾಯಗಳಾಗಿವೆ. ಸಂಘರ್ಷದ ಪ್ರದೇಶಗಳಲ್ಲಿನ ಮುಖ್ಯ ಆಸ್ಪತ್ರೆಗಳ ಪೈಕಿ ಸುಮಾರು ಶೇ 67 ರಷ್ಟು (88 ರಲ್ಲಿ 59) ಆಸ್ಪತ್ರೆಗಳಲ್ಲಿ ಯಾವುದೇ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಕೇವಲ 29 ಆಸ್ಪತ್ರೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ಕಾರ್ಯನಿರ್ವಹಿಸುತ್ತಿವೆ. ಕೆಲವು ಪ್ರಥಮ ಚಿಕಿತ್ಸಾ ಸೇವೆಗಳನ್ನು ಮಾತ್ರ ಒದಗಿಸುತ್ತಿವೆ.
ಏತನ್ಮಧ್ಯೆ, ನ್ಯಾಲಾ ಬೋಧನಾ ಆಸ್ಪತ್ರೆ (ದಕ್ಷಿಣ ಡಾರ್ಫರ್), ಖಾರ್ಟೂಮ್‌ನ ಬಷೈರ್ ಆಸ್ಪತ್ರೆ ಮತ್ತು ಅಲ್ ಒಬೈದ್‌ನ ದಮಾನ್ ಆಸ್ಪತ್ರೆ (ಉತ್ತರ ಕೊರ್ಡೋಫಾನ್) ಗಳಲ್ಲಿ ಆರೋಗ್ಯ ಸೇವೆಗಳನ್ನು ಪುನರಾರಂಭಿಸಲಾಗಿದೆ. ಏತನ್ಮಧ್ಯೆ, ಹಿಂಸಾತ್ಮಕ ಘರ್ಷಣೆಗಳಲ್ಲಿ ಕನಿಷ್ಠ 866 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 3,721 ಜನರು ಗಾಯಗೊಂಡಿದ್ದಾರೆ ಎಂದು ಸುಡಾನ್ ವೈದ್ಯರ ಸಿಂಡಿಕೇಟ್ ಭಾನುವಾರ ಬಿಡುಗಡೆ ಮಾಡಿದ ವರದಿ ಹೇಳಿದೆ.
ಸೌದಿ ಅರೇಬಿಯಾ ಮತ್ತು ಯುಎಸ್ ಮಧ್ಯಸ್ಥಿಕೆಯಲ್ಲಿ ಮೇ 22 ರಂದು ಪ್ರಾರಂಭವಾದ ಏಳು ದಿನಗಳ ಕದನ ವಿರಾಮಕ್ಕೆ ಎರಡೂ ಪಕ್ಷಗಳು ಒಪ್ಪಿಗೆ ನೀಡಿದ ಹೊರತಾಗಿಯೂ ದೇಶದಲ್ಲಿ, ವಿಶೇಷವಾಗಿ ರಾಜಧಾನಿ ಖಾರ್ಟೂಮ್‌ನಲ್ಲಿ ಹೋರಾಟ ಮುಂದುವರೆದಿದೆ. ಕದನ ವಿರಾಮ ಸೋಮವಾರ ಅಂತ್ಯಗೊಳ್ಳುವುದರೊಂದಿಗೆ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವ ಆತಂಕವಿದೆ.
ಇದನ್ನೂ ಓದಿ : ಇಮ್ರಾನ್ ವಿರುದ್ಧ ತಿರುಗಿಬಿದ್ದ ಪಾಕ್ ಮಿಲಿಟರಿ; ಅದಕ್ಕಿವೆ 3 ಕಾರಣ!