ರೋಮ್, ಇಟಲಿ: ಆರ್ಸೆನಲ್ ಫುಟ್ಬಾಲ್ ಆಟಗಾರ ಪ್ಯಾಬ್ಲೊ ಮಾರಿ ಸೇರಿದಂತೆ ಐದು ಜನರ ಮೇಲೆ ಮಿಲನ್‌ನ ಶಾಪಿಂಗ್ ಸೆಂಟರ್‌ನಲ್ಲಿ ಚಾಕುವಿನಿಂದ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಗಾಯಗೊಂಡ ಐವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುವಾರ ಸಂಜೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮಾಧ್ಯಮ ವರದಿಗಳ ಪ್ರಕಾರ, ಗುರುವಾರ ಸಂಜೆ 5.30ರ ಸುಮಾರಿಗೆ ಮಿಲನೊಫಿಯೊರಿ ಡಿ ಅಸ್ಸಾಗೊ ಶಾಪಿಂಗ್ ಸೆಂಟರ್‌ನಲ್ಲಿ ದಾಳಿ ಸಂಭವಿಸಿದೆ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವ 46 ವರ್ಷದ ವ್ಯಕ್ತಿ ಸೂಪರ್ ಮಾರ್ಕೆಟ್ ಕ್ಯಾರಿಫೋರ್ನಿಂದ ಚಾಕು ತೆಗೆದುಕೊಂಡು ನಂತರ ಮಾರಿ ಸೇರಿದಂತೆ ಗ್ರಾಹಕರ ಮೇಲೆ ಭಯಂಕರವಾಗಿ ದಾಳಿ ಮಾಡಿದ್ದಾನೆ.
ದಾಳಿಕೋರನನ್ನು ತಡೆಯಲು ಯತ್ನಿಸಿದ ವೇಳೆ ಆರು ಜನರಿಗೆ ಗಂಭೀರವಾಗಿ ಗಾಯಗಳಾಗಿವೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಉಳಿದ ಐವರು ಗಾಯಗೊಂಡಿದ್ದರು. ಸುದ್ದಿ ತಿಳಿದ ತಕ್ಷಣವೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ದಾಳಿಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಫುಟ್ಬಾಲ್ ಆಟಗಾರ ಮಾರಿ ಅವರ ಸ್ಥಿತಿ ಚೆನ್ನಾಗಿದೆ. ಆದರೆ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ದಾಳಿಕೋರರು ದಾಳಿ ಆರಂಭಿಸಿದಾಗ ನೂಕುನುಗ್ಗಲು ಉಂಟಾಗಿದೆ. ಮೊದಲಿಗೆ ನಮಗೆ ಏನೂ ಅರ್ಥವಾಗಲಿಲ್ಲ. ನಂತರ ಸ್ವಲ್ಪ ಸಮಯದ ನಂತರ ಶಾಪಿಂಗ್ ಸೆಂಟರ್‌ನಲ್ಲಿ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸುತ್ತಿರುವುದು ಗೊತ್ತಾಯಿತು. ಇದನ್ನು ಕೇಳಿ ನಮಗೆಲ್ಲ ಭಯವಾಯಿತು. ಜನರು ಓಡುವುದನ್ನು ನಾವು ನೋಡಿದ್ದೇವೆ ಎಂದು ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಫುಟ್ಬಾಲ್ ಆಟಗಾರ ಪ್ಯಾಬ್ಲೋ ಮಾರಿ ಮೇಲಿನ ದಾಳಿಗೆ ಸಂಬಂಧಿಸಿದಂತೆ ಆರ್ಸೆನಲ್ ಹೇಳಿಕೆಯನ್ನು ನೀಡಿದೆ. ಇಟಲಿಯಲ್ಲಿ ಚಾಕು ಇರಿತದ ಬಗ್ಗೆ ಭಯಾನಕ ಸುದ್ದಿಯನ್ನು ಕೇಳಿ ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ. ನಾವು ಪ್ಯಾಬ್ಲೋ ಕಾರ್ಯದರ್ಶಿ ಜೊತೆ ಮಾತನಾಡಿದ್ದೇವೆ. ಅವರ ಸ್ಥಿತಿ ಈಗ ಚೆನ್ನಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಚಿಕಿತ್ಸೆ ನಡೆಯುತ್ತಿದೆ. ಮೃತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಸಂತಾಪ ಸೂಚಿಸಿದರು.
ಓದಿ: ಪಂಜರದಿಂದ ಹೊರ ತೆಗೆಯುತ್ತಿದ್ದಂತೆ ತನ್ನ ಮಾಲೀಕನ ಮೇಲೆ ದಾಳಿ ಮಾಡಿದ ಹೆಬ್ಬಾವು: ವೈರಲ್ ವಿಡಿಯೋ