ಕೊಲಂಬೊ(ಶ್ರೀಲಂಕಾ): ದೇಶದ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ನೀಡುವಂತೆ ಆಗ್ರಹಿಸುತ್ತಿರುವ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಸರ್ಕಾರದ ದಮನ ಮತ್ತು ತುರ್ತು ಕಾನೂನುಗಳ ಬಳಕೆ ವಿರುದ್ಧ ದೇಶದ ನೂರಾರು ಮಂದಿ ಮಂಗಳವಾರ ರ್‍ಯಾಲಿ ನಡೆಸಿದರು. ಧಾರ್ಮಿಕ ಮತ್ತು ಟ್ರೇಡ್ ಯೂನಿಯನ್ ಮುಖಂಡರ ನೇತೃತ್ವದಲ್ಲಿ ಪ್ರತಿಭಟನಾಕಾರರು ಕೊಲಂಬೊದ ಸ್ವಾತಂತ್ರ್ಯ ಚೌಕಕ್ಕೆ ಮೆರವಣಿಗೆ ನಡೆಸಿದರು.
ತುರ್ತು ಕಾನೂನುಗಳನ್ನು ಹಿಂಪಡೆಯುವುದು, ಶಾಂತಿಯುತ ಪ್ರತಿಭಟನಾಕಾರರ ಬಂಧನವನ್ನು ನಿಲ್ಲಿಸುವುದು, ಸಂಸತ್ತನ್ನು ತಕ್ಷಣ ವಿಸರ್ಜನೆ ಮತ್ತು ಆರ್ಥಿಕ ಹೊರೆಯಿಂದ ಬಳಲುತ್ತಿರುವವರಿಗೆ ಪರಿಹಾರ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿದರು.
ದುರಾಡಳಿತವೇ ಬಿಕ್ಕಟ್ಟಿಗೆ ಕಾರಣ: ನಾಲ್ಕು ತಿಂಗಳ ನಿರಂತರ ಬೀದಿ ಪ್ರತಿಭಟನೆಗಳು ಕಳೆದ ತಿಂಗಳು ಪರಾಕಾಷ್ಠೆ ತಲುಪಿದ್ದವು. ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಸಿಂಗಾಪುರಕ್ಕೆ ಪಲಾಯನ ಮಾಡಿದ್ದರು. ಅವರ ಅಧಿಕೃತ ಮನೆಗೆ ನುಗ್ಗಿದ ಪ್ರತಿಭಟನಾಕಾರರು ಹಲವಾರು ಪ್ರಮುಖ ಸರ್ಕಾರಿ ಕಟ್ಟಡಗಳನ್ನು ಆಕ್ರಮಿಸಿಕೊಂಡ ನಂತರ ರಾಜೀನಾಮೆ ನೀಡಿದರು.
ಅವರ ಸಹೋದರ ಮಹಿಂದಾ ರಾಜಪಕ್ಸೆ ಅವರು ಮೇ ತಿಂಗಳಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಗಿಂತ ಮೊದಲು ಇತರ ನಾಲ್ವರು ಕುಟುಂಬದ ಸದಸ್ಯರು ಸಚಿವ ಸ್ಥಾನವನ್ನು ತ್ಯಜಿಸಿದ್ದರು. ರಾಜಪಕ್ಸೆ ಕುಟುಂಬ ದುರಾಡಳಿತ ಮತ್ತು ಭ್ರಷ್ಟಾಚಾರದ ಮೂಲಕ ದೇಶವನ್ನು ಬಿಕ್ಕಟ್ಟಿಗೆ ದೂಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾದ ನೂತನ ಪ್ರಧಾನಿಯಾಗಿ ಮಹಿಂದ ರಾಜಪಕ್ಸೆ ಪ್ರಮಾಣವಚನ