ಡೆಸ್ ಮೊಯಿನ್ಸ್/ಹಾಫ್ ಮೂನ್ ಬೇ (ಯುಎಸ್) : ಸೋಮವಾರ ದೇಶದಲ್ಲಿ ನಡೆದ ಪ್ರತ್ಯೇಕ ಮೂರು ಗುಂಡಿನ ದಾಳಿ ಪ್ರಕರಣಗಳಲ್ಲಿ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೋದ ಕರಾವಳಿ ಪ್ರದೇಶದಲ್ಲಿರುವ ಅಣಬೆ ಫಾರ್ಮ್ ಮತ್ತು ಟ್ರಕ್ಕಿಂಗ್ ಘಟಕದಲ್ಲಿ ಮೊದಲೆರಡು ಘಟನೆಗಳು ನಡೆದಿವೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಗೆ ಕಾರಣನಾದ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.
ಈ ಪೈಕಿ ನಾಲ್ವರು ಫಾರ್ಮ್‌ನಲ್ಲಿ ಹತ್ಯೆಯಾಗಿದ್ದು, ಇನ್ನು ಮೂವರು ಟ್ರಕ್ಕಿಂಗ್ ವ್ಯವಹಾರ ಮಾಡುವ ಹಾಫ್ ಮೂನ್ ಬೇ ಹೊರಭಾಗದ ಘಟಕದಲ್ಲಿ ಸಾವಿಗೀಡಾಗಿದ್ದಾರೆ. ಘಟನೆ ನಡೆದ ಈ ನಗರವು ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೋದಿಂದ ಅಂದಾಜು 48 ಕಿಮೀ ದೂರದಲ್ಲಿದೆ. ಈ ಎರಡೂ ಘಟನೆಗಳು ಹೇಗೆ ಒಂದಕ್ಕೊಂದು ಸಂಬಂಧ ಹೊಂದಿವೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ಇಬ್ಬರು ವಿದ್ಯಾರ್ಥಿಗಳು ಬಲಿ: ಅಯೋವಾ ರಾಜ್ಯದ ಡೆಸ್ ಮೊಯಿನ್ಸ್ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು ಇಬ್ಬರು ವಿದ್ಯಾರ್ಥಿಗಳು ಅಸುನೀಗಿದ್ದಾರೆ. ಈ ಘಟನೆಯೂ ಸೋಮವಾರ ನಡೆದಿದೆ. ಶಾಲೆಯ ಉದ್ಯೋಗಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಈಗಾಗಲೇ ಮೂವರು ಶಂಕಿತರನ್ನು ಬಂಧಿಸಿದ್ದಾರೆ.
ಇತ್ತೀಚಿನ ಘಟನೆ: ಕಳೆದ ಶನಿವಾರ ದಕ್ಷಿಣ ಕ್ಯಾಲಿಫೋರ್ನಿಯಾ ಬಾಲ್‌ರೂಂ ಡ್ಯಾನ್ಸ್ ಹಾಲ್‌ಗೆ ನುಗ್ಗಿದ ದುಷ್ಕರ್ಮಿಗಳು 11 ಮಂದಿಯನ್ನು ಗುಂಡು ಹಾರಿಸಿ ಅಮಾನವೀಯವಾಗಿ ಕೊಂದು ಹಾಕಿದ್ದರು. ಲಾಸ್ ಬಾಲ್ ರೂಂ ಡ್ಯಾನ್ಸ್ ಕ್ಲಬ್ನಲ್ಲಿ ಜನರು ಚೀನಿ ಚಂದ್ರನ ಹೊಸ ವರ್ಷ ಆಚರಣೆಗೆ ಸೇರಿದ್ದರು. ಈ ಸಂದರ್ಭದಲ್ಲಿ ನುಗ್ಗಿದ ದುಷ್ಕರ್ಮಿಗಳು ನೆರೆದಿದ್ದ ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದು, ಸ್ಥಳದಲ್ಲಿಯೇ ಹನ್ನೊಂದು ಜನರು ಸಾವಿಗೀಡಾಗಿದ್ದರು.
ಈ ಘಟನೆ ಕುರಿತು ಟ್ವೀಟ್ ಮಾಡಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಮೊಂಟೆರಿ ಪಾರ್ಕ್ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದವರು ಹಾಗು ಗಾಯಗೊಂಡವರಿಗೆ ನಾನು ಮತ್ತು ಜಿಲ್ (ಪತ್ನಿ) ಪ್ರಾರ್ಥಿಸುತ್ತೇವೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಸೆರೆಹಿಡಿದು ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಇದನ್ನೂ ಓದಿ: ಡ್ಯಾನ್ಸ್ ಕ್ಲಬ್ಗೆ ನುಗ್ಗಿ ಗುಂಡಿನ ಮಳೆಗರೆದ ಬಂದೂಕುಧಾರಿ.. 10 ಜನರ ಬರ್ಬರ ಕೊಲೆ