ಮಾಸ್ಕೋ(ರಷ್ಯಾ): ರಾಜಧಾನಿ ಮಾಸ್ಕೋ ನಗರವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಯತ್ನಿಸಿದ ಮೂರು ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಬುಧವಾರ ಹೇಳಿಕೊಂಡಿದೆ. ಆಗಸ್ಟ್ 23ರ ರಾತ್ರಿ, ಮಾಸ್ಕೋದ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಉಕ್ರೇನ್ ನಡೆಸಿದ ಮತ್ತೊಂದು ಪ್ರಯತ್ನವನ್ನು ವಾಯು ಪಡೆ ವಿಫಲಗೊಳಿಸಿತು. ಇದರಲ್ಲಿ ಮೂರು ವಿಮಾನ ಮಾದರಿಯ ಮಾನವರಹಿತ ವೈಮಾನಿಕ ವಾಹನಗಳು ಸೇರಿವೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
2 ಡ್ರೋನ್ಗಳು ಮಾಸ್ಕೋ ಪ್ರದೇಶದ ಮೊಝೈಸ್ಕಿ ಮತ್ತು ಖಿಮ್ಕಿನ್ಸ್ಕಿ ಜಿಲ್ಲೆಗಳ ಮೇಲೆ ದಾಳಿ ನಡೆಸಲು ಯತ್ನಿಸಿವೆ. ಆದರೆ, ವಾಯು ಪಡೆ ಅವುಗಳನ್ನು ನಾಶಪಡಿಸಿದೆ. ಆದರೆ, ಮೂರನೇ ಡ್ರೋನ್ ನಿಯಂತ್ರಣವನ್ನು ಕಳೆದುಕೊಂಡು ಮಾಸ್ಕೋ ಸಿಟಿ ಸಂಕೀರ್ಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಅಪ್ಪಳಿಸಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಅವರು ತಮ್ಮ ಟೆಲಿಗ್ರಾಮ್ ಪೋಸ್ಟ್ನಲ್ಲಿ ಮಾಸ್ಕೋ ಪ್ರದೇಶದ ಮೊಜೈಸ್ಕಿ ಜಿಲ್ಲೆಯ ಮೇಲೆ ಮಾನವರಹಿತ ವೈಮಾನಿಕ ವಾಹನವನ್ನು ವಾಯು ಪಡೆ ಹೊಡೆದುರುಳಿಸಿದೆ. ಮತ್ತೊಂದು ಡ್ರೋನ್ ಮಾಸ್ಕೋ ನಗರದ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಅಪ್ಪಳಿಸಿತು ಎಂದು ಅವರು ಹೇಳಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಕ್ಷಣಾ ತಂಡಗಳನ್ನು ಘಟನಾ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ಮೇಯರ್ ಸೋಬಯಾನಿನ್ ಹೇಳಿದರು.
ಇನ್ನು ಮಾಸ್ಕೋದ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು. ಇದಕ್ಕೂ ಮೊದಲು (ಸೋಮವಾರ), ಉಕ್ರೇನಿಯನ್ ಡ್ರೋನ್ ರಷ್ಯಾದ ಬೆಲ್ಗೊರೊಡ್ ಪ್ರದೇಶದ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. "ಯುಎವಿಗಳು ನಿಯಂತ್ರಣ ಕಳೆದುಕೊಂಡು ಕ್ರಿಮಿಯನ್ ಪೆನಿನ್ಸುಲಾದ ವಾಯುವ್ಯಕ್ಕೆ 40 ಕಿಮೀ (ಸುಮಾರು 25 ಮೈಲುಗಳು) ಕಪ್ಪು ಸಮುದ್ರದ ನೀರಿನ ಮೇಲೆ ಅಪ್ಪಳಿಸಿತು" ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿತ್ತು. ಉಕ್ರೇನ್ ನಿಶ್ಚಿತ-ವಿಂಗ್ ಡ್ರೋನ್‌ಗಳನ್ನು ಬಳಸಿತು. ಆದರೆ ಅದನ್ನು ರಷ್ಯಾದ ವಾಯು ಪಡೆ ಪತ್ತೆಹಚ್ಚಿ ಹೊಡೆದುರುಳಿಸಿತು ಎಂದು ಸಚಿವಾಲಯ ಹೇಳಿತ್ತು.
ರಷ್ಯಾದ ಬೆಲ್ಗೊರೊಡ್ ಪ್ರದೇಶದ ಮೇಲೆ ಎರಡು ಡ್ರೋನ್ ಮತ್ತು ಮಾಸ್ಕೋ ಪ್ರದೇಶದ ಮೇಲೆ ಎರಡು ಡ್ರೋನ್ ದಾಳಿಯನ್ನು ದೇಶದ ವಾಯು ಪಡೆ ಸೋಮವಾರ ತಡೆ ಹಿಡಿದಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಯಾವುದೇ ಸಾವು - ನೋವುಗಳು ವರದಿಯಾಗಿಲ್ಲ ಮತ್ತು ಕನಿಷ್ಠ ಹಾನಿಯಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿತ್ತು. ಈ ಮಧ್ಯೆ, ಭಾನುವಾರ ಉಕ್ರೇನಿಯನ್ ಡ್ರೋನ್ ರಷ್ಯಾದ ಕುರ್ಸ್ಕ್‌ನಲ್ಲಿರುವ ರೈಲ್ವೆ ನಿಲ್ದಾಣದ ಮೇಲ್ಛಾವಣಿಗೆ ಅಪ್ಪಳಿಸಿ ಐದು ಜನರು ಗಾಯಗೊಂಡಿದ್ದಾರೆ ಎಂದು ಕುರ್ಸ್ಕ್ ಪ್ರದೇಶದ ಗವರ್ನರ್ ರೋಮನ್ ಸ್ಟಾರೊವೊಯಿಟ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು.
ಇದನ್ನೂ ಓದಿ: ರಷ್ಯಾ ವಾಯುನೆಲೆ ಮೇಲೆ ಉಕ್ರೇನ್ ಡ್ರೋನ್ ದಾಳಿ; ವಿಮಾನಕ್ಕೆ ಹಾನಿ