ಮಾಸ್ಕೋ (ರಷ್ಯಾ): ''ಉಕ್ರೇನ್ ಜೊತೆಗೆ ರಷ್ಯಾ ಸಂಧಾನ ಮಾಡಿಕೊಳ್ಳಲು ಸಿದ್ಧವಿದೆೆ" ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಹೌದು, ಕ್ರೆಮ್ಲಿನ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ಗೆ ಭೇಟಿಯಾದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಉಕ್ರೇನ್ ಬಿಕ್ಕಟ್ಟು ಪರಿಹರಿಸುವ ಬಗ್ಗೆ ಮಾತುಕತೆ: ಚೀನಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ ವೇಳೆ ಉಕ್ರೇನ್ ಬಿಕ್ಕಟ್ಟನ್ನು ಪರಿಹರಿಸುವ ಯೋಜನೆಯ ಬಗ್ಗೆ ಪುಟಿನ್ ಮಾತನಾಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸುವ ಬಗ್ಗೆ ಫೆಬ್ರವರಿಯಲ್ಲಿ ಚೀನಾ ಹೇಳಿತ್ತು. ಈ ಯುದ್ಧವನ್ನು ಸ್ಥಗಿತಗೊಳಿಸಬೇಕು ಎಂದು ಯುಎಸ್ ಕೂಡಾ ಎಚ್ಚರಿಸಿತ್ತು ಎಂದು ಬಿಬಿಸಿ ವರದಿ ಮಾಡಿತ್ತು.
ಯುಎಸ್ ವಿದೇಶಾಂಗ ಕಾರ್ಯದರ್ಶಿ ಅಭಿಪ್ರಾಯವೇನು?: "ಯುದ್ಧವನ್ನು ಕೆಲವು ಷರತ್ತುಗಳ ಮೇಲೆ ನಿಲ್ಲಿಸಲು ಚೀನಾ ಅಥವಾ ಇತರ ಯಾವುದೇ ದೇಶದಿಂದ ಬೆಂಬಲಿತವಾಗಿರುವ ರಷ್ಯಾದ ಯಾವುದೇ ಯುದ್ಧತಂತ್ರದ ನಡೆಯಿಂದ ಜಗತ್ತು ಮೋಸ ಹೋಗಬಾರದು" ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆ್ಯಂಟೋನಿ ಬ್ಲಿಂಕೆನ್ ಅವರು ಹೇಳಿದ್ದಾರೆ.
ರಷ್ಯಾದ ಸುದ್ದಿ ಸಂಸ್ಥೆ ಆರ್‌ಐಎ ನೊವೊಸ್ಟಿ ಪ್ರಕಾರ, ರಷ್ಯಾ- ಚೀನಾ ಉಭಯ ನಾಯಕರ ನಡುವಿನ ಮಾತುಕತೆಯು ಸೋಮವಾರ ನಾಲ್ಕೂವರೆ ಗಂಟೆಗಳ ಕಾಲ ನಡೆದಿದೆ. ಮಂಗಳವಾರ ಮತ್ತಷ್ಟು ಔಪಚಾರಿಕ ಸಭೆಗಳು ನಡೆಯಲಿವೆ ಎಂದು ತಿಳಿಸಿದೆ. ಪುಟಿನ್ ಅವರನ್ನು ತಮ್ಮ "ಆತ್ಮೀಯ ಸ್ನೇಹಿತ" ಎಂದು ಕರೆದಿರುವ ಕ್ಸಿ ಜಿನ್‌ಪಿಂಗ್, ರಷ್ಯಾ ದೇಶವನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ರಷ್ಯಾ ದೇಶದ ಅಭಿವೃದ್ಧಿಯು "ಗಮನಾರ್ಹವಾಗಿ ಸುಧಾರಿಸಿದೆ" ಎಂದರು. ಇಬ್ಬರೂ ನಾಯಕರು ಉಕ್ರೇನ್ ವಿಷಯದ ಬಗ್ಗೆ ಆಳವಾದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಇಲ್ಲಿನ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಉಭಯ ನಾಯಕರ ಸಭೆಯಲ್ಲಿ ಅನೇಕ ವಿಚಾರಗಳ ಬಗ್ಗೆ ನಡೆದಿದೆ ಎಂದು ವಿವರಿಸಿದೆ.
ರಷ್ಯಾ- ಉಕ್ರೇನ್ ಯುದ್ಧಕ್ಕೆ ಒಂದು ವರ್ಷ: ಕಳೆದ ತಿಂಗಳು ಫೆ.24ರಂದು, ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿ ಒಂದು ವರುಷ ಕಳೆದಿದೆ. ಯುದ್ದ ನಡೆದು ಒಂದು ವರುಷ ತುಂಬಿದ ದಿನದ ಹಿನ್ನೆಲೆಯಲ್ಲಿ ಫೆ.25ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಷ್ಯಾ- ಉಕ್ರೇನ್ ಮುಖಾಮುಖಿಯಾಗಿದ್ದವು. ದಾಳಿಯಲ್ಲಿ ಸಾವನ್ನಪ್ಪಿದ್ದ ಸಾವಿರಾರು ಜನರಿಗೆ ಮೌನಚರಣೆ ಸಲ್ಲಿಸಲಾಗಿತ್ತು. ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ಅಧಿವೇಶನವು ಔಪಚಾರಿಕವಾಗಿ ಪ್ರಾರಂಭವಾಗುವ ಮೊದಲೇ ಈ ಎರಡು ರಾಷ್ಟ್ರಗಳು ಕಿತ್ತಾಡಿಕೊಂಡಿದ್ದವು. ಈ ಎರಡೂ ದೇಶಗಳು ಯುದ್ದದಲ್ಲಿ ಸಾವನ್ನಪ್ಪಿದವರಿಗೆ ಗೌರವ ಸಲ್ಲಿಸಲೂ ಕೂಡ ಜಗಳವಾಡಿಕೊಂಡದ್ದವು. ಇದರ ಮಧ್ಯೆ ರಷ್ಯಾ - ಉಕ್ರೇನ್ ನಡುವೆ ಶಾಂತಿ ಏರ್ಪಡಿಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು.
ಉಕ್ರೇನ್ ಅಧ್ಯಕ್ಷ ವೊಲೊಡಿಮ್ರಿ ಝೆಲೆನ್ಸ್ಕಿಯ ಶಾಂತಿ ಯೋಜನೆಯನ್ನು ಕಾರ್ಯಗತಗೊಳಿಸಲು ಎಲ್ಲಾ ದೇಶಗಳು ಪ್ರಯತ್ನಿಸಬೇಕು ಎಂದು ಉಕ್ರೇನ್ ಸಚಿವ ಡಿಮಿಟ್ರೋ ಕುಲೆಬಾ ಒತ್ತಾಯಿಸಿದ್ದರು. ಯುಎನ್ ಚಾರ್ಟರ್ ಅಗತ್ಯವಿರುವಂತೆ ತನ್ನ ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯಬೇಕೆಂದು ಒತ್ತಾಯಿಸುವ 141 ದೇಶಗಳ ಬೆಂಬಲದೊಂದಿಗೆ ಸಾಮಾನ್ಯ ಸಭೆಯ ನಿರ್ಣಯ ಅಂಗೀಕರಿಸಿತ್ತು. ಈ ನಿರ್ಣಯವು ಯುದ್ಧವನ್ನು ನಿಲ್ಲಿಸಲು ಮತ್ತು ಉಕ್ರೇನ್‌ನಿಂದ ಎಲ್ಲಾ ರಷ್ಯಾದ ಪಡೆಗಳನ್ನು ಹಿಂತೆಗೆದುಕೊಳ್ಳಲು ಕರೆ ನೀಡಲಾಗಿತ್ತು. ನಿರ್ಣಯವನ್ನು 15 ಕೌನ್ಸಿಲ್ ಸದಸ್ಯರಲ್ಲಿ 11 ಸದಸ್ಯರು ಬೆಂಬಲಿಸಿದ್ದರು. ಆದರೆ, ಆಗ ರಷ್ಯಾ ಅದನ್ನು ವಿರೋಧಿಸಿತ್ತು.
''ಬಂದೂಕುಗಳು ಈಗ ಮಾತನಾಡುತ್ತಿವೆ. ಆದರೆ, ಕೊನೆಯಲ್ಲಿ ಯುಎನ್ ಚಾರ್ಟರ್ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಶಾಂತಿ ರಾಜತಾಂತ್ರಿಕತೆ ಮತ್ತು ಹೊಣೆಗಾರಿಕೆಯ ಮಾರ್ಗವು ನ್ಯಾಯಯುತ ಮತ್ತು ಸುಸ್ಥಿರ ಶಾಂತಿಯ ಹಾದಿ ಎಂದು ನಮಗೆಲ್ಲರಿಗೂ ತಿಳಿದಿದೆ" ಎಂದು ಆಂಟೋನಿಯೊ ಗುಟೆರೆಸ್ ಹೇಳಿದ್ದರು.
ಇದನ್ನೂ ಓದಿ: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತಾವಾಸದ ಮೇಲೆ ಖಲಿಸ್ತಾನಿಗಳ ದಾಳಿ: ಅಮೆರಿಕ ಖಂಡನೆ