ಚೆರ್ನೋಬಿಲ್ (ಉಕ್ರೇನ್): ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾ ಪಡೆಗಳು ವಶಪಡಿಸಿಕೊಂಡಿವೆ. ರಷ್ಯಾದ ಈ ಆಕ್ರಮಣದ ಬಗ್ಗೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಹಾನಿಗೊಳಗಾದ ಅಣು ವಿದ್ಯುತ್ ಸ್ಥಾವರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಂಸ್ಥೆಯ ಡೈರೆಕ್ಟರ್ ಜನರಲ್ ರಾಫೆಲ್ ಮರಿಯಾನೊ ಗ್ರಾಸ್ಸಿ, ವಿಕಿರಣದ ಮಟ್ಟವು ಸಾಮಾನ್ಯವಾಗಿದ್ದರೂ, ಪರಿಸ್ಥಿತಿ ಇನ್ನೂ ಸ್ಥಿರವಾಗಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಪರಮಾಣು ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.
ನಾವು ಮಹಾ ವಿಪತ್ತಿಗೆ ತುಂಬಾ ಹತ್ತಿರವಾಗಿದ್ದೇವೆಯೇ ಎಂಬ ಬಗ್ಗೆ ನಮಗೆನೂ ತಿಳಿದಿಲ್ಲ, ಆದರೆ ಪರಿಸ್ಥಿತಿಯು ಸಂಪೂರ್ಣವಾಗಿ ಅಸಹಜವಾಗಿದೆ ಮತ್ತು ತುಂಬಾ ಅಪಾಯಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಪರಮಾಣು ಶಕ್ತಿಯ ಅಪಾಯವನ್ನು ಯಾರೊಬ್ಬರು ಅರಿತಿಲ್ಲ, ಈಗ ರಷ್ಯಾ ಉಕ್ರೇನ್‌ನ ಅಣುಸ್ಥಾವರವನ್ನು ವಶಕ್ಕೆ ಪಡೆಯುವ ಮೂಲಕ ಮಾನವೀಯತೆ ಮೇಲೆ ಪ್ರಹಾರ ಮಾಡುತ್ತಿದೆ ಇದು ದುರಂತ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಏಪ್ರಿಲ್ 26, 1986 ರಂದು, ಚೆರ್ನೋಬಿಲ್‌ನಲ್ಲಿ ನಡೆದಿದ್ದ ಸ್ಫೋಟದಿಂದಾಗಿ ವಿಕಿರಣಗಳು ವಾತಾವರಣಕ್ಕೆ ಸೇರಿದ್ದವು. ಇದು ಸೋವಿಯತ್ ಒಕ್ಕೂಟದ ಮಹಾ ವೈಫಲ್ಯ ಎನಿಸಿಕೊಂಡಿತ್ತು. ಲಕ್ಷಾಂತರ ಮಂದಿಯ ಬದುಕನ್ನು ಈ ದುರಂತ ಕಸಿದುಕೊಂಡಿತ್ತು. ರಷ್ಯಾ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯವು ಈ ಪ್ರದೇಶವನ್ನು ಸುರಕ್ಷಿತಗೊಳಿಸಲು ಹಲವು ಕೋಟಿಗಳನ್ನು ಖರ್ಚು ಮಾಡಿತ್ತು.
ಸದ್ಯ ರಷ್ಯಾ ಉಕ್ರೇನಿನ ಜಪೋರಿಝಿಯಾ ವಿದ್ಯುತ್ ಸ್ಥಾವರವನ್ನು ವಶಪಡಿಕೊಂಡಿದ್ದು, ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ರಷ್ಯಾವು ಅಣುಸ್ಥಾವರಗಳ ಮೇಲೆ ತನ್ನ ಹಿಡಿತ ಸಾಧಿಸುತ್ತಿರುವುದು ಅಪಾಯಕಾರಿ ಎಂದು ಹೇಳಲಾಗಿದೆ. ಯುದ್ಧದಿಂದಾಗಿ ಅಣು ವಿದ್ಯುತ್ ಸ್ಥಾವರದ ಮೇಲೆ ದಾಳಿ ನಡೆಯುವುದರಿಂದ ಹೆಚ್ಚಿನ ಅಪಾಯ ಉಂಟಾಗಲಿದೆ ಎಂದು ಪರಮಾಣು ಮುಖ್ಯಸ್ಥ ಗ್ರಾಸ್ಸಿ ಹೇಳಿದ್ದಾರೆ.
ಓದಿ : ಉಕ್ರೇನ್ 3ನೇ ಮಹಾಯುದ್ಧವನ್ನು ಪ್ರಚೋದಿಸುತ್ತಿದೆ: ರಷ್ಯಾ ಎಚ್ಚರಿಕೆ