ಮಾಸ್ಕೋ: ರಷ್ಯಾದ ಆಂತರಿಕ ವ್ಯವಹಾರಗಳ ಸಚಿವಾಲಯವು ಮೆಟಾ ವಕ್ತಾರ ಆಂಡಿ ಸ್ಟೋನ್ ಅವರನ್ನು ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ತನ್ನ ಮೋಸ್ಟ್ ವಾಂಟೆಡ್ ಲಿಸ್ಟ್ ಗೆ ಸೇರಿಸಿದೆ. ಆಂಡಿ ಸ್ಟೋನ್ ರಷ್ಯಾ ಒಕ್ಕೂಟದ ಕ್ರಿಮಿನಲ್ ಕೋಡ್ ಅನುಚ್ಛೇದದ ಅಡಿಯಲ್ಲಿ ವಾಂಟೆಡ್ ವ್ಯಕ್ತಿಯಾಗಿದ್ದಾನೆ ಎಂದು ಸಚಿವಾಲಯದ ಡೇಟಾಬೇಸ್ ಅನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಟಾಸ್ ವರದಿ ಮಾಡಿದೆ. ಸ್ಟೋನ್ ಅನ್ನು ಕ್ರಿಮಿನಲ್ಗಳ ಪಟ್ಟಿಗೆ ಸೇರಿಸಲು ಕಾರಣವನ್ನು ಉಲ್ಲೇಖಿಸಲಾಗಿಲ್ಲ ಎಂದು ವರದಿ ಹೇಳಿದೆ.
2022 ರಲ್ಲಿ, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಮಾಸ್ಕೋ ಅಧಿಕೃತವಾಗಿ ಮೆಟಾ ಕಂಪನಿಯನ್ನು "ಭಯೋತ್ಪಾದಕ ಮತ್ತು ಉಗ್ರಗಾಮಿ" ಸಂಘಟನೆ ಎಂದು ಹೆಸರಿಸಿತ್ತು. ಆಗನಿಂದ ರಷ್ಯಾದಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಎಕ್ಸ್ (ಹಿಂದೆ ಟ್ವಿಟರ್) ಗಳನ್ನು ನಿಷೇಧಿಸಲಾಗಿದೆ. ಆದಾಗ್ಯೂ ವಿಪಿಎನ್ಗಳ ಮೂಲಕ ಅವುಗಳನ್ನು ದೇಶದಲ್ಲಿ ಬಳಸಬಹುದು.
ಮಾರ್ಚ್ 2022 ರಲ್ಲಿ ರಷ್ಯಾದ ತನಿಖಾ ಸಮಿತಿಯು ಮೆಟಾ ಉದ್ಯೋಗಿಗಳು ರಷ್ಯನ್ನರ ವಿರುದ್ಧ ಹಿಂಸಾಚಾರ ಮತ್ತು ಕೊಲೆ ಯತ್ನಗಳನ್ನು ನಡೆಸಿದ್ದಾರೆ ಎಂಬ ಆರೋಪಗಳ ಮೇಲೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಎರಡನ್ನೂ ರಷ್ಯಾದ ನ್ಯಾಯಾಲಯವು ಮಾರ್ಚ್ 2022ರಲ್ಲಿ ನಿಷೇಧಿಸಿದೆ. ಇವುಗಳ ಮಾತೃ ಕಂಪನಿ ಮೆಟಾ "ಉಗ್ರಗಾಮಿ" ಸಂಘಟನೆ ಎಂದು ನ್ಯಾಯಾಲಯ ಹೇಳಿದೆ. ಆದಾಗ್ಯೂ ಮೆಟಾದ ವಾಟ್ಸ್ಆ್ಯಪ್ ಮೆಸೆಂಜರ್ ಸೇವೆಯನ್ನು ನಿಷೇಧಿಸಲಾಗಿಲ್ಲ. ಇದನ್ನು ರಷ್ಯಾ ಸಂವಹನ ಸಾಧನವಾಗಿ ಪರಿಗಣಿಸಿದ್ದು, ಅದು ಮಾಹಿತಿಯ ಮೂಲವಲ್ಲ ಎಂದು ಹೇಳಿದೆ. ಮೆಟಾವನ್ನು ನಿಷೇಧಿಸುವ ಕ್ರಮವು ದೇಶದಲ್ಲಿ ಉಳಿದಿರುವ ಕೊನೆಯ ಪ್ರಮುಖ ಪಾಶ್ಚಿಮಾತ್ಯ ವೇದಿಕೆಯಾದ ಯೂಟ್ಯೂಬ್ಗೆ ಎಚ್ಚರಿಕೆಯ ಸಂದೇಶವಾಗಿದೆ.
ನಿಷೇಧದ ಮೊದಲು ಲಕ್ಷಾಂತರ ರಷ್ಯನ್ನರು ಮೆಟಾಗೆ ಸೇರಿದ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರು. ವಿಶೇಷವಾಗಿ ಇನ್ಸ್ಟಾಗ್ರಾಮ್ ಯುವ ರಷ್ಯನ್ನರಲ್ಲಿ ಭಾರಿ ಜನಪ್ರಿಯವಾಗಿದೆ. ಏಪ್ರಿಲ್ 2022 ರಲ್ಲಿ, ರಷ್ಯಾ ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಅವರನ್ನು ದೇಶಕ್ಕೆ ಪ್ರವೇಶಿಸದಂತೆ ನಿಷೇಧಿಸಿದ ಜನರ ಕಪ್ಪುಪಟ್ಟಿಗೆ ಸೇರಿಸಿತ್ತು. ರಷ್ಯಾ ಮಿಲಿಟರಿಯ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹರಡಿದರೆ 15 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ರಷ್ಯಾ ಸಂಸತ್ತು ಅಂಗೀಕರಿಸಿದೆ. ರಷ್ಯಾದ ಕ್ರಮದ ಬಗ್ಗೆ ಮೆಟಾ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ : ಕದನ ವಿರಾಮದ ನಂತರ ಮತ್ತೆ ಯುದ್ಧ ಆರಂಭಿಸುತ್ತೇವೆ; ಇಸ್ರೇಲ್ ಸೇನಾಪಡೆ ಮುಖ್ಯಸ್ಥ