ಎಲ್ವಿವ್: ದಿನದಿಂದ ದಿನಕ್ಕೆ ರಷ್ಯಾ-ಉಕ್ರೇನ್ ಯುದ್ಧ ತೀವ್ರತೆ ಪಡೆದುಕೊಳ್ಳುತ್ತಿದೆ. ಉಕ್ರೇನ್ ಗಡಿಗೆ ಕೇವಲ 45 ಮೈಲಿ ದೂರದಲ್ಲಿರುವ ಪೊಲೆಂಡ್ ರಾಜಧಾನಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭೇಟಿ ಬೆನ್ನಲ್ಲೇ ಉಕ್ರೇನ್ನ ಎಲ್ವಿವ್ ನಗರದ ಮೇಲೆ ಶನಿವಾರ ರಷ್ಯಾ ರಾಕೆಟ್ ದಾಳಿ ನಡೆಸಿದೆ. ಈ ವೈಮಾನಿಕ ದಾಳಿಯು ನಗರವನ್ನೇ ಬೆಚ್ಚಿಬೀಳಿಸಿದೆ.
ಉಕ್ರೇನ್ನ ಇತರೆ ಭಾಗಗಳಿಂದ ಪಲಾಯನ ಮಾಡುವವರಿಗೆ ಎಲ್ವಿವ್ ನಗರ ಆಶ್ರಯತಾಣವಾಗಿತ್ತು. ಇದೀಗ ಇಲ್ಲೂ ರಾಕೆಟ್ ದಾಳಿ ಪ್ರಾರಂಭವಾಗಿದ್ದು ಇದು ಸುರಕ್ಷಿತ ಸ್ಥಳವಲ್ಲವೆಂದು ಭಾವಿಸಿ, ಅನೇಕರು ಹತ್ತಿರದ ಪೊಲೆಂಡ್‌ಗೆ ವಲಸೆ ಹೋಗುತ್ತಿದ್ದಾರೆ. ಮೊದಲ ಸ್ಫೋಟ ಸಂಭವಿಸಿದ ನಗರದ ಈಶಾನ್ಯ ಹೊರವಲಯದ ಸ್ಥಳದಿಂದ ದಟ್ಟವಾದ ಕಪ್ಪು ಹೊಗೆ ಗಂಟೆಗಟ್ಟಲೆ ಹೊರಹೊಮ್ಮಿದ್ದು, ತದನಂತರ ಎರಡನೇ ಸ್ಫೋಟ ಉಂಟಾಗಿದೆ.
ಮೊದಲ ರಾಕೆಟ್ ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ. ಆದರೆ, ಎರಡನೇ ರಾಕೆಟ್ ದಾಳಿಯಿಂದ ಆಗಿರುವ ಅನಾಹುತದ ಬಗ್ಗೆ ನಿರ್ದಿಷ್ಠ ಮಾಹಿತಿ ಸಿಕ್ಕಿಲ್ಲ ಎಂದು ಅಲ್ಲಿನ ಪ್ರಾದೇಶಿಕ ಗೌವರ್ನರ್ ಮ್ಯಾಕ್ಸಿಮ್ ಕೊಜಿಟ್ಸಕಿ ಫೇಸ್ಬುಕ್ನಲ್ಲಿ ತಿಳಿಸಿದ್ದಾರೆ. ಜೋ ಬೈಡನ್ ಶುಕ್ರವಾರ ಯುದ್ಧಪೀಡಿತ ನೆರೆಯ ರಾಷ್ಟ್ರ ಪೊಲೆಂಡ್‌ಗೆ ಭೇಟಿ ನೀಡಿದ್ದಾರೆ. ಉಕ್ರೇನ್ ದೇಶದ ಗಡಿಯಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿರುವ ಜೋಶೋವ್ ನಗರಕ್ಕೆ ಪ್ರಯಾಣಿಸಿ, ಅಲ್ಲಿ ನಿಯೋಜಿಸಲಾದ ಅಮೆರಿಕ ಮತ್ತು ನ್ಯಾಟೋ ಪಡೆಗಳೊಂದಿಗೆ ಭದ್ರತೆ ಕುರಿತು ಅವರು ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ: 'ದೇವರಾಣೆಗೂ ಪುಟಿನ್ ಅಧಿಕಾರದಲ್ಲಿರಲು ಸಾಧ್ಯವಿಲ್ಲ': ನ್ಯಾಟೋ ವ್ಯಾಪ್ತಿಯಿಂದ ದೂರವಿರಲು ರಷ್ಯಾಗೆ ಅಮೆರಿಕ ಎಚ್ಚರಿಕೆ