ನವದೆಹಲಿ: ಎಲೋನ್ ಮಸ್ಕ್ ಅವರು ಟೆಸ್ಲಾದಲ್ಲಿ ಶೇಕಡಾ 10 ರಷ್ಟು ಉದ್ಯೋಗ ಕಡಿತಗೊಳಿಸುವುದಾಗಿ ಹೇಳುವುದಲ್ಲದೇ, ಅವರು ವಿಶ್ವದಾದ್ಯಂತ ಕಂಪನಿಯಲ್ಲಿ ಎಲ್ಲ ಹೊಸ ನೇಮಕಾತಿಗಳನ್ನು ಸಹ ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ. ಇದಕ್ಕೆ ಕಾರಣ ಜಾಗತಿಕ ಆರ್ಥಿಕತೆ ಸಮಸ್ಯೆ ಎಂದಿದ್ದಾರೆ. ಜಾಗತಿಕ ಆರ್ಥಿಕತೆ ಸ್ಥಿತಿ ಗಮನಿಸಿದರೆ ನಾನು ತುಂಬಾ ಕೆಟ್ಟದಾಗಿ ಭಾವಿಸುತ್ತಿದ್ದೇನೆ. ಹೀಗಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಮಸ್ಕ್ ಹೇಳಿದ್ದಾರೆ.
ಸಿಇಒ ಎಲೋನ್ ಮಸ್ಕ್ ಅವರು ಕಂಪನಿಯ ಶೇ. 10 ರಷ್ಟು ಕಾರ್ಮಿಕರನ್ನು ವಜಾಗೊಳಿಸಲು ನಿರ್ಧರಿಸುವ ವರದಿ ಬಹಿರಂಗವಾದ ಬಳಿಕ ಶುಕ್ರವಾರ ಟೆಸ್ಲಾ ಷೇರುಗಳು ಸುಮಾರು ಶೇ. 9ರಷ್ಟು ಕುಸಿತ ಕಂಡಿವೆ. ಟೆಸ್ಲಾ ತನ್ನ ಅಂಗಸಂಸ್ಥೆಗಳನ್ನು ಒಳಗೊಂಡಂತೆ ಇತ್ತೀಚಿನ ನಿಯಂತ್ರಕ ಫೈಲಿಂಗ್‌ಗಳ ಪ್ರಕಾರ ವಿಶ್ವಾದ್ಯಂತ ಸುಮಾರು 100,000 ಉದ್ಯೋಗಿಗಳನ್ನು ಹೊಂದಿದೆ.
ಏಪ್ರಿಲ್ ಆರಂಭದಿಂದ ಟೆಸ್ಲಾ ಷೇರುಗಳು ತಮ್ಮ ಮೌಲ್ಯದ ಸುಮಾರು ಮೂರನೇ ಒಂದು ಭಾಗವನ್ನು ಕಳೆದುಕೊಂಡಿವೆ. ಮಸ್ಕ್ ಮೊದಲ ಬಾರಿಗೆ ಟ್ವಿಟರ್ ಅನ್ನು ಖರೀದಿಸುವ ಕಲ್ಪನೆಯನ್ನು ಸಾರ್ವಜನಿಕವಾಗಿ ಹೇಳಿದ್ದರು. ಟೆಸ್ಲಾ ಷೇರುಗಳು ಶುಕ್ರವಾರ $ 66 ರಿಂದ $ 709 ಕ್ಕೆ ಕುಸಿದವು. ಎರಡು ತಿಂಗಳ ಹಿಂದೆ ಷೇರುಗಳ ಮೌಲ್ಯ ಸುಮಾರು $1,150ಗಳೊಂದಿಗೆ ವಹಿವಾಟು ನಡೆಸುತ್ತಿದ್ದವು.
ಓದಿ: ಅಂಬರ್ ಹರ್ಡ್-ಜಾನಿ ಡೆಪ್ ಮತ್ತೆ ಒಂದಾಗಲೂಬಹುದು : ಎಲಾನ್ ಮಸ್ಕ್ ಅನುಮಾನ
ವರದಿ ಪ್ರಕಾರ, ನೇಮಕಾತಿಗೆ ತಡೆ ನೀಡಿರುವ ಕುರಿತು ಟೆಸ್ಲಾ ಕಾರ್ಯನಿರ್ವಾಹಕರಿಗೆ ಆಂತರಿಕ ಇಮೇಲ್‌ಗಳನ್ನು ಕಳುಹಿಸಲಾಗಿದೆ. ಅಂದಿನಿಂದ ನೌಕರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ವಿಷಯದಲ್ಲಿ ಟೆಸ್ಲಾದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಈ ಹಿಂದೆ, ಇತ್ತೀಚೆಗೆ ಎಲಾನ್ ಮಸ್ಕ್ ಉದ್ಯೋಗಿಗಳ ಬಗ್ಗೆ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದರು.
ಎಲಾನ್ ಮಸ್ಕ್ ಪತ್ರ ವೈರಲ್: ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಅವರು ತಮ್ಮ ಉದ್ಯೋಗಿಗಳಿಗೆ ಬರೆದ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ನೌಕರರು ವಾರದಲ್ಲಿ ಕನಿಷ್ಠ 40 ಗಂಟೆಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡುವಂತೆ ಅವರು ತಿಳಿಸಿದ್ದಾರೆ. ಉದ್ಯೋಗಿಗಳು ಆಫೀಸ್ಗೆ ಬಂದು ಕೆಲಸ ಮಾಡಲಿ.. ಇಲ್ಲವೇ ಕಂಪನಿ ಬಿಟ್ಟು ಹೋಗಲಿ ಎಂದು ಹೇಳಿದ್ದರು.
ಹಿರಿಯ ಉದ್ಯೋಗಿಗಳು ತಮ್ಮ ಅಸ್ತಿತ್ವವನ್ನು ತೋರಿಸುವುದು ಬಹಳ ಮುಖ್ಯ ಎಂದು ಮಸ್ಕ್ ತಮ್ಮ ಪತ್ರದಲ್ಲಿ ಸೂಚನೆ ಕೊಟ್ಟಿದ್ದರು. ಅದಕ್ಕಾಗಿಯೇ ನಾನು ಹೆಚ್ಚು-ಹೆಚ್ಚು ಸಮಯವನ್ನು ಕಾರ್ಖಾನೆಯಲ್ಲಿ ಕಳೆಯುತ್ತೇನೆ. ಕಾರ್ಮಿಕರು ಯಾವರೀತಿ ಕೆಲಸ ಮಾಡುತ್ತಾರೆ ಎಂಬುದನ್ನು ನಿರಂತವಾಗಿ ಗಮನಿಸುತ್ತಿದ್ದೇನೆ. ನಾನು ಈ ರೀತಿ ಮಾಡದಿದ್ದರೆ ಟೆಸ್ಲಾ ಬಹಳ ಹಿಂದೆಯೇ ದಿವಾಳಿಯಾಗುತ್ತಿತ್ತು ಎಂದು ಪತ್ರದಲ್ಲಿ ಬರೆದುಕೊಂಡಿದ್ರು.