ನ್ಯೂಯಾರ್ಕ್( ಅಮೆರಿಕ): ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಏಕೈಕ ಸಿದ್ಧಾಂತ ಎಂದರೆ ವಾಸ್ತವವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಚಾಟಿ ಬೀಸಿದ್ದಾರೆ.
ಅಮೆರಿಕ ಪ್ರವಾಸದ ಭಾಗವಾಗಿ ಸೊಮವಾರ ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದೇ ರೀತಿಯ ರೈಲು ದುರಂತ ಸಂಭವಿಸಿತ್ತು. ಆಗ ಅಂದಿನ ರೈಲ್ವೇ ಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ನಡೆದ ರೈಲು ಅಪಘಾತದ ಬಗ್ಗೆ ನನಗೆ ನೆನಪಿದೆ. ಅಪಘಾತ ಸಂಭವಿಸಿದ ವೇಳೆ ಬ್ರಿಟಿಷರ ತಪ್ಪಿನಿಂದ ರೈಲು ಅಪಘಾತವಾಯಿತು ಎಂದು ಕಾಂಗ್ರೆಸ್ ಪಕ್ಷ ಅಸಮಂಜಸ ಹೇಳಿಕೆ ನೀಡಿರಲಿಲ್ಲ.
ಅಪಘಾತದ ನಂತರ ರೈಲ್ವೆ ಸಚಿವಾಲಯದ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವರು, ಇದರ ಸಂಪೂರ್ಣ ಹೊಣೆಯನ್ನು ನಾನೇ ಹೊರಲಿದ್ದು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿ ರಾಜೀನಾಮೆ ನೀಡಿದ್ದರು ಎಂದು ರಾಹುಲ್ ಗಾಂಧಿ ಹೇಳಿದರು.
ಇವುಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದರೆ ಕಾಂಗ್ರೆಸ್ ಮೇಲೆಯೇ ಆರೋಪ ಹೊರಿಸುತ್ತದೆ. “ನೀವು ಅವರನ್ನು (ಬಿಜೆಪಿ) ಪ್ರಶ್ನಿಸಿದರೆ, ಪ್ರಶ್ನಿಸಿದವರ ಮೇಲೆಯೇ ಆರೋಪ ಹೊರಿಸುತ್ತಾರೆ. ಒಡಿಶಾ ರೈಲು ಅಪಘಾತ ಹೇಗೆ ಸಂಭವಿಸಿತು ಎಂದು ಕೇಳಿ. 50 ವರ್ಷಗಳ ಹಿಂದೆ ಕಾಂಗ್ರೆಸ್ ಏನು ಮಾಡಿದೆ ಎಂಬುದರ ಕುರಿತು ಅವರು ಮಾತನಾಡುತ್ತಾರೆ. ಬಿಜೆಪಿ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳದ ಅಭ್ಯಾಸವನ್ನು ರೂಢಿಸಿಕೊಂಡಿದೆ ಎಂದು ಕಿಡಿಕಾರಿದರು.
ಇದಕ್ಕೂ ಮೊದಲು, ಭಾನುವಾರ ರಾಹುಲ್ ಗಾಂಧಿ, ಬಾಲಸೋರ್ ರೈಲು ದುರಂತದ ಬಗ್ಗೆ ಪ್ರಧಾನಿ ಮೋದಿ ಅವರು ತಕ್ಷಣವೇ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜೀನಾಮೆ ನೀಡಲು ಹೇಳಬೇಕು ಎಂದು ಹೇಳಿದರು.
"270ಕ್ಕೂ ಹೆಚ್ಚಿನ ಸಾವುಗಳ ನಂತರವೂ ಯಾವುದೇ ಉತ್ತರವಿಲ್ಲ" ಎಂದು ಟ್ವೀಟ್ ಮಾಡಿದ್ದ ಅವರು, "ಇಂತಹ ನೋವಿನ ಅಪಘಾತದ ಹೊಣೆಗಾರಿಕೆಯಿಂದ ಮೋದಿ ಸರ್ಕಾರವು ಓಡಿಹೋಗಲು ಸಾಧ್ಯವಿಲ್ಲ. ರೈಲ್ವೆ ಸಚಿವರ ರಾಜೀನಾಮೆಗೆ ಪ್ರಧಾನಿ ಮೋದಿ ತಕ್ಷಣ ಪ್ರಯತ್ನಿಸಬೇಕು ಎಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು.
ತ್ರಿವಳಿ ದುರಂತದ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಕೂಡ ರೈಲ್ವೇ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಈ ಕುರಿತು ಶುಕ್ರವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶುಕ್ರವಾರ ಸಂಜೆ ನಡೆದ ರೈಲು ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿ, "ಈ ವ್ಯವಸ್ಥೆಯು ಮೂರ್ಖತನದಿಂದ ಕೂಡಿದೆ. ಅಲ್ಲದೇ ಈ ಹಿಂದೆ ರೈಲ್ವೆ ಸಚಿವರು ಯಾವುದೇ ಗಂಭೀರ ರೈಲು ಅಪಘಾತ ಸಂಭವಿಸುವುದಿಲ್ಲ ಎಂದು ಪದೇ ಪದೇ ಹೇಳಿದ ನಂತರವೂ ಇಂತಹ ಘಟನೆ ಹೇಗೆ ಸಂಭವಿಸಿತು.
ಈ ಹಿಂದೆ ಇದೇ ರೀತಿಯ ಅಪಘಾತ ಸಂಭವಿಸಿದ ವೇಳೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿದರ್ಶನವಿದೆ. ಈ ಹಿನ್ನೆಲೆ ಪ್ರಸ್ತುತ ರೈಲ್ವೇ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ದಿಗ್ವಿಜಯ್ ಸಿಂಗ್ ಒತ್ತಾಯಿಸಿದರು.
ಇನ್ನು ಶನಿವಾರ, ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕೂಡ ರೈಲ್ವೇ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದು, ಬಾಲಸೋರ್ ಅಪಘಾತದಲ್ಲಿ ಸಂಭವಿಸಿದ ಅನೇಕ ಜನರ ಜೀವಹಾನಿಗೆ ನೈತಿಕ ಹೊಣೆ ಹೊತ್ತು ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಬಾಲಾಸೋರ್ ರೈಲು ದುರಂತಕ್ಕೆ ಕೋಮು ಬಣ್ಣ: ವದಂತಿ ಹರಡದಂತೆ ಒಡಿಶಾ ಪೊಲೀಸರಿಂದ ಎಚ್ಚರಿಕೆ