ದೋಹಾ: ಗೂಢಚರ್ಯೆ ಆರೋಪದ ಮೇಲೆ ಕತಾರ್‌ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬಂಧನದಲ್ಲಿರುವ ಎಂಟು ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಅಲ್ಲಿನ ನ್ಯಾಯಾಲಯ ಮರಣದಂಡನೆ ವಿಧಿಸಿರುವುದೆ. ಈ ತೀರ್ಪು ಪ್ರಶ್ನಿಸಿ ಭಾರತ ಸರ್ಕಾರದ ಮೇಲ್ಮನವಿ ಆಲಿಸಲು ಇತ್ತೀಚಿಗೆ ಕತಾರ್ ನ್ಯಾಯಾಲಯ ಸಮ್ಮತಿಸಿದ್ದು, ಶೀಘ್ರದಲ್ಲೇ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಖಾಸಗಿ ಭದ್ರತಾ ಸಂಸ್ಥೆಯಾದ ಅಲ್ ದಹ್ರಾದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಬೇಹುಗಾರಿಕೆ ಆರೋಪದಡಿ ಗುಪ್ತಚರ ಅಧಿಕಾರಿಗಳು ಬಂಧಿಸಿದ್ದರು. ಅವರು ಇಸ್ರೇಲ್‌ಗಾಗಿ ಬೇಹುಗಾರಿಕೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ ಎಂದು ಸರ್ಕಾರಿ-ಚಾಲಿತ ಪತ್ರಿಕೆ ಅಲ್-ಜಜೀರಾ ವರದಿ ಮಾಡಿದೆ. ಈ ಆದೇಶದಲ್ಲಿ ಅಲ್ಲಿನ ಕೋರ್ಟ್ ಅಕ್ಟೋಬರ್ ಕೊನೆಯ ವಾರದಲ್ಲಿ ಎಂಟು ಭಾರತೀಯರಿಗೆ ಮರಣದಂಡನೆ ವಿಧಿಸಿತ್ತು. ಈ ಕುರಿತು ಆಘಾತ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಪ್ರಕರಣದ ಕುರಿತು ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿತ್ತು. ಅದರ ಭಾಗವಾಗಿ ಕೆಲ ದಿನಗಳ ಹಿಂದೆ ಕತಾರ್ದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಬಿಡುಗಡೆಗೆ ಅಗತ್ಯವಾದ ಕಾನೂನು ಹೋರಾಟದ ಮೇಲೆ ಕೇಂದ್ರೀಕರಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿತ್ತು.
ನಮ್ಮ ಮಾಜಿ ನೌಕಾ ಅಧಿಕಾರಿಗಳನ್ನು ರಕ್ಷಿಸಲು ಸೀಮಿತ ವಿಧಾನಗಳಿವೆ. ಇವುಗಳಲ್ಲಿ ಒಂದು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು. ಪ್ರಸ್ತುತ, ವಿದೇಶಾಂಗ ಸಚಿವಾಲಯ ಮತ್ತು ಕಾನೂನು ತಜ್ಞರು ಈ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಹೋರಾಡುವ ಅವಕಾಶಗಳೂ ಇವೆ. ಆದರೆ, ಇದನ್ನೇ ಕೊನೆಯ ಉಪಾಯವಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂಬ ವಾದಗಳಿವೆ. ಪಾಕಿಸ್ತಾನದಲ್ಲಿ ಸಿಲುಕಿಕೊಂಡಿದ್ದ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತ ಈ ರೀತಿ ಹೋರಾಡಿತ್ತು. ರಾಜತಾಂತ್ರಿಕ ಮಾರ್ಗವೇ ಉತ್ತಮ ಎಂಬುದು ತಜ್ಞರ ಅಭಿಪ್ರಾಯ.
ಕತಾರ್‌ನಲ್ಲಿ 2016-21ರ ನಡುವೆ 21 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಈ ಪೈಕಿ 18 ವಿದೇಶಿಗರನ್ನು ಕೊಲೆ ಮತ್ತು ಮಾದಕ ದ್ರವ್ಯ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು.
ಇದನ್ನೂ ಓದಿ: ನೌಕಾಪಡೆಯ ಮಾಜಿ ಸಿಬ್ಬಂದಿಗೆ ಕತಾರ್ ಮರಣದಂಡನೆ; ಮೇಲ್ಮನವಿ ಸಲ್ಲಿಸಿದ ಭಾರತ