ಕೀವ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರ ಆರೋಗ್ಯ ಕ್ಷೀಣಿಸುತ್ತಿದೆ. ಅವರು ಅನೇಕ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇನ್ನು ಎರಡು ವರ್ಷಗಳಲ್ಲಿ ಅವರು ಸಾಯಬಹುದು ಎಂದು ಉಕ್ರೇನಿಯನ್ ಗುಪ್ತಚರ ಸೇವೆಯ ಮುಖ್ಯಸ್ಥರು ತಿಳಿಸಿದ್ದಾರೆ ಅಂತಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದೀಗ 69ರ ಹರೆಯಲ್ಲಿರುವ ಪುಟಿನ್ ಅವರ ಆರೋಗ್ಯ ಹದಗೆಡುತ್ತಿದೆ ಎಂದು ಹೇಳಿರುವ ಅವರು, ಹಲವು ವಿವರಗಳನ್ನೂ ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ.
ಕ್ರೆಮ್ಲಿನ್‌ಗೆ ನುಸುಳಿರುವ ಕೀವ್ ಗೂಢಚಾರರು "human intelligence"ಯ ಆಧಾರದ ಮೇಲೆ ಈ ವಿಚಾರ ಹೊರಬಿದ್ದಿದೆ. ಪುಟಿನ್ ಅವರಿಗೆ ಮುಂದೆ ದೀರ್ಘಾವಧಿಯ ಜೀವನವಿಲ್ಲ ಎಂದು ಮೇಜರ್ ಜನರಲ್ ಕೈರಿಲೋ ಬುಡಾನೋವ್ ಹೇಳಿದ್ದಾರೆ. ಆದರೆ, ರಷ್ಯಾ ಸರ್ಕಾರ ವ್ಲಾಡಿಮಿರ್ ಪುಟಿನ್ ಅವರ ಬಗ್ಗೆ ಬಹಿರಂಗವಾಗಿ, ಅಧಿಕೃತವಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ.
ಮೂರ್ನಾಲ್ಕು ವಾರಗಳ ಹಿಂದೆ ಪುಟಿನ್ ಆರೋಗ್ಯ ಕುರಿತು ಪ್ರತಿಕ್ರಿಯಿಸಿದ್ದ ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸರ್ಗೆ ಲ್ಯಾವ್ರೊವ್, ಅಧ್ಯಕ್ಷರ ಆರೋಗ್ಯ ಚೆನ್ನಾಗಿದೆ. ಅವರ ಮುಖಭಾವ ಅಥವಾ ದೇಹಲಕ್ಷಣದಲ್ಲಿ ನೋವಿನ ಸೆಲೆ ಏನೇನೂ ಇಲ್ಲ ಎಂದು ಮಾಹಿತಿ ನೀಡಿದ್ದರು.
ಇತ್ತೀಚೆಗಷ್ಟೇ ಅವರು ಶರ್ಟ್ ಬಿಚ್ಚಿ ಕುದುರೆ ಮೇಲೆ ಸವಾರಿ ಮಾಡುವ ಫೋಟೋ ವೈರಲ್ ಆಗಿತ್ತು. ಈ ವಿಚಾರ ಜಿ-7 ಶೃಂಗಸಭೆಯಲ್ಲೂ ಭಾರಿ ಚರ್ಚೆ ಹುಟ್ಟು ಹಾಕಿತ್ತು.
ಓದಿ: ಪುಟಿನ್ಗೆ ಕ್ಯಾನ್ಸರ್ ಚಿಕಿತ್ಸೆ; ಕೆಲದಿನಗಳ ಮಟ್ಟಿಗೆ ಆಪ್ತನಿಗೆ ಅಧಿಕಾರ ಹಸ್ತಾಂತರ ಸಾಧ್ಯತೆ
ಇತ್ತೀಚೆಗೆ ಬಿಡುಗಡೆಯಾದ ವಿಡಿಯೊದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಲುಗಾಡುತ್ತಿದ್ದು ತನ್ನ ಕಾಲುಗಳ ಮೇಲೆ ಬಲಿಷ್ಠವಾಗಿ ನಿಂತುಕೊಳ್ಳಲು ಹೆಣಗಾಡುತ್ತಿರುವುದು ಕಾಣಬಹುದಾಗಿದೆ. ಇದು ಅವರ ಆರೋಗ್ಯದ ಬಗ್ಗೆ ವಿಶ್ವಾದ್ಯಂತ ಊಹಾಪೋಹಗಳು ಮತ್ತು ಕಳವಳಗಳಿಗೆ ಕಾರಣವಾಗಿತ್ತು.
ಜೂನ್ 12ರಂದು ಚಲನಚಿತ್ರ ನಿರ್ಮಾಪಕ ನಿಕಿತಾ ಮಿಖೈಲೋವ್ ಅವರಿಗೆ ರಷ್ಯಾದ ಒಕ್ಕೂಟದ ರಾಜ್ಯ ಪ್ರಶಸ್ತಿಯನ್ನು ನೀಡಿದ ನಂತರ 69 ವರ್ಷದ ರಷ್ಯಾದ ಅಧ್ಯಕ್ಷರು ಹಿಂದಕ್ಕೆ ಮತ್ತು ಮುಂದಕ್ಕೆ ಅಲುಗಾಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಉಕ್ರೇನ್ ಯುದ್ಧ ಪ್ರಾರಂಭದ ನಂತರ, ಪುಟಿನ್ ಅವರ ಆರೋಗ್ಯ ವಿಚಾರ ಅಂತಾರಾಷ್ಟ್ರೀಯ ಗಮನವನ್ನು ಪಡೆದ ವಿಷಯವಾಗಿದೆ. ಕಳೆದ ಫೆಬ್ರುವರಿ 24ರಂದು ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ ಸೇನೆಯು ಜಾಗತಿಕ ಅಲ್ಲೋಲಕಲ್ಲೋಲ ಉಂಟುಮಾಡಿದೆ.
ಯುದ್ಧದಲ್ಲಿ ಸಾವಿರಾರು ಜನರು ಮೃತಪಟ್ಟಿದ್ದು, ಲಕ್ಷಾಂತರ ಮಂದಿ ನಿರ್ವಹಿತರಾಗಿ ವಿವಿಧ ದೇಶಗಳನ್ನು ಅಲೆಯುತ್ತಿದ್ದಾರೆ. 2ನೇ ಮಹಾಯುದ್ಧದ ನಂತರ ಇದು ವಿಶ್ವದಲ್ಲಿ ಅತಿದೊಡ್ಡ ನಿರಾಶ್ರಿತರ ಸಮಸ್ಯೆಯನ್ನು ಉಂಟು ಮಾಡಿದೆ. ಹಲವು ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರಿವೆ.