ಲಂಡನ್: ಬ್ರಿಟೀಷರು ಭಾರತವನ್ನು ಇನ್ನೂರು ವರ್ಷಗಳ ಕಾಲ ಆಳ್ವಿಕೆ ಮಾಡಿ ಇಲ್ಲಿನ ಸಂಪತ್ತನ್ನು ದೋಚಿಕೊಂಡು ಹೋದರು. ಹೀಗೆ ದೋಚಿದ ಅಮೂಲ್ಯ ವಸ್ತುಗಳಲ್ಲಿ ಅತ್ಯಮೂಲ್ಯವಾದ ಕೊಹಿನೂರ್ ವಜ್ರವೂ ಒಂದಾಗಿದೆ. ನಿನ್ನೆಯಷ್ಟೇ ಬ್ರಿಟನ್ ರಾಣಿ ಎಲಿಜಬೆತ್- II ನಿಧನರಾಗಿದ್ದರು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರತದಿಂದ ದೋಚಿದ ಕೊಹಿನೂರ್ ವಜ್ರವನ್ನು ಮರಳಿ ಭಾರತಕ್ಕೆ ನೀಡಬೇಕು ಅಭಿಯಾನ ನಡೆಯುತ್ತಿದೆ.
ಟ್ವಿಟ್ಟರ್‌ನಲ್ಲಿ #ಕೊಹಿನೂರ್ ಟ್ರೆಂಡಿಂಗ್ನಲ್ಲಿದೆ. ಅತ್ಯಮೂಲ್ಯವಾದ ಕೊಹಿನೂರ್ ವಜ್ರವನ್ನು ಬ್ರಿಟನ್ ರಾಜರು ತೊಡುವ ಕಿರೀಟದಲ್ಲಿ ಅಳವಡಿಸಲಾಗಿದೆ. ಇದು ಭಾರತಕ್ಕೆ ಸೇರಿದ್ದಾಗಿದ್ದು, ಮರಳಿಸಬೇಕೆಂಬ ಒತ್ತಾಯ ಸೋಷಿಯಲ್ ಮೀಡಿಯಾದಲ್ಲಿ ಧ್ವನಿಸುತ್ತಿದೆ.
ವಸಾಹತುಶಾಹಿ ಆಳ್ವಿಕೆಯಲ್ಲಿ ಬ್ರಿಟಿಷ್ ಅಧಿಕಾರಿಗಳು ಕೊಹಿನೂರ್ ವಜ್ರವನ್ನು ಮಾತ್ರವಲ್ಲದೇ, ವಿಶ್ವದ ವಿವಿಧ ಅಮೂಲ್ಯ ವಸ್ತುಗಳನ್ನು ದೋಚಿದ್ದಾರೆ. ಲೂಟಿ ಮಾಡಿದ ಹಲವಾರು ಅಮೂಲ್ಯ ವಸ್ತುಗಳನ್ನು ಇಂಗ್ಲೆಂಡ್ಗೆ ಕೊಂಡೊಯ್ದಿದ್ದಾರೆ. ಅಂತಹ ಕೆಲವು ವಸ್ತುಗಳು ಇಲ್ಲಿವೆ.
1. ಗ್ರೇಟ್ ಸ್ಟಾರ್ ಆಫ್ ಆಫ್ರಿಕಾ ಡೈಮಂಡ್
ಕಿರೀಟದಲ್ಲಿರುವ ಅಮೂಲ್ಯ ವಸ್ತುಗಳಲ್ಲಿ 'ಗ್ರೇಟ್ ಸ್ಟಾರ್ ಆಫ್ ಆಫ್ರಿಕಾ' ವಜ್ರವೂ ಒಂದಾಗಿದೆ. ಇದು ವಿಶ್ವದ ಅತಿ ದೊಡ್ಡ ವಜ್ರ ಎಂದೇ ಹೆಸರಾಗಿದೆ. ಇದು ಸುಮಾರು 530 ಕ್ಯಾರೆಟ್ ತೂಗುತ್ತದೆ. 400 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯವುಳ್ಳದ್ದಾಗಿದೆ. ಗ್ರೇಟ್ ಸ್ಟಾರ್ ಆಫ್ ವಜ್ರವನ್ನು 1905 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಣಿಯಲ್ಲಿ ಪತ್ತೆಯಾಗಿತ್ತು.
ಆಫ್ರಿಕಾದ ಅನೇಕ ಇತಿಹಾಸಕಾರರ ಪ್ರಕಾರ ವಜ್ರವನ್ನು ದೋಚಲಾಯಿತು ಎಂದು ಹೇಳಲಾಗಿದೆ. ಅಂದಿನ ರಾಜನಾಗಿದ್ದ ಎಡ್ವರ್ಡ್- VII ಗೆ ಅಧಿಕಾರಿಗಳು ಕಾಣಿಕೆಯಾಗಿ ನೀಡಿದ್ದಾಗಿಯೂ ಇತಿಹಾಸದಲ್ಲಿದೆ. ವಸಾಹತುಶಾಹಿಗಳ ಆಳ್ವಿಕೆಯ ವೇಳೆ ಬ್ರಿಟಿಷ್ ಸರ್ಕಾರ ಅದನ್ನು ಲೂಟಿ ಮಾಡಿ ರಾಜನಿಗೆ ನೀಡಿದೆ ಎಂಬುದು ಇತಿಹಾಸದ ಪಾಠವಾಗಿದೆ.
2. ಟಿಪ್ಪು ಸುಲ್ತಾನನ ಉಂಗುರ
1799 ರಲ್ಲಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಸೋತ ನಂತರ ಅವನ ಬೆರಳಲ್ಲಿದ್ದ ಭಾರೀ ಮೌಲ್ಯದ ಉಂಗುರವನ್ನು ಲೂಟಿ ಮಾಡಿದ್ದರು. ಇದನ್ನು ಬಳಿಕ ಅಂದಿನ ರಾಜನಿಗೆ ನೀಡಲಾಗಿತ್ತು. ಇತ್ತೀಚೆಗೆ ಆ ಉಂಗುರವನ್ನು ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಲಾಗಿದೆ. ಮಾಧ್ಯಮಗಳ ವರದಿಯ ಪ್ರಕಾರ ಹರಾಜಿನಲ್ಲಿ ಈ ಉಂಗುರವನ್ನು ಸುಮಾರು 1.45 ಲಕ್ಷ ಬ್ರಿಟಿಷ್ ಪೌಂಡ್‌ಗಳಿಗೆ ಮಾರಾಟ ಕಂಡಿದೆಯಂತೆ.
3. ರೊಸೆಟ್ಟಾ ಸ್ಟೋನ್
ಕೊಹಿನೂರ್ ಅನ್ನು ಭಾರತಕ್ಕೆ ಮರಳಿ ನೀಡಬೇಕು ಎಂಬ ಕೂಗಿನ ಮಧ್ಯೆಯೇ ಈಜಿಪ್ಟ್ನ ರೊಸೆಟ್ಟಾ ಶಾಸನವೂ ತಮ್ಮ ದೇಶಕ್ಕೆ ನೀಡಬೇಕು ಎಂಬ ಕೂಗು ಕೇಳಿ ಬಂದಿದೆ. ಈ ರೊಸೆಟ್ಟಾ ಕಲ್ಲು ಭಾರೀ ಬೆಲೆಯುಳ್ಳದ್ದಾಗಿದ್ದು, ಅದನ್ನು 1800 ರಲ್ಲಿ ಫ್ರಾನ್ಸ್ ವಿರುದ್ಧದ ಯುದ್ಧದಲ್ಲಿ ಗೆದ್ದ ಬಳಿಕ ದೋಚಲಾಗಿತ್ತು. ರೊಸೆಟ್ಟಾ ಸ್ಟೋನ್ ಕ್ರಿಪೂ 196 ಯಷ್ಟು ಹಿಂದಿನದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಬ್ರಿಟಿಷ್ ಮ್ಯೂಸಿಯಂನಲ್ಲಿರುವ ರೊಸೆಟ್ಟಾ ಶಾಸನವನ್ನು ಮರಳಿ ಈಜಿಪ್ಟ್ಗೆ ನೀಡಬೇಕು ಎಂದು ಅಲ್ಲಿನ ಜನರು ಕೇಳುತ್ತಿದ್ದಾರೆ.
4. ಎಲ್ಜಿನ್ ಮಾರ್ಬಲ್ಸ್
1803 ರಲ್ಲಿ ಲಾರ್ಡ್ ಎಲ್ಜಿನ್ ಗ್ರೀಸ್‌ನಲ್ಲಿನ ಪಾರ್ಥೆನಾನ್ ಗೋಡೆಗಳಿಂದ ಅಮೃತಶಿಲೆಗಳನ್ನು ತೆಗೆದು ಲಂಡನ್‌ಗೆ ಸಾಗಿಸಲಾಗಿತ್ತು. ಈ ಅಮೂಲ್ಯವಾದ ಅಮೃತಶಿಲೆಗಳನ್ನು ಎಲ್ಜಿನ್ ಮಾರ್ಬಲ್ಸ್ ಎಂದು ಕರೆಯಲಾಗುತ್ತದೆ. 1925 ರಿಂದಲೂ ಗ್ರೀಸ್ ತನ್ನ ದೇಶದ ಅಮೂಲ್ಯವಾದ ಈ ವಸ್ತುವಿಗಾಗಿ ಬೇಡಿಕೆ ಇಟ್ಟಿದೆ. ಆದರೆ ಅಮೃತಶಿಲೆಗಳು ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿ ಉಳಿಸಿಕೊಳ್ಳಲಾಗಿದೆ.
ಓದಿ: 'ಥ್ಯಾಂಕ್ಯೂ ಮೈ ಡಾರ್ಲಿಂಗ್ ಮಮಾ'.. ಅಗಲಿದ ತಾಯಿಗೆ ಹೃದಯಸ್ಪರ್ಶಿ ಗೌರವ ಸಲ್ಲಿಸಿದ ಕಿಂಗ್ ಚಾರ್ಲ್ಸ್