ಕೊಲಂಬೊ: ಶ್ರೀಲಂಕಾದಲ್ಲಿನ ಆರ್ಥಿಕ ಸಂಕಷ್ಟದಿಂದ ಜನರಿಗೆ ತನ್ನ ಮುಖ ತೋರಿಸಲು ಸಾಧ್ಯವಾಗದ ದೇಶದ ಅಧ್ಯಕ್ಷ ಗೊಟಾಬಯ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸರ್ವಪಕ್ಷಗಳ ಸರ್ಕಾರವೊಂದನ್ನು ರಚಿಸಲು ರಾಜಕೀಯ ಪಕ್ಷಗಳು ಸೋಮವಾರದಿಂದ ಕಸರತ್ತು ಆರಂಭಿಸಿವೆ. ದೇಶದಲ್ಲಿನ ಅರಾಜಕತೆ ಇನ್ನಷ್ಟು ನಿಯಂತ್ರಣ ತಪ್ಪಿ ಹೋಗುವ ಮುನ್ನ ಹೊಸ ಸರ್ಕಾರ ಸ್ಥಾಪಿಸುವ ಉದ್ದೇಶದಿಂದ ಜುಲೈ 20 ರಂದು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಿದ್ಧತೆಗಳು ನಡೆದಿವೆ.
ಜುಲೈ 13ರಂದು ತಾವು ರಾಜೀನಾಮೆ ನೀಡುವುದಾಗಿ ಅಧ್ಯಕ್ಷ ರಾಜಪಕ್ಸ, ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರಿಗೆ ತಿಳಿಸಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ಹೇಳಿದೆ. ದೇಶವು ಆರ್ಥಿಕವಾಗಿ ದಿವಾಳಿಯಾಗಿದ್ದರಿಂದ ಆಕ್ರೋಶಗೊಂಡ ಜನತೆ, ಅಧ್ಯಕ್ಷ ಹಾಗೂ ಪ್ರಧಾನಿಗಳ ನಿವಾಸಕ್ಕೆ ಮುತ್ತಿಗೆ ಹಾಕಿ ವ್ಯಾಪಕ ಪ್ರತಿಭಟನೆ ನಡೆಸಿದ ನಂತರ ಈ ಬೆಳವಣಿಗೆಗಳು ನಡೆದಿವೆ.
ಇಡೀ ಶ್ರೀಲಂಕಾ ಕ್ಯಾಬಿನೆಟ್ ರಾಜೀನಾಮೆ ನೀಡಲಿದೆ ಮತ್ತು ಸರ್ವಪಕ್ಷಗಳ ಹೊಸ ಮಧ್ಯಂತರ ಸರ್ಕಾರ ರಚನೆಯಾದ ತಕ್ಷಣ ಎಲ್ಲ ಜವಾಬ್ದಾರಿಗಳನ್ನು ಹೊಸ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ಪ್ರಧಾನಿ ವಿಕ್ರಮಸಿಂಘೆ ಅವರ ಕಚೇರಿ ಸೋಮವಾರ ತಿಳಿಸಿದೆ. ದೇಶವು ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳಿಂದ ಬಳಲುತ್ತಿದೆ, ಸಂಪುಟದ ಎಲ್ಲಾ ಸದಸ್ಯರು ಹೊಸ ಸರ್ವಪಕ್ಷ ಸರ್ಕಾರ ರಚನೆಯಾದ ಕೂಡಲೇ ತಮ್ಮ ಜವಾಬ್ದಾರಿಗಳನ್ನು ಹಸ್ತಾಂತರಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಅದು ಹೇಳಿದೆ.
ಸರ್ವಪಕ್ಷೀಯ ಸರ್ಕಾರ ರಚನೆಗೆ ಒಪ್ಪಂದವಾದ ತಕ್ಷಣ ಆ ಸರ್ಕಾರಕ್ಕೆ ತಮ್ಮ ಜವಾಬ್ದಾರಿಯನ್ನು ಹಸ್ತಾಂತರಿಸಲು ಸಿದ್ಧವಿರುವುದಾಗಿ ಚರ್ಚೆಯಲ್ಲಿ ಭಾಗವಹಿಸಿದ್ದ ಎಲ್ಲ ಸಚಿವರು ಅಭಿಪ್ರಾಯಪಟ್ಟಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ. ರಾಜಪಕ್ಸ ಅವರು ಸ್ಪೀಕರ್ ಮಹಿಂದಾ ಅವರಿಗೆ ಮಾಹಿತಿ ನೀಡಿದರು. ಅಧ್ಯಕ್ಷ ರಾಜಪಕ್ಷೆ ತಾವು ಬುಧವಾರ ರಾಜೀನಾಮೆ ನೀಡುವುದಾಗಿ ಅಜ್ಞಾತ ಸ್ಥಳವೊಂದರಿಂದ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ದೆನಾ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.