ಹಿರೋಶಿಮಾ(ಜಪಾನ್): ಜಪಾನ್ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾಗಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂದುವರೆದ 7 ರಾಷ್ಟ್ರಗಳ ನಾಯಕರ ಜೊತೆ ಮಾತುಕತೆ ನಡೆಸಿದರು. ಸಭೆಯ ವೇಳೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು, ಮೋದಿ ಇರುವ ಜಾಗಕ್ಕೇ ಬಂದು ಆಲಂಗಿಸಿಕೊಂಡರು. ಕೆಲ ಕಾಲ ಆಪ್ತ ಮಾತುಕತೆ ಬಳಿಕ ಅಲ್ಲಿಂದ ತೆರಳಿದರು. ಇದರ ವಿಡಿಯೋ ವೈರಲ್ ಆಗಿದೆ.
ಜಪಾನ್ನಲ್ಲಿ ನಡೆಯುತ್ತಿರುವ ಶೃಂಗದಲ್ಲಿ ಭಾರತ, ಅಮೆರಿಕ, ಉಕ್ರೇನ್ ಸೇರಿದಂತೆ 7 ರಾಷ್ಟ್ರಗಳ ನಾಯಕರೂ ಆಗಮಿಸಿದ್ದಾರೆ. ಜಿ 7ಶೃಂಗಸಭೆಯ 6ನೇ ವರ್ಕಿಂಗ್ ಸೆಷನ್ಸ್ ನಡೆಯುತ್ತಿದ್ದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಕುಳಿತಿದ್ದ ಜಾಗಕ್ಕೆ ತಾವೇ ಬಂದರು. ಇದನ್ನು ಗಮನಿಸಿದ ಮೋದಿ ಅವರು ತಕ್ಷಣವೇ ಎದ್ದು ನಿಂತು ಅವರನ್ನು ಆಲಂಗಿಸಿಕೊಂಡರು.
ಇಬ್ಬರೂ ನಾಯಕರು ಕೈಕುಲುಕಿದ ಬಳಿಕ ಉಭಯ ಕುಶಲೋಪರಿ ವಿಚಾರಿಸಿದರು. ಇದಾದ ಬಳಿಕ ತುಸು ಹೊತ್ತು ಮಾತನಾಡಿ ಅಲ್ಲಿಂದ ಬೈಡನ್ ತೆರಳಿದರು. ಇಬ್ಬರ ಆಪ್ತ ಸಮಾಲೋಚನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆಯೂ ಪ್ರಧಾನಿ ಮೋದಿ ಅವರನ್ನು ಹುಡುಕಿಕೊಂಡು ಬಂದ ಘಟನೆ ನಡೆದಿತ್ತು. ವಿಶ್ವದ ಪ್ರಭಾವಿ ನಾಯಕರಾದ ಮೋದಿ ಅವರನ್ನು ಅಮೆರಿಕವೇ ಹುಡುಕಿಕೊಂಡು ಬಂದಿದೆ ಎಂದು ಬಣ್ಣಿಸಲಾಗಿತ್ತು. ಇದೀಗ ಜಪಾನ್ನಲ್ಲಿ ಅದು ಮರುಕಳಿಸಿದೆ.
ಜಿ7 ಶೃಂಗಸಭೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೇ 19ರಂದು ಜಪಾನ್ನ ಹಿರೋಶಿಮಾವನ್ನು ತಲುಪಿದರು. ಪ್ರಧಾನಿ ಅವರನ್ನು ಅನಿವಾಸಿ ಭಾರತೀಯರು ಅದ್ಧೂರಿಯಾಗಿ ಬರಮಾಡಿಕೊಂಡರು. ಜಿ7 ಶೃಂಗಸಭೆ ನಡೆಯುವ ಸ್ಥಳಕ್ಕೆ ಬಂದ ಮೋದಿಯನ್ನು ಜಪಾನ್ ಪ್ರಧಾನಮಂತ್ರಿ ಫ್ಯುಮಿಯೊ ಕಿಶಿಡಾ ಅವರು ಸ್ವಾಗತಿಸಿದರು.
ಹಿರೋಶಿಮಾದಲ್ಲಿ ಗಾಂಧಿ ಪ್ರತಿಮೆ: ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಜಪಾನ್ನ ಹಿರೋಶಿಮಾಕ್ಕೆ ಆಗಮಿಸಿದ ವೇಳೆ ಇಲ್ಲಿ ನಿರ್ಮಾಣ ಮಾಡಲಾಗಿರುವ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಪ್ರತಿಮೆಯನ್ನು ಅನಾವರಣಗೊಳಿಸಿದರು. ಪ್ರತಿಮೆಗೆ ತಲೆ ಬಾಗಿ ನಮಿಸಿದ ಮೋದಿ, "ಹಿರೋಶಿಮಾದಲ್ಲಿನ ಮಹಾತ್ಮ ಗಾಂಧಿಯವರ ಪ್ರತಿಮೆ ಶಾಂತಿ ಮತ್ತು ಸೌಹಾರ್ದತೆಯನ್ನು ಜಾಗತಿಕವಾಗಿ ಪ್ರತಿಧ್ವನಿಸುತ್ತದೆ. ಲಕ್ಷಾಂತರ ಜನರಿಗೆ ಗಾಂಧೀಜಿ ಪ್ರೇರಕ ಶಕ್ತಿ" ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೇ, ವಿವಿಧ ದೇಶಗಳ ಗಣ್ಯ ನಾಯಕರೊಂದಿಗೆ ತಾವು ಮಾತುಕತೆ ನಡೆಸಿದ ಫೋಟೋಗಳನ್ನು ಪ್ರಧಾನಿ ಮೋದಿಯವರು ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ. ಮೇ 21ರವರೆಗೆ ಪ್ರಧಾನಿ ಮೋದಿ ಜಪಾನ್ನಲ್ಲಿ ಇರಲಿದ್ದಾರೆ.
ಉಕ್ರೇನ್ ಅಧ್ಯಕ್ಷರ ಭೇಟಿ?: ಜಿ 7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಕ್ಸಿ ಅವರೂ ಕೂಡ ಇಂದು ಜಪಾನ್ನ ಹಿರೋಶಿಮಾಕ್ಕೆ ತೆರಳಿದ್ದಾರೆ. ಇಲ್ಲಿ ಪ್ರಧಾನಿ ಮೋದಿ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ರಷ್ಯಾ ಯುದ್ಧ ಸಾರಿದ ಬಳಿಕ ಉಕ್ರೇನ್ ಜೊತೆಗಿನ ಮಾತುಕತೆ ಇದೇ ಮೊದಲಾಗಿದೆ.
ರಷ್ಯಾ- ಉಕ್ರೇನ್ ಯುದ್ಧ ಮುಕ್ತಾಯಕ್ಕೆ ಪ್ರಧಾನಿ ಮೋದಿ ಅವರು ಹಲವು ಬಾರಿ ಮನವಿ ಮಾಡಿದ್ದರು. ಈ ಬಗ್ಗೆ ಅಮೆರಿಕ ಕೂಡ ಯುದ್ಧ ನಿಲುಗಡೆಗೆ ಮೋದಿ ಅವರು ಮಧ್ಯಸ್ತಿಕೆ ವಹಿಸಬೇಕು ಎಂದು ಕೋರಿತ್ತು.
ಓದಿ:ಜಪಾನ್ ಪ್ರವಾಸದಲ್ಲಿ ಪ್ರಧಾನಿ ಮೋದಿ.. ಹಿರೋಶಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ