ಇಸ್ತಾಂಬುಲ್(ಟರ್ಕಿ): ಇಲ್ಲಿನ ಪಾದಚಾರಿ ಪ್ರವಾಸಿ ಮಾರ್ಗವಾದ ಇಸ್ತಿಕ್‌ಲಾಲ್ ಬಳಿ ಭಾನುವಾರ ಮಧ್ಯಾಹ್ನ ಭೀಕರ ಬಾಂಬ್ ಸ್ಫೋಟ ಸಂಭವಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು 24 ಗಂಟೆಗಳಲ್ಲೇ ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದ್ದು, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಪ್ರಮುಖ ಆತ್ಮಾಹುತಿ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಟರ್ಕಿಯ ಸಚಿವ ಸುಲೇಮಾನ್ ಸೊಯ್ಲು ಸೋಮವಾರ ಹೇಳಿದ್ದಾರೆ.
ಮಾಧ್ಯಮಗಳ ವರದಿ ಪ್ರಕಾರ, ಮೂರು ಜನರು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಲ್ಲಿ ಒಬ್ಬರು ಮಹಿಳೆ ಮತ್ತು ಇಬ್ಬರು ಯುವಕರು. ದಾಳಿ ಬಳಿಕ ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ ಅನುಮಾನಾಸ್ಪದ ಮಹಿಳೆಯೊಬ್ಬರು ಸ್ಫೋಟದ ಸ್ಥಳದಲ್ಲಿ ಚೀಲವನ್ನು ರಸ್ತೆಯೊಳಗೆ ಇಳಿಸಿ ಹೊರಗೆ ಬರುತ್ತಿರುವುದು ಕಂಡುಬಂದಿದೆ. ಕೆಲವು ನಿಮಿಷಗಳ ನಂತರ ದೊಡ್ಡ ಸ್ಫೋಟ ಸಂಭವಿಸಿತು. ಈ ಚೀಲದಲ್ಲಿ ಬಾಂಬ್ ಇತ್ತು ಎಂದು ನಂಬಲಾಗಿದೆ.
ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸ್ಫೋಟದ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ಸ್ಫೋಟದ ದೃಶ್ಯ ಮತ್ತು ಸದ್ದು ಕೇಳಬಹುದು. ಅಷ್ಟೇ ಅಲ್ಲ, ದಾರಿಹೋಕರು ಆತಂಕದಿಂದ ಓಡುತ್ತಿರುವುದನ್ನು ನೋಡಬಹುದು. ಆಂಬ್ಯುಲೆನ್ಸ್‌ಗಳು, ಅಗ್ನಿಶಾಮಕ ವಾಹನಗಳು ಮತ್ತು ಪೊಲೀಸರು ಸ್ಥಳಕ್ಕೆ ತಲುಪಿರುವುದು ಇತರ ದೃಶ್ಯಗಳಲ್ಲಿ ಕಂಡುಬರುತ್ತದೆ. ಘಟನೆ ಬಳಿಕ ಈ ಪ್ರದೇಶದಲ್ಲಿ ಅಂಗಡಿಗಳನ್ನು ಮುಚ್ಚಲಾಗಿದೆ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.
ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಅನೇಕ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಿವೆ. ಈ ಹಿಂದೆಯೂ 2015 ಮತ್ತು 2017ರಲ್ಲಿ ಇಲ್ಲಿ ಬಾಂಬ್ ಸ್ಫೋಟಗಳು ನಡೆದಿದ್ದವು. ಆಗ ದುಷ್ಕೃತ್ಯದ ಹೊಣೆಗಾರಿಕೆಯನ್ನು ಇಸ್ಲಾಮಿಕ್ ಸ್ಟೇಟ್ ಮತ್ತು ಕೆಲವು ಕುರ್ದಿಶ್ ಗುಂಪುಗಳು ಹೊತ್ತುಕೊಂಡಿದ್ದವು. ಪಾದಚಾರಿ ಪ್ರವಾಸಿ ಮಾರ್ಗವಾದ ಇಸ್ತಿಕ್‌ಲಾಲ್ ಬಳಿ ಭಾನುವಾರ ಮಧ್ಯಾಹ್ನ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದ್ದು, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದೊಂದು ಭಯೋತ್ಪಾದನೆಯ ಕೃತ್ಯವೆಂದು ಪರಿಗಣಿಸಿದ್ದೇವೆ ಅಂತಾ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.
ಓದಿ: ಜನನಿಬಿಡ ಪ್ರದೇಶದಲ್ಲಿ ಭೀಕರ ಮಹಿಳಾ ಆತ್ಮಾಹುತಿ ದಾಳಿ: 6 ಮಂದಿ ಸಾವು, ಭಾರತ ಸಂತಾಪ