ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರ ಭದ್ರತೆಯ ಉಸ್ತುವಾರಿ ಸೇರಿದಂತೆ ಉನ್ನತ ರಹಸ್ಯ ಕಾರ್ಯಾಚರಣೆ ನಡೆಸುವ ಅಮೆರಿಕ ಗುಪ್ತಚರ ಮತ್ತು ಭದ್ರತಾ ಉಪಕರಣ ಕೇಂದ್ರಕ್ಕೆ ಒಳನುಸುಳಲು ಯತ್ನಿಸಿದ ಪಾಕಿಸ್ತಾನದ ಐಎಸ್‌ಐ ಗೂಢಾಚಾರರನ್ನು ಬಂಧಿಸಲಾಗಿದೆ. ಏರಿಯನ್ ತಾಹೆರ್ಜಾಡೆಹ್ (40) ಹೈದರ್ ಅಲಿ(35) ಅಮೆರಿಕ ಅಧಿಕಾರಿಗಳ ಸೋಗಿನಲ್ಲಿ ಬಂದು ಸಿಕ್ಕಿಹಾಕೊಂಡವರು. ಇಬ್ಬರನ್ನೂ ಬಂಧಿಸಿ ಗುರುವಾರ ಕೋರ್ಟ್‌ಗೆ ಹಾಜರುಪಡಿಸಲಾಗಿದೆ.
ಇಬ್ಬರ ಹಿನ್ನೆಲೆಯ ತಪಾಸಣೆಯ ವೇಳೆ ಪಾಕಿಸ್ತಾನದ ಗುಪ್ತಚರ ದಳವಾದ ಐಎಸ್‌ಐ ಸಂಸ್ಥೆಗೆ ಸೇರಿದವರಾಗಿದ್ದಾರೆ ಎಂದು ಗೊತ್ತಾಗಿದೆ. ಬಂಧಿತ ಹೈದರ್ ಅಲಿ ಇರಾನ್ ಮತ್ತು ಪಾಕಿಸ್ತಾನದ ವೀಸಾಗಳನ್ನು ಹೊಂದಿದ್ದಾನೆ. ನುಸುಳುಕೋರರು ತಮ್ಮ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೂ ಐಎಸ್‌ಐ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಗೂಢಾಚಾರಿಕೆ ನಡೆಸುತ್ತಿರುವ ಬಗ್ಗೆ ತಿಳಿದು ಬಂದಿದೆ ಎಂದು ಅಮೆರಿಕ ಅಧಿಕಾರಿಗಳು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಬಂಧಿತ ತಾಹೆರ್ಜಾಡೆಹ್, ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವಿಸ್ (USSS) ನ ಸದಸ್ಯರು ಮತ್ತು ಡಿಎಚ್ಎಸ್ನ ಉದ್ಯೋಗಿಗಳ ಸಂಪರ್ಕ ಸಾಧಿಸಿದ್ದರು. ಇವರ ಸಹಾಯದಿಂದ ಬಾಡಿಗೆರಹಿತ ಅಪಾರ್ಟ್‌ಮೆಂಟ್‌ನಲ್ಲಿ ಐಫೋನ್ಗಳು, ಕಣ್ಗಾವಲು ವ್ಯವಸ್ಥೆ, ಡ್ರೋನ್, ಫ್ಲಾಟ್ ಸ್ಕ್ರೀನ್ ಟೆಲಿವಿಷನ್, ರೈಫಲ್, ಜನರೇಟರ್ಗಳನ್ನು ಪಡೆದುಕೊಂಡಿದ್ದರು. ಅಲ್ಲದೇ, ಸರ್ಕಾರಿ ಅಧಿಕಾರಿಗಳಿಗೆ ನೀಡುವ ಅಧಿಕೃತ ವಾಹನವನ್ನೂ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ಹೆಚ್ಚಿನ ತಪಾಸಣೆಗಾಗಿ ಕೋರ್ಟ್ ಇಬ್ಬರನ್ನೂ ಪೊಲೀಸ್ ಅಧಿಕಾರಿಗಳ ವಶಕ್ಕೆ ನೀಡಿದೆ.
ಇದನ್ನೂ ಓದಿ: ಮಂಡ್ಯ : ಹುಲಿ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ