ವಾಷಿಂಗ್ಟನ್ : ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯಿಂದ ಪಾಕಿಸ್ತಾನವು 3 ಬಿಲಿಯನ್ ಡಾಲರ್ ಬೇಲ್‌ಔಟ್ ಪ್ಯಾಕೇಜ್ ಪಡೆಯುವಲ್ಲಿ ಅಮೆರಿಕ ತೆರೆಮರೆಯಲ್ಲಿದ್ದುಕೊಂಡೇ ಸಹಾಯ ಮಾಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 2019 ರ 6 ಬಿಲಿಯನ್ ಡಾಲರ್ ಸಾಲದ ಹಣ ಬಿಡುಗಡೆ ಮಾಡುವಲ್ಲಿ 8 ತಿಂಗಳ ವಿಳಂಬದ ನಂತರ ಇತ್ತೀಚೆಗೆ ಸಿಬ್ಬಂದಿ ಮಟ್ಟದ ಒಪ್ಪಂದ (SLA) ಕೊನೆಗೂ ಜಾರಿಯಾಗಿದೆ.
"ಸಾಲ ಪಡೆಯುವ ಸಂಪೂರ್ಣ ಪ್ರಕ್ರಿಯೆಯುದ್ದಕ್ಕೂ ಅಮೆರಿಕವು ಪಾಕಿಸ್ತಾನವನ್ನು ಬೆಂಬಲಿಸಿದೆ. ಆದರೆ ಪಾಕಿಸ್ತಾನವು ಐಎಂಎಫ್ನೊಂದಿಗೆ ಒಪ್ಪಿದ ಸುಧಾರಣಾ ಕ್ರಮಗಳನ್ನು ಜಾರಿಗೆ ತರಬೇಕೆಂದು ಅಮೆರಿಕ ಒತ್ತಾಯಿಸಿದೆ." ಎಂದು ರಾಜತಾಂತ್ರಿಕರೊಬ್ಬರು ಹೇಳಿರುವುದನ್ನು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಮೂಲಗಳ ಪ್ರಕಾರ, ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಈ ವಿಷಯದ ಬಗ್ಗೆ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರೊಂದಿಗೆ ಕನಿಷ್ಠ ಎರಡು ಬಾರಿ ದೂರವಾಣಿ ಸಂಭಾಷಣೆಗಳನ್ನು ನಡೆಸಿದ್ದಾರೆ. ಉಭಯ ನಾಯಕರ ಮುಖಾಮುಖಿ ಸಭೆಯಲ್ಲೂ ಈ ವಿಷಯ ಚರ್ಚೆಯಾಗಿದೆ.
ವಾಷಿಂಗ್ಟನ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ಅಮೆರಿಕ ಖಜಾನೆ ಮತ್ತು ವಿದೇಶಾಂಗ ಇಲಾಖೆಯ ಅಧಿಕಾರಿಗಳೊಂದಿಗೆ ನಿಯಮಿತ ಸಂಪರ್ಕ ಸಾಧಿಸಿತ್ತು. ಖಜಾನೆಯಲ್ಲಿನ ಅವರು ಡೆಪ್ಯೂಟಿ ಅಂಡರ್ ಸೆಕ್ರೆಟರಿ ಬ್ರೆಂಟ್ ನೀಮನ್ ಅವರೊಂದಿಗೆ ಸೇರಿ ಪಾಕಿಸ್ತಾನ ಸಹಾಯ ಪಡೆಯಲು ಯಶಸ್ವಿಯಾಗಿದೆ. ಬ್ರೆಂಟ್ ನೀಮನ್ ಅಂತರಾಷ್ಟ್ರೀಯ ಹಣಕಾಸು ವಿಷಯಗಳನ್ನು ನೋಡಿಕೊಳ್ಳುತ್ತಾರೆ.
ಒಪ್ಪಂದಕ್ಕೆ ಕೆಲವು ದಿನಗಳ ಮೊದಲು ಪಾಕಿಸ್ತಾನಿ ತಂಡವನ್ನು ಭೇಟಿ ಮಾಡಿದ ಸೆನೆಟರ್ ಲಿಂಡ್ಸೆ ಗ್ರಹಾಂ ಸೇರಿದಂತೆ ಪ್ರಮುಖ ಯುಎಸ್ ಶಾಸಕರ ಬೆಂಬಲವನ್ನು ಪಾಕಿಸ್ತಾನ ರಾಯಭಾರ ಕಚೇರಿ ಕೋರಿತ್ತು. ಆದಾಗ್ಯೂ ಜೂನ್ ಅಂತ್ಯದಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪ್ಯಾರಿಸ್‌ನಲ್ಲಿ ಐಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರನ್ನು ಭೇಟಿಯಾಗಿ, ನವೆಂಬರ್‌ನಿಂದ ತಡೆಹಿಡಿಯಲಾದ 1.1 ಶತಕೋಟಿ ಡಾಲರ್ ಸಾಲದ ಕಂತನ್ನು ಮಾಡುವಂತೆ ಕೋರಿದ್ದು ಐಎಂಎಫ್ ಪ್ಯಾಕೇಜ್ ಬಿಡುಗಡೆಯಾಗುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎನ್ನಲಾಗಿದೆ.
ಪಾಕಿಸ್ತಾನವು ಕೊನೆಗೂ 3 ಬಿಲಿಯನ್ ಡಾಲರ್ ಬೇಲ್‌ಔಟ್‌ಗಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಕೆಲವೇ ಗಂಟೆಗಳ ನಂತರ ಮಾತನಾಡಿದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್, ಈ ಪ್ರಕ್ರಿಯೆಯಲ್ಲಿ ದೇಶಕ್ಕೆ ಸಹಾಯ ಮಾಡಿದ್ದಕ್ಕಾಗಿ ಚೀನಾಕ್ಕೆ ಧನ್ಯವಾದ ಅರ್ಪಿಸಿದರು. ಈ ಅವಧಿಯಲ್ಲಿ ಚೀನಾ ಪಾಕಿಸ್ತಾನವನ್ನು ಡೀಫಾಲ್ಟ್‌ನಿಂದ ರಕ್ಷಿಸಿದೆ ಎಂದು ಷರೀಫ್ ಹೇಳಿದ್ದಾರೆ.
ಈ ಮಧ್ಯೆ ಪಾಕಿಸ್ತಾನದ ಪ್ರಮುಖ ಸ್ಟಾಕ್ ಸೂಚ್ಯಂಕವು ಸೋಮವಾರ ಮೂರು ವರ್ಷಗಳಲ್ಲಿ ಅತಿ ಹೆಚ್ಚು ಏರಿಕೆ ಕಂಡಿದೆ. ರಾಷ್ಟ್ರವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಆರಂಭಿಕ 3 ಶತಕೋಟಿ ಡಾಲರ್ ಸಾಲದ ಒಪ್ಪಂದ ಮಾಡಿಕೊಂಡ ನಂತರ ದೇಶವು ಡೀಫಾಲ್ಟ್ ಆಗುವ ಆತಂಕ ಸದ್ಯಕ್ಕೆ ನಿವಾರಣೆಯಾಗಿದೆ. ರಾಷ್ಟ್ರದ ಪ್ರಮುಖ ಷೇರು ಸೂಚ್ಯಂಕ KSE-100 ಸೂಚ್ಯಂಕವು ಸ್ಥಳೀಯ ಸಮಯ 9:32 ಕ್ಕೆ ಶೇ 5.8 ರಷ್ಟು ಏರಿಕೆಯಾಗಿದೆ.
ಇದನ್ನೂ ಓದಿ : ಮಾಜಿ ಪ್ರಧಾನಿ ನವಾಜ್ ಸದ್ಯ ಪಾಕಿಸ್ತಾನಕ್ಕೆ ಮರಳಲ್ಲ: ಇನ್ನೂ ಕೆಲ ತಿಂಗಳು ಲಂಡನ್ನಲ್ಲೇ ವಾಸ!