ಪಂಜಾಬ್, ಪಾಕಿಸ್ತಾನ: ಪಾಕಿಸ್ತಾನದ ಮುಲ್ತಾನ್ನಲ್ಲಿ ಮಾನವೀಯತೆ ತಲೆತಗ್ಗಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಮುಲ್ತಾನ್‌ನ ನಿಶ್ತಾರ್ ಆಸ್ಪತ್ರೆಯ ಟೆರೇಸ್‌ನಿಂದ 200ಕ್ಕೂ ಹೆಚ್ಚು ಮೃತದೇಹಗಳು ಪತ್ತೆಯಾದ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ನಿಷ್ಟಾರ್ ಆಸ್ಪತ್ರೆಯ ಮೇಲ್ಛಾವಣಿಯ ಕೊಠಡಿಯಲ್ಲಿ ನೂರಾರು ಮೃತದೇಹಗಳು ಕೊಳೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ಇದು ಮಾತ್ರವಲ್ಲದೇ ಆಸ್ಪತ್ರೆಯ ಮೇಲ್ಛಾವಣಿಯಿಂದ ನೂರಾರು ಮಾನವ ದೇಹದ ಭಾಗಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಮತ್ತು ಹಲವಾರು ದೇಹಗಳ ಅಂಗಗಳು ನಾಪತ್ತೆಯಾಗಿವೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.
ಪಂಜಾಬ್ ಮುಖ್ಯಮಂತ್ರಿ ಚೌಧರಿ ಪರ್ವೇಜ್ ಇಲಾಹಿ ಅವರು ಆಸ್ಪತ್ರೆಯ ಮೇಲ್ಛಾವಣಿಯ ಮೇಲೆ ಬಿದ್ದಿರುವ ಮೃತ ದೇಹಗಳ ಬಗ್ಗೆ ಗಮನ ಹರಿಸಿದ್ದಾರೆ. ಈ ಘಟನೆ ಕುರಿತು ರಾಜ್ಯದ ವಿಶೇಷ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಕಾರ್ಯದರ್ಶಿಯಿಂದ ವರದಿಯನ್ನು ಕೇಳಿದ್ದಾರೆ. ಮೃತ ದೇಹಗಳನ್ನು ಛಾವಣಿಯ ಮೇಲೆ ಎಸೆದು ಅಮಾನವೀಯ ಕೃತ್ಯ ಎಸಗಲಾಗಿದೆ ಎನ್ನುತ್ತಾರೆ ಚೌಧರಿ ಪರ್ವೇಜ್ ಇಲಾಹಿ. ಇದಕ್ಕೆ ಕಾರಣರಾದ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಕುರಿತು ತನಿಖೆ ನಡೆಸಲು 6 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು 3 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಉಪಕುಲಪತಿ ನಿಶ್ತಾರ್ ವೈದ್ಯಕೀಯ ವಿಶ್ವವಿದ್ಯಾಲಯ ಕೂಡ 3 ಸದಸ್ಯರ ಸಮಿತಿ ರಚಿಸಿದ್ದು, ಸಮಿತಿಯು ತನ್ನ ವರದಿಯನ್ನು ಉಪಕುಲಪತಿಗಳಿಗೆ ಸಲ್ಲಿಸಲಿದೆ. ಈ ಸಂದರ್ಭದಲ್ಲಿ, ಮುಲ್ತಾನ್‌ನ ಸಿಪಿಒ ಖುರ್ರಂ ಶಹಜಾದ್ ಮಾತನಾಡಿ, ಸೆಕ್ಷನ್ 174 ರ ಪ್ರಕಾರ ಕಾರ್ಯಾಚರಣೆಯ ನಂತರ ಉಳಿದ ಮೃತ ದೇಹಗಳನ್ನು ಆಸ್ಪತ್ರೆಯ ಶೀತಲ ಕೋಣೆಯಲ್ಲಿ ಇರಿಸಲಾಗಿದೆ.
ಕಾನೂನಿನ ಪ್ರಕಾರ ಮೃತ ದೇಹಗಳನ್ನು ಆಸ್ಪತ್ರೆಯಲ್ಲಿ ಇಡಲು ಪೊಲೀಸರು ಬದ್ಧರಾಗಿದ್ದಾರೆ. ಮೃತ ದೇಹಗಳನ್ನು ಎಷ್ಟು ದಿನ ಇಡಬೇಕು ಮತ್ತು ಅವುಗಳನ್ನು ಏನು ಮಾಡಬೇಕು ಎಂಬುದು ಆಸ್ಪತ್ರೆಯ ಆಡಳಿತದ ಕೆಲಸ ಎಂದು ಖುರ್ರಂ ಶಹಜಾದ್ ಹೇಳಿದ್ದಾರೆ. ನಿಷ್ಟಾರ್ ಆಸ್ಪತ್ರೆಯ ಶವಾಗಾರದ ಫ್ರೀಜರ್ಗಳು ಹಲವು ವರ್ಷಗಳಿಂದ ಕೆಟ್ಟು ನಿಂತಿದ್ದು, 5ರಲ್ಲಿ ಒಂದು ಫ್ರೀಜರ್ ಮಾತ್ರ ಕಾರ್ಯನಿರ್ವಹಿಸುತ್ತಿದೆ. 7ರಿಂದ 8 ಶವಗಳನ್ನು ಇಡಬಹುದಾಗಿದೆ ಎಂದು ಕೆಲವು ಆಸ್ಪತ್ರೆ ಸಿಬ್ಬಂದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಸಲಹೆಗಾರ ಚೌಧರಿ ಜಮಾನ್ ಗುರ್ಜರ್ ಅವರು ಲಾಹೋರ್‌ನಿಂದ ಸುಮಾರು 350 ಕಿಮೀ ದೂರದಲ್ಲಿರುವ ಮುಲ್ತಾನ್‌ನಲ್ಲಿರುವ ನಿಶ್ತಾರ್ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರು ಆಸ್ಪತ್ರೆಯ ಶವಾಗಾರದ ಛಾವಣಿಯ ಮೇಲೆ ಅನೇಕ ಅಪರಿಚಿತ ಮೃತ ದೇಹಗಳು ಇರುವುದನ್ನು ಗಮನಿಸಿದರು. ಈ ಎಲ್ಲ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ನಿಶ್ತಾರ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ.ಮರ್ಯಮ್ ಅಶ್ರಫ್ ಮಾತನಾಡಿ, ಪೊಲೀಸ್ ಇಲಾಖೆಯಿಂದ ಕೆಲವು ಹಕ್ಕು ಪಡೆಯದ ಮತ್ತು ಗುರುತಿಸಲಾಗದ ಶವಗಳನ್ನು ಪತ್ತೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದರು. ಈ ಶವಗಳು ಕೊಳೆಯಲು ಪ್ರಾರಂಭಿಸಿದವು. ಆದ್ದರಿಂದ ಅವುಗಳನ್ನು ವಿವಿಧ ವೈದ್ಯಕೀಯ ಬಳಕೆಗಳಿಗಾಗಿ ಒಣಗಿಸಲು ಆಸ್ಪತ್ರೆಯ ಛಾವಣಿಯ ಮೇಲೆ ಇರಿಸಲಾಯಿತು.
ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ವೈದ್ಯಕೀಯ ಪ್ರಯೋಗಗಳಿಗೆ ದೇಹದ ಭಾಗಗಳನ್ನು ಬಳಸುತ್ತಾರೆ ಮತ್ತು ಹಕ್ಕು ಪಡೆಯದ ಮೃತ ದೇಹಗಳನ್ನು ಸರ್ಕಾರ ನಿಗದಿಪಡಿಸಿದ ನಿಯಮಗಳ ಪ್ರಕಾರ ಮಾತ್ರ ಬಳಸುತ್ತಾರೆ ಎಂದು ಹೇಳಿದರು. ವೈದ್ಯಕೀಯ ಬಳಕೆಗಾಗಿ ಮೂಳೆಗಳು ಮತ್ತು ತಲೆಬುರುಡೆಗಳನ್ನು ಸಹ ಹೊರತೆಗೆಯಲಾಗುತ್ತದೆ ಎಂದು ಅವರು ವಿವರಿಸಿದರು.
ಓದಿ: ಅಮಾನವೀಯ.. ಹಾವು ಕಡಿತದಿಂದ ಬಾಲಕ ಸಾವು: ದ್ವಿಚಕ್ರ ವಾಹನದಲ್ಲಿ ಹೆಣ ಸಾಗಿಸಿದ ತಂದೆ