ಮಿಚಿಗನ್(ಅಮೆರಿಕ) : ಡೆಟ್ರಾಯಿಟ್ ಸಿನಗಾಗ್ ಅಧ್ಯಕ್ಷೆ ಸಮಂತಾ ವೋಲ್ ಹತ್ಯೆಯು ದ್ವೇಷ ಪೂರಿತ ಹತ್ಯೆ ಎಂಬ ಬಗ್ಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಡೆಟ್ರಾಯಿಟ್ಸ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಹತ್ಯೆಯು ಯಹೂದಿಗಳನ್ನು ಗುರಿಯಾಗಿಸಿಕೊಂಡು ನಡೆದಿದೆ ಎಂದು ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಶನಿವಾರ ಸಮಂತಾ ವೋಲ್ ಅವರು ತಮ್ಮ ಮನೆಯ ಹೊರಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರನ್ನು ಚೂರಿ ಇರಿದು ಅಪರಿಚಿತರು ಹತ್ಯೆ ಮಾಡಿದ್ದರು. ಬಳಿಕ ವೋಲ್ ಮೃತಪಟ್ಟಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಮೃತರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಜೊತೆಗೆ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ಆರಂಭಿಸಿದ್ದರು.
ಪೊಲೀಸರ ಮಾಹಿತಿ ಪ್ರಕಾರ, ಸಮಂತಾ ವೋಲ್ ಹತ್ಯೆ ಪ್ರಕರಣದ ತನಿಖೆ ಮುಂದುವರೆದಿದೆ. ಯಹೂದಿಗಳನ್ನು ಗುರಿಯಾಗಿಸಿ ಹತ್ಯೆ ನಡೆಸಲಾಗಿದೆ ಎಂಬ ಬಗ್ಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ತನಿಖೆ ನಡೆಯುವವರೆಗೆ ಜನರು ತಾಳ್ಮೆಯಿಂದ ಇರಬೇಕು. ಪೊಲೀಸರು ಪ್ರಕರಣ ತನಿಖೆಯನ್ನು ಸರಿಯಾದ ರೀತಿಯಲ್ಲಿ ನಡೆಸಲಿದ್ದಾರೆ ಎಂದು ಪೊಲೀಸ್ ಅಧಿಕಾರಿ ಜೇಮ್ಸ್ ವೈಟ್ ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೆನ್ ಹಮಾಸ್ ಉಗ್ರರ ನಡುವಿನ ಸಂಘರ್ಷದ ನಡುವೆಯೇ, ಶನಿವಾರ ಅಮೆರಿಕದ ಡೆಟ್ರಾಯಿಟ್ನ ಮನೆಯಲ್ಲಿ ಸಮಂತಾ ವೋಲ್ ಶವವಾಗಿ ಪತ್ತೆಯಾಗಿದ್ದರು. ಇದನ್ನು ಯಹೂದಿ ದ್ವೇಷ ಪೂರಿತ ಹತ್ಯೆ ಎಂದು ಶಂಕಿಸಲಾಗಿತ್ತು. ಟೈಮ್ಸ್ ಆಫ್ ಇಸ್ರೇಲ್ ವರದಿ ಪ್ರಕಾರ, ವೋಲ್ ಹತ್ಯೆ ಸಂಬಂಧ ಡೆಟ್ರಾಯಿಟ್ ಪೊಲೀಸ್ ಅಧಿಕಾರಿಗಳು ವಿಸ್ತೃತ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಂತ್ರಜ್ಞರ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದೆ. ವೋಲ್ ಹತ್ಯೆ ಸಂಬಂಧ ಹಲವು ಜನರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದೆ.
40 ವರ್ಷದ ಸಮಂತಾ ವೋಲ್ ಅವರು 2022ರಿಂದ ಐಸಾಕ್ ಅಗ್ರೀ ಡೌನ್ಟೌನ್ ಸಿನಗಾಗ್ ಅನ್ನು ಮುನ್ನಡೆಸಿದ್ದರು. ಡೆಮಾಕ್ರಟಿಕ್ ರೆಪ್ ಎಲಿಸ್ಸಾ ಸ್ಲಾಟ್ಕಿನ್ ಅವರ ಮಾಜಿ ಸಹಾಯಕರಾಗಿ ಮತ್ತು ಅಟಾರ್ನಿ ಜನರಲ್ ಡಾನಾ ನೆಸ್ಸೆಲ್ ಅವರ ಪ್ರಚಾರ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ್ದರು. ಸಮಂತಾ ವೋಲ್ ಸಾವಿಗೆ ಗವರ್ನರ್ ಗ್ರೆಚೆನ್ ವಿಟ್ಮರ್, ಮೇಯರ್ ಸಾಟ್ಲಿನ್ ಸೇರಿ ಹಲವರು ಸಂತಾಪ ಸೂಚಿಸಿದ್ದರು.
ಇದನ್ನೂ ಓದಿ : ಡೆಟ್ರಾಯಿಟ್ ಸಿನಗಾನ್ ಅಧ್ಯಕ್ಷೆಗೆ ಇರಿದು ಕೊಲೆ.. ಮನೆಯ ಹೊರಗೆ ಸಮಂತಾ ವೋಲ್ ಶವವಾಗಿ ಪತ್ತೆ