ಖಾರ್ಟೂಮ್: ಸಾರ್ವಜನಿಕ ಕಚೇರಿಗಳು ಮತ್ತು ನಾಗರಿಕರ ಮನೆಗಳಿಂದ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು (ಆರ್‌ಎಸ್ಎಫ್) ಹೊರಗೆ ಹೋಗದ ಹೊರತು ಯಾವುದೇ ಶಾಂತಿ ಒಪ್ಪಂದಕ್ಕೆ ಸೇನೆಯು ಸಹಿ ಹಾಕುವುದಿಲ್ಲ ಎಂದು ಸುಡಾನ್ ಸೇನಾ ಮುಖ್ಯಸ್ಥ ಅಬ್ದೆಲ್ ಫತಾಹ್ ಅಲ್-ಬುರ್ಹಾನ್ ಹೇಳಿದ್ದಾರೆ. ಪೂರ್ವ ಸುಡಾನ್ ನ ರೆಡ್ ಸೀ ರಾಜ್ಯದಲ್ಲಿ ಅಧಿಕಾರಿಗಳು ಮತ್ತು ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಸುಡಾನ್ನ ಟ್ರಾನ್ಸಿಷನಲ್ ಸಾರ್ವಭೌಮ ಮಂಡಳಿಯ ಅಧ್ಯಕ್ಷರೂ ಆಗಿರುವ ಅಲ್-ಬುರ್ಹಾನ್ ಈ ಹೇಳಿಕೆ ನೀಡಿದ್ದಾರೆ ಎಂದು ಸಾರ್ವಭೌಮ ಮಂಡಳಿ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
"ಸುಡಾನ್ ಸಶಸ್ತ್ರ ಪಡೆಗಳು ಮತ್ತು ಸುಡಾನ್ ಜನರಿಗೆ ಅವಮಾನ ಮಾಡುವ ಯಾವುದೇ ಶಾಂತಿ ಒಪ್ಪಂದಕ್ಕೆ ನಾವು ಸಹಿ ಹಾಕುವುದಿಲ್ಲ" ಎಂದು ಅಲ್-ಬುರ್ಹಾನ್ ಹೇಳಿದರು. "ಬಂಡುಕೋರರು ಸಾರ್ವಜನಿಕ ಸ್ಥಳಗಳು, ಆಸ್ಪತ್ರೆಗಳು ಮತ್ತು ನಾಗರಿಕರ ಮನೆಗಳಿಂದ ಹೊರಹೋಗುವುದನ್ನು ಕದನ ವಿರಾಮ ಒಪ್ಪಂದ ಒಳಗೊಂಡಿರಲೇಬೇಕು" ಎಂದು ಅವರು ಹೇಳಿದರು. ಸುಡಾನ್ ಸಶಸ್ತ್ರ ಪಡೆಗಳು (ಎಸ್ಎಎಫ್) ಬಂಡುಕೋರರನ್ನು ಸೋಲಿಸಲು ಹೋರಾಡುತ್ತಲೇ ಇರುತ್ತವೆ ಎಂದು ಅವರು ಹೇಳಿದರು.
ಈ ವರ್ಷದ ಏಪ್ರಿಲ್ 15 ರಿಂದ ಸುಡಾನ್ ಎಸ್ಎಎಫ್ ಮತ್ತು ಆರ್ ಎಸ್ಎಫ್ ನಡುವೆ ಭೀಕರ ಸಂಘರ್ಷ ನಡೆಯುತ್ತಿದೆ. ಸಂಘರ್ಷದಲ್ಲಿ 12,000 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ಡಿಸೆಂಬರ್ ಆರಂಭದಲ್ಲಿ ಹೇಳಿಕೆ ನೀಡಿದೆ.
ಸುಡಾನ್ ಮಿಲಿಟರಿ ಮತ್ತು ಅರೆಸೈನಿಕ ಗುಂಪಿನ ನಡುವಿನ ಹೋರಾಟವು ಸಂಘರ್ಷದಿಂದ ಸ್ಥಳಾಂತರಗೊಂಡ ಕುಟುಂಬಗಳಿಗೆ ಸುರಕ್ಷಿತ ತಾಣವಾಗಿದ್ದ ಪ್ರಾಂತ್ಯಕ್ಕೂ ವ್ಯಾಪಿಸಿದೆ. ಈ ತಿಂಗಳ ಆರಂಭದಲ್ಲಿ ಕ್ಷಿಪ್ರ ಬೆಂಬಲ ಪಡೆಗಳು ದಾಳಿ ನಡೆಸಿದ ನಂತರ ಜಜೀರಾ ಪ್ರಾಂತ್ಯದ ಪ್ರಾಂತೀಯ ರಾಜಧಾನಿ ವಾಡ್ ಮೆದಾನಿ ನಗರದಲ್ಲಿ ಘರ್ಷಣೆ ಭುಗಿಲೆದ್ದಿದೆ. ಈ ವಾರದ ಆರಂಭದಲ್ಲಿ ವಾಡ್ ಮೆದಾನಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಆರ್ ಎಸ್ಎಫ್ ಹೇಳಿದೆ. ಇದರಿಂದ ಸುಮಾರು 3 ಲಕ್ಷ ಜನ ಮತ್ತೊಮ್ಮೆ ಸ್ಥಳಾಂತರವಾಗುವ ಅನಿವಾರ್ಯತೆ ಎದುರಾಗಿದೆ.
ವಿಶ್ವಸಂಸ್ಥೆಯ ವಲಸೆ ವಿಭಾಗದ ಪ್ರಕಾರ 2,50,000 ರಿಂದ 3,00,000 ಜನ ಪ್ರಾಂತ್ಯದಿಂದ ಕಾಲ್ನಡಿಗೆಯಲ್ಲಿ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ. ಕೆಲವರು ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಮತ್ತು ಇನ್ನೂ ಹಲವರು ಸ್ಥಳೀಯ ಸಮುದಾಯಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಪರಿಷ್ಕರಣೆ