ಪರ್ತ್ (ಆಸ್ಟ್ರೇಲಿಯಾ): ಇಂಡಿಯನ್ ಸೊಸೈಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯಾ (ISWA) ಆಯೋಜಿಸಿದ್ದ ಸಭೆಯಲ್ಲಿ ಇದೇ ಮೊದಲ ಬಾರಿಗೆ ಭಾರತ ಸರ್ಕಾರದ ಸಚಿವರ ನೇತೃತ್ವದ ನಿಯೋಗವೊಂದು ಅನಿವಾಸಿ ಭಾರತೀಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ.
ಐಎಸ್ಡಬ್ಲ್ಯೂಎ ಕಮ್ಯೂನಿಟಿ ಸೆಂಟರ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಪ್ರಮುಖ ಜನಪ್ರತಿನಿಧಿಗಳು ಹಾಗೂ ಅನಿವಾಸಿ ಭಾರತೀಯರು ಹಾಜರಿದ್ದರು. ಆಸ್ಟ್ರೇಲಿಯಾದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರ ನೇತೃತ್ವದಲ್ಲಿ ನಿಯೋಗವೊಂದು ಇಲ್ಲಿಗೆ ಭೇಟಿ ನೀಡಿದೆ. ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಈ ಭೇಟಿ ನಡೆದಿದೆ.
ಅನಿವಾಸಿ ಭಾರತೀಯರೊಂದಿಗಿನ ಸಭೆ ಅತ್ಯಂತ ಫಲಪ್ರದ ಮತ್ತು ಸಂಬಂಧ ವೃದ್ಧಿ ದೃಷ್ಟಿಯಲ್ಲಿ ಚೇತೋಹಾರಿಯಾಗಿತ್ತು ಎಂದು ಸಚಿವ ಜೋಶಿ ಟ್ವೀಟ್ ಮಾಡಿದ್ದಾರೆ. ವೆಸ್ಟರ್ನ್ ಆಸ್ಟ್ರೇಲಿಯಾದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅನಿವಾಸಿ ಭಾರತೀಯರಿದ್ದು, ಐಎಸ್ಡಬ್ಲ್ಯೂಎ ಒಂದು ಪ್ರಬಲ ಸಂಘಟನೆಯಾಗಿ ಬೆಳೆದಿದೆ. ನಮ್ಮ ಸಹೋದರ ಸಹೋದರಿಯರನ್ನು ನಮ್ಮದೇ ಮನೆಯಲ್ಲಿ ಭೇಟಿ ಮಾಡಿ, ನಮ್ಮದೇ ಮನೆಗೆ ಬಂದ ರೀತಿ ಭಾಸವಾಗುತ್ತಿದೆ ಎಂದು ಜೋಶಿ ಹೇಳಿದ್ದಾರೆ.
ನಿಯೋಗದ ಭೇಟಿ ವೇಳೆ ಪ್ರಸ್ತುತಪಡಿಸಿದ ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ವಾದಿಷ್ಟ ಆಹಾರ ಹಾಗೂ ಆತ್ಮೀಯ ಸ್ವಾಗತ ತುಂಬಾ ಸಂತೋಷ ನೀಡಿದೆ. ಭವಿಷ್ಯದಲ್ಲಿ ಇಂಥ ಇನ್ನಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಸಚಿವ ಜೋಶಿ ಟ್ವೀಟ್ನಲ್ಲಿ ಹೇಳಿದ್ದಾರೆ. ಐಎಸ್ಡಬ್ಲ್ಯೂಎ ಸಭೆಯಲ್ಲಿ ಪಶ್ಚಿಮ ಆಸ್ಟ್ರೇಲಿಯಾದ ಉಪ ಪ್ರಧಾನಿ ರೋಜರ್ ಕುಕ್, ಶಾಸಕರಾದ ಯಾಜ್ ಮುಬಾರಕೈ, ಡಾ. ಜಗದೀಶ್ ಕೃಷ್ಣನ್ ಮತ್ತು ಸ್ಯಾಮ್ ಲಿಮ್ ಉಪಸ್ಥಿತರಿದ್ದರು.