ಚಿಕಾಗೋ (ಅಮೆರಿಕ): ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಪರಿಣಾಮ ಜಗತ್ತಿನ ಇತರ ದೇಶಗಳ ಮೇಲೆಯೂ ಬಿದ್ದಿದೆ. ಅಮೆರಿಕದ ಪ್ಲೇನ್‌ಫೀಲ್ಡ್‌ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ವೃದ್ಧನೊಬ್ಬ ಇಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಆರು ವರ್ಷದ ಬಾಲಕ ಸಾವನ್ನಪ್ಪಿದ್ದು, ಆತನ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಬಾಲಕನಿಗೆ 26 ಬಾರಿ ಇರಿದ ವೃದ್ಧ: ಮಾಧ್ಯಮ ವರದಿಗಳ ಪ್ರಕಾರ, 71 ವರ್ಷದ ಜೋಸೆಫ್ ಕಬುಜಾ ಎಂಬ ಆರೋಪಿ ಆರು ವರ್ಷದ ಬಾಲಕನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಅಮೆರಿಕದ ಪ್ಲೇನ್‌ಫೀಲ್ಡ್ ಎಂಬಲ್ಲಿ ಬಾಲಕನ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ ಆರೋಪಿ ಕಬುಜಾ ಬರೋಬ್ಬರಿ 26 ಬಾರಿ ಇರಿದಿದ್ದನು. ಬಳಿಕ ಆ ಬಾಲಕನ ತಾಯಿಯ ಮೇಲೆಯೂ ದಾಳಿ ಮಾಡಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಇಲಿನಾಯ್ಸ್ ಕ್ಯಾವಿಲ್ ಕೌಂಟಿ ಶೆರಿಫ್ ಕಚೇರಿಯ ಪ್ರಕಾರ, ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಈ ಘಟನೆ ನಡೆದಿದೆ. ಜೋಸೆಫ್ ಕಬುಜಾ ವಿರುದ್ಧ ಕೊಲೆ, ಕೊಲೆಯ ಯತ್ನದಡಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದೆ.
ಮನೆಯ ಮಾಲೀಕರು ನನ್ನ ಮತ್ತು ನನ್ನ ಮಗುವಿನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ನಾನು ಭಯಭೀತಳಾಗಿ ಸ್ನಾನಗೃಹದಲ್ಲಿ ಅಡಗಿಕೊಂಡಿದ್ದೇನೆ ಎಂದು ಮಹಿಳೆ ಕೌಂಟಿ ಶೆರಿಫ್ ಕಚೇರಿಗೆ ಫೋನ್ ಮಾಡಿ ತಿಳಿಸಿದ್ದಳು. ಕೂಡಲೇ ನಾವು ಘಟನಾ ಸ್ಥಳವನ್ನು ತಲುಪಿದ್ದೆವು. ಆರೋಪಿಯು ಬಾಲಕನಿಗೆ 26 ಬಾರಿ ಇರಿದಿದ್ದನು. ಬಳಿಕ ಬಾಲಕ ಮತ್ತು ಆತನ ತಾಯಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಾಲಕ ಬದುಕುಳಿಯಲಿಲ್ಲ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೊಲೆ ಘಟನೆಯು ಚಿಕಾಗೋದಿಂದ ಪಶ್ಚಿಮಕ್ಕೆ 64 ಕಿಲೋಮೀಟರ್ ದೂರದಲ್ಲಿ ನಡೆದಿದೆ. ಸಂತ್ರಸ್ತರು ಯಾವ ದೇಶದವರು ಎಂಬುದನ್ನು ಜಿಲ್ಲಾಧಿಕಾರಿಗಳ ಕಚೇರಿ ಇನ್ನು ಸ್ಪಷ್ಟಪಡಿಸಿಲ್ಲ. ಆದರೆ ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಶನ್ಸ್‌ನ ಚಿಕಾಗೋ ಕಚೇರಿಯು ಮಗುವನ್ನು ಪ್ಯಾಲೇಸ್ಟಿನಿಯನ್-ಅಮೆರಿಕನ್ ಎಂದು ವಿವರಿಸಿದೆ.
ನಾವು ಪ್ರಾಣಿಗಳಲ್ಲ. ನಾವು ಮನುಷ್ಯರು. ಜನರು ನಮ್ಮನ್ನು ಮನುಷ್ಯರಂತೆ ನೋಡಬೇಕು. ನಮ್ಮನ್ನು ಮನುಷ್ಯರಂತೆ ಭಾವಿಸಬೇಕು. ನಮ್ಮೊಂದಿಗೆ ಮನುಷ್ಯರಂತೆ ವ್ಯವಹರಿಸಬೇಕು ಎಂದು ಮೃತ ಬಾಲಕನ ಬಾಲಕನ ಸಂಬಂಧಿ ಯೂಸೆಫ್ ಹ್ಯಾನನ್ ಹೇಳಿದರು. 1999 ರಲ್ಲಿ ಅಮೆರಿಕದ ಸಾರ್ವಜನಿಕ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡಲು ಈ ಕುಟುಂಬಸ್ಥರು ವಲಸೆ ಬಂದಿದ್ದರು ಪ್ಯಾಲೆಸ್ತೀನ್-ಅಮೆರಿಕನ್ ಹ್ಯಾನನ್.
ಯಹೂದಿ-ವಿರೋಧಿ ಅಥವಾ ಇಸ್ಲಾಮೋಫೋಬಿಕ್ ಭಾವನೆಗಳಿಂದ ಪ್ರೇರೇಪಿಸಲ್ಪಟ್ಟ ಹಿಂಸಾಚಾರಕ್ಕಾಗಿ ಅಮೆರಿಕನ್ ನಗರಗಳಲ್ಲಿನ ಪೊಲೀಸ್ ಮತ್ತು ಫೆಡರಲ್ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ. ಯಹೂದಿ ಮತ್ತು ಮುಸ್ಲಿಂ ಗುಂಪುಗಳು ಸಾಮಾಜಿಕ ಮಾಧ್ಯಮದಲ್ಲಿ ದ್ವೇಷಪೂರಿತ ಮತ್ತು ಬೆದರಿಕೆಯ ವಾಗ್ವಾದಗಳನ್ನು ಮುಂದುವರಿಸಿವೆ.
ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಅಂದಿನಿಂದ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಂದುವರಿದಿದೆ. ಈ ಯುದ್ಧದಲ್ಲಿ ಎರಡೂ ಕಡೆಯಿಂದ 3500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಮಾಸ್ ದಾಳಿಯಲ್ಲಿ 1400 ಕ್ಕೂ ಹೆಚ್ಚು ಇಸ್ರೇಲಿ ಜನರು ಸಾವನ್ನಪ್ಪಿದ್ದಾರೆ. ಗಾಜಾದಲ್ಲಿ ಇಸ್ರೇಲ್‌ನ ಕಾರ್ಯಾಚರಣೆಯಲ್ಲಿ 2600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಓದಿ: ಯುದ್ಧ ದಿನ-9: ಗಾಜಾದಲ್ಲಿ ನಾಗರಿಕರ ಸ್ಥಳಾಂತರಕ್ಕೆ 3 ತಾಸು ಕದನ ವಿರಾಮ ನೀಡಿದ ಇಸ್ರೇಲ್