ಮನಿಲಾ: ಯಾವುದೇ ದೇಶದ ಸುಸ್ಥಿರ ಅಭಿವೃದ್ಧಿಗೆ ಸಾಕ್ಷರತೆ ಅತ್ಯಂತ ನಿರ್ಣಾಯಕ. ಉತ್ತಮ ಶಿಕ್ಷಣ ಪಡೆದ ಮಕ್ಕಳು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಪೂರಕ ಕೊಡುಗೆ ನೀಡುತ್ತಾರೆ. ಇದೀಗ, ಫಿಲಿಪ್ಪೀನ್ಸ್‌ನಲ್ಲಿ ಸಾಕ್ಷರತೆಯ ಪ್ರಮಾಣವು ಶೇಕಡಾ 97ಕ್ಕೆ ಏರಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ 1.2% ಸುಧಾರಿಸಿದೆ ಎಂದು ಅಲ್ಲಿನ ಸರ್ಕಾರ ಅಂಕಿಅಂಶ ನೀಡಿದೆ.
2020ರ ಜನಸಂಖ್ಯೆ ಮತ್ತು ವಸತಿ ಗಣತಿ ಸಮೀಕ್ಷೆಯ ಫಲಿತಾಂಶಗಳನ್ನು ಉಲ್ಲೇಖಿಸಿ ಫಿಲಿಪ್ಪೀನ್ಸ್ ಅಂಕಿಅಂಶ ಪ್ರಾಧಿಕಾರ (PSA) ನೀಡಿದ ಮಾಹಿತಿಯಂತೆ, ಐದು ವರ್ಷಕ್ಕಿಂತ ಮೇಲ್ಪಟ್ಟ 97.6 ಮಿಲಿಯನ್ ಫಿಲಿಪ್ಪೀನ್ಸ್ ಜನರಲ್ಲಿ 94.6 ಮಿಲಿಯನ್ ಸಾಕ್ಷರಸ್ಥರಾಗಿದ್ದಾರೆ. ಅವರು ದೇಶದ ಯಾವುದೇ ಭಾಷೆ ಅಥವಾ ಉಪಭಾಷೆಗಳಲ್ಲಿ ಸರಳ ಸಂದೇಶವನ್ನು ಓದುವುದು ಮತ್ತು ಬರೆಯಬಲ್ಲರು ಎಂದು ತಿಳಿಸಿದೆ.
ಮೆಟ್ರೋ ಮನಿಲಾ ಪ್ರದೇಶವು 98.9% ಅತ್ಯಧಿಕ ಸಾಕ್ಷರತೆ ದರ ಹೊಂದಿದೆ. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಮಿಂಡನಾಒಹಾದ್‌ನಲ್ಲಿನ ಬ್ಯಾಂಗ್‌ಸಮೊರೊ ಸ್ವಾಯತ್ತ ಪ್ರದೇಶವು 86.4 ಪ್ರತಿಶತದಷ್ಟು ಕಡಿಮೆ ಸಾಕ್ಷರತೆಯ ದರ ಹೊಂದಿದೆ. ಹಾಗೆಯೇ, 2020ರಲ್ಲಿ ಸಾಕ್ಷರತೆಯ ಪ್ರಮಾಣವು ಮಹಿಳೆಯರಲ್ಲಿ (ಶೇಕಡಾ 97.1) ಸ್ವಲ್ಪ ಹೆಚ್ಚಾಗಿದೆ, ಪುರುಷರ ಸಾಕ್ಷರತೆ ಶೇಕಡಾ (96.8) ಇದೆ. 2015 ರಲ್ಲಿದ್ದ ಸ್ಥಿತಿಯೇ ಈಗಲೂ ಮುಂದಿವರೆದಿದೆ ಎಂದು ಡೇಟಾದಿಂದ ತಿಳಿಯಬಹುದು.
ಮಾಹಿತಿಯ ಪ್ರಕಾರ, ಪ್ರತಿ ಆರು ಕಾಲೇಜು ಪದವೀಧರರಲ್ಲಿ ಒಬ್ಬರು ಶಿಕ್ಷಣ ವಿಜ್ಞಾನದಲ್ಲಿ ಪದವಿ ಹೊಂದಿದ್ದಾರೆ. ಪುರುಷರು ಮ್ಯಾನೇಜ್‌ಮೆಂಟ್ ಮತ್ತು ಅಡ್ಮಿನಿಸ್ಟ್ರೇಷನ್ ಕೋರ್ಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ, ಮಹಿಳೆಯರು ಶಿಕ್ಷಣ ವಿಜ್ಞಾನ ಕೋರ್ಸ್‌ಗಳನ್ನು ಆರಿಸಿಕೊಳ್ಳುತ್ತಿದ್ದಾರೆ.
ಸಾಕ್ಷರತೆ ಎಂದರೇನು? : ಸಾಕ್ಷರತೆಯನ್ನು ಓದುವ ಮತ್ತು ಬರೆಯುವ ಸಾಮರ್ಥ್ಯವೆಂದು ಹೇಳಲಾಗುತ್ತದೆ. ಸಾಕ್ಷರತೆಯು ವ್ಯಕ್ತಿಗಳು ತಮ್ಮ ಗುರಿಗಳ ಸಾಧನೆಗೆ ಹಾಗೂ ತಮ್ಮ ಜ್ಞಾನ ಮತ್ತು ಸಾಮರ್ಥ್ಯದ ಬೆಳವಣಿಗೆಗೆ ಮತ್ತು ಸಮಾಜದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುವ ಕಲಿಕೆಯನ್ನು ಒಳಗೊಂಡಿದೆ. ಪ್ರತಿವರ್ಷ ಸೆಪ್ಟೆಂಬರ್ 8 ಅನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. 1966ರಲ್ಲಿ ಯುನೆಸ್ಕೋ ಜನರಲ್ ಕಾನ್ಫರೆನ್ಸ್‌ನಲ್ಲಿ ಸೆಪ್ಟೆಂಬರ್ 8 ಅನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಘೋಷಿಸಿತು.
ಭಾರತದಲ್ಲಿ ಸಾಕ್ಷರತೆ ಪ್ರಮಾಣ ಎಷ್ಟಿದೆ? : 2011ರ ಜನಗಣತಿಯ ಪ್ರಕಾರ, ಭಾರತದ ಸಾಕ್ಷರತೆಯ ಪ್ರಮಾಣ ಶೇಕಡಾ 74.04ರಷ್ಟಿತ್ತು. ಅಗ್ರ ಐದು ಸಾಕ್ಷರತೆ ಹೊಂದಿದ ರಾಜ್ಯಗಳೆಂದರೆ ಕೇರಳ (ಶೇ. 93.91), ಲಕ್ಷದ್ವೀಪ (ಶೇ. 92.28), ಮಿಜೋರಾಂ (ಶೇ. 91.5), ತ್ರಿಪುರ (ಶೇ. 87.75) ಮತ್ತು ಗೋವಾ (ಶೇ. 87.40). ಹಾಗೆಯೇ, ಭಾರತವು 313 ಮಿಲಿಯನ್ ಅನಕ್ಷಸ್ಥರನ್ನು ಹೊಂದಿದ್ದು, ಅವರಲ್ಲಿ ಶೇ. 59ರಷ್ಟು ಮಹಿಳೆಯರಿದ್ದಾರೆ.
2023ರ ಮಾರ್ಚ್ ತಿಂಗಳಲ್ಲಿ ಭಾರತದ ಶಿಕ್ಷಣ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ದೇಶದಲ್ಲಿ ಬಿಹಾರ 61.8% ರಷ್ಟು ಕಡಿಮೆ ಸಾಕ್ಷರತೆ ಹೊಂದಿದೆ. ನಂತರ ಅರುಣಾಚಲ ಪ್ರದೇಶ 65.3% ಮತ್ತು ರಾಜಸ್ಥಾನ 66.1% ಸಾಕ್ಷರತೆ ಹೊಂದಿವೆ. ಕೇರಳವು ಭಾರತದಲ್ಲಿ ಅತಿ ಹೆಚ್ಚು ಸಾಕ್ಷರತೆಯನ್ನು ಹೊಂದಿದ್ದು (94%), ನಂತರದ ಸ್ಥಾನದಲ್ಲಿ ಲಕ್ಷದ್ವೀಪ (91.85%) ಮತ್ತು ಮಿಜೋರಾಂ (91.33%) ಹೊಂದಿವೆ. ಲೋಕಸಭೆ ಕಲಾಪದ ವೇಳೆ ಲಿಖಿತ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಈ ಮಾಹಿತಿ ಒದಗಿಸಿದ್ದರು.
ಇದನ್ನೂ ಓದಿ : ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ : ಭಾರತದ ಸಾಕ್ಷರತೆ ಪ್ರಮಾಣವೆಷ್ಟು?