ಟ್ರಿಪೋಲಿ (ಲಿಬಿಯಾ) : ಲಿಬಿಯಾದ ರಾಜಧಾನಿ ಟ್ರಿಪೋಲಿಯಲ್ಲಿ ಎರಡು ಸಶಸ್ತ್ರ ಬಣಗಳ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ದೇಶದ ತುರ್ತು ಸೇವೆಗಳ ವಿಭಾಗ ಹೇಳಿದೆ. ಸಂಘರ್ಷದಲ್ಲಿ ಒಟ್ಟು 106 ಜನ ಗಾಯಗೊಂಡಿದ್ದಾರೆ ಎಂದು ತುರ್ತು ಸೇವೆಗಳ ವಿಭಾಗ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಟ್ರಿಪೋಲಿಯ ಪ್ರಮುಖ ವಿಮಾನ ನಿಲ್ದಾಣವಾದ ಮಿಟಿಗಾ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದ 444 ಬ್ರಿಗೇಡ್ನ ಕಮಾಂಡರ್ ಮಹಮೂದ್ ಹಮ್ಜಾ ಅವರನ್ನು ಬಂಧಿಸಿದ ನಂತರ ಸೋಮವಾರ ಘರ್ಷಣೆ ಪ್ರಾರಂಭವಾಗಿದೆ. ವಿಮಾನ ನಿಲ್ದಾಣವನ್ನು ನಿಯಂತ್ರಿಸುವ 444 ಬ್ರಿಗೇಡ್ನ ಮುಖ್ಯ ಪ್ರತಿಸ್ಪರ್ಧಿಯಾದ ಮತ್ತೊಂದು ವಿಶೇಷ ಭದ್ರತಾ ಪಡೆ ಹಮ್ಜಾನನ್ನು ಬಂಧಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಮ್ಜಾ ಬಂಧನದ ಕಾರಣ ಮಾತ್ರ ಇನ್ನೂ ತಿಳಿದುಬಂದಿಲ್ಲ.
ಹಮ್ಜಾ ಅವರನ್ನು ತಟಸ್ಥ ಗುಂಪಿಗೆ ವರ್ಗಾಯಿಸಲು ಯುಎನ್ ಮಾನ್ಯತೆ ಪಡೆದ ರಾಷ್ಟ್ರೀಯ ಏಕತಾ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಮಂಗಳವಾರ ತಡರಾತ್ರಿ ಘರ್ಷಣೆಗಳು ಕೊನೆಗೊಂಡಿವೆ ಎಂದು ಸ್ಥಳೀಯ ಸರ್ಕಾರಿ ಸುದ್ದಿ ಸಂಸ್ಥೆ ಲಾನಾ ವರದಿ ಮಾಡಿದೆ. ಮೃತಪಟ್ಟವರಲ್ಲಿ ನಾಗರಿಕರೂ ಸೇರಿದ್ದಾರೆ ಎಂದು ಲಾನಾ ಹೇಳಿದೆ.
ಈ ಒಪ್ಪಂದವು ಟ್ರಿಪೋಲಿಯಲ್ಲಿನ ಎಲ್ಲ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವುದು, ಸೇನಾ ಸಿಬ್ಬಂದಿಯು ತಮ್ಮ ಬ್ಯಾರಕ್ಗಳಿಗೆ ಮರಳುವುದು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿಯ ಮೌಲ್ಯಮಾಪನ ಮತ್ತು ರಾಷ್ಟ್ರೀಯ ಏಕತೆಯ ಸರ್ಕಾರವು ಪರಿಹಾರ ನೀಡುವುದನ್ನು ಒಳಗೊಂಡಿದೆ. ರಾತ್ರಿಯಿಡೀ ನಡೆದ ಕದನದ ನಂತರ ರಾಜಧಾನಿಯ ಬಹುತೇಕ ಪ್ರದೇಶಗಳಲ್ಲಿ ಹೊಗೆ ಮೇಲೇಳುತ್ತಿರುವುದು ಕಂಡು ಬಂದಿತು. ಈ ಹೋರಾಟವನ್ನು ಈ ವರ್ಷ ನಡೆದ ಅತ್ಯಂತ ತೀವ್ರವಾದ ಹೋರಾಟ ಎಂದು ಹೇಳಲಾಗಿದೆ.
ನಿನ್ನೆಯಿಂದ ಟ್ರಿಪೋಲಿಯಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಅದರಿಂದ ನಾಗರಿಕರ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಲಿಬಿಯಾದಲ್ಲಿನ ವಿಶ್ವಸಂಸ್ಥೆಯ ಬೆಂಬಲ ಮಿಷನ್ (ಯುಎನ್ಎಸ್ಎಂಐಎಲ್) ಮಂಗಳವಾರ ಹೇಳಿದೆ.
2011ರಲ್ಲಿ ನ್ಯಾಟೊ ಬೆಂಬಲಿತ ಕ್ರಾಂತಿಯ ನಂತರ ಲಿಬಿಯಾದಲ್ಲಿ ಶಾಂತಿ ಮತ್ತು ನೆಮ್ಮದಿ ಮರೀಚಿಕೆಯಾಗಿವೆ. 2014ರಲ್ಲಿ ಸಂಘರ್ಷ ನಿರತ ಗುಂಪುಗಳು ಪೂರ್ವ ಮತ್ತು ಪಶ್ಚಿಮ ಲಿಬಿಯಾ ಎಂದು ದೇಶವನ್ನು ಇಬ್ಬಾಗ ಮಾಡಿವೆ. ಆದಾಗ್ಯೂ, ಸಂಘರ್ಷಕ್ಕೆ ಶಾಶ್ವತ ರಾಜಕೀಯ ಪರಿಹಾರ ಮಾತ್ರ ಸಿಕ್ಕಿಲ್ಲ. ತಳಮಟ್ಟದಲ್ಲಿ ಅಧಿಕೃತ ಸ್ಥಾನಮಾನ ಮತ್ತು ಹಣಕಾಸಿನ ಬಲ ಪಡೆದ ಸಶಸ್ತ್ರ ಬಣಗಳು ಅಧಿಕಾರವನ್ನು ಚಲಾಯಿಸುವುದನ್ನು ಮುಂದುವರಿಸಿವೆ. ಕಳೆದ ವರ್ಷ ಪೂರ್ವ ಮೂಲದ ಸಂಸತ್ತು ಘೋಷಿಸಿದ ಪ್ರತಿಸ್ಪರ್ಧಿ ಸರ್ಕಾರವನ್ನು ಬೆಂಬಲಿಸುವ ಬಣಗಳು ಡಿಬೀಬಾವನ್ನು ಪದಚ್ಯುತಗೊಳಿಸುವ ಪ್ರಯತ್ನವನ್ನು ಪ್ರಾರಂಭಿಸಿದವು. ಇದು ಟ್ರಿಪೋಲಿಯಲ್ಲಿ ಭಾರಿ ಘರ್ಷಣೆಗಳಿಗೆ ಕಾರಣವಾಗಿದೆ.
ಇದನ್ನೂ ಓದಿ : ಸುಡಾನ್ ಸಂಘರ್ಷಕ್ಕೆ 4 ತಿಂಗಳು: ವೈದ್ಯಕೀಯ ನೆರವು ಸಿಗದೇ ಸಂಕಷ್ಟದಲ್ಲಿದ್ದಾರೆ 2.5 ಲಕ್ಷಕ್ಕೂ ಅಧಿಕ ಗರ್ಭಿಣಿಯರು