ಲಂಡನ್ ( ಇಂಗ್ಲೆಂಡ್) : ಇಂದು ಕಿಂಗ್ ಚಾರ್ಲ್ಸ್ III ಅವರ ಪಟ್ಟಾಭಿಷೇಕ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಬಹಳ ಅದ್ಧೂರಿಯಿಂದ ಲಂಡನ್ನ ವೆಸ್ಟ್ಮಿನ್ಸ್ಟರ್ನ ಅಬ್ಬೆಯಲ್ಲಿ ನಡೆಯಿತು. ಪಟ್ಟಾಭಿಷೇಕದ ಸಂದರ್ಭ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರು ಬೈಬಲ್ ಪಠಣ ಮಾಡಿದರು. ರಿಷಿ ಸುನಕ್ ಭಾರತೀಯ ಮೂಲದ ಬ್ರಿಟನ್‌ನ ಮೊದಲ ಪ್ರಧಾನಿಯಾಗಿದ್ದಾರೆ. ಹಿಂದೂ ಸಂಪ್ರದಾಯವನ್ನು ಪಾಲಿಸುವ ಅವರು ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ಬೈಬಲ್ ಪಠಣ ಮಾಡುವ ಮೂಲಕ ಬಹುತ್ವದ ನಂಬಿಕೆಯನ್ನು ಸಾರಿದ್ದಾರೆ.
"ನಿಮಗಾಗಿ ಪ್ರಾರ್ಥಿಸುವುದನ್ನು ನಾವು ನಿಲ್ಲಿಸುವುದಿಲ್ಲ ಮತ್ತು ನೀವು ಎಲ್ಲಾ ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ತಿಳುವಳಿಕೆಯಲ್ಲಿ ಚಿತ್ತದ ಜ್ಞಾನದಿಂದ ತುಂಬಿರಬೇಕೆಂದು ಬಯಸುತ್ತೇವೆ. ಕರ್ತನು ಎಲ್ಲರನ್ನೂ ಮೆಚ್ಚುವನು. ಎಲ್ಲಾ ಒಳ್ಳೆಯ ಕೆಲಸದಲ್ಲಿ ಫಲಪ್ರದನಾಗಿರುತ್ತಾನೆ ಮತ್ತು ದೇವರ ಜ್ಞಾನವನ್ನು ಹೆಚ್ಚಿಸುತ್ತಾನೆ'' ಎಂದು ಬೈಬಲ್ ಪಠಣ ಮಾಡಿದರು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ರಾಣಿ ಎಲಿಜಬೆತ್ 2 ನಿಧನರಾದ ಬಳಿಕ ಕಿಂಗ್ಸ್ ಚಾರ್ಲ್ಸ್ III ಅವರು ಔಪಚಾರಿಕವಾಗಿ ಬ್ರಿಟನ್‌ನ ಗದ್ದುಗೆ ಏರಿದ್ದರು. ಶನಿವಾರ ಅಧಿಕೃತವಾಗಿ ಕಿಂಗ್ ಚಾರ್ಲ್ಸ್ ಪಟ್ಟಾಭಿಶಿಕ್ತರಾಗಿದ್ದಾರೆ. ಈ ಸಂದರ್ಭದಲ್ಲಿ ರಾಣಿ ಕ್ಯಾಮೆಲ್ಲಾ ಅವರಿಗೂ ಕಿರೀಟ ತೊಡಿಸಲಾಯಿತು. ಈ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಜಗತ್ತಿನ ಪ್ರಭಾವಿ ನಾಯಕರು, ಸೆಲೆಬ್ರಿಟಿಗಳು, ಗಣ್ಯರು ಭಾಗವಹಿಸಿದ್ದರು. 2000 ಸಾವಿರಕ್ಕೂ ಅಧಿಕ ಗಣ್ಯರು ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಮಾಜಿ ಬ್ರಿಟಿಷ್ ಪ್ರಧಾನ ಮಂತ್ರಿಗಳು ಮತ್ತು ಜೂಡಿ ಡೆಂಚ್, ಎಮ್ಮಾ ಥಾಂಪ್ಸನ್ ಮತ್ತು ಲಿಯೋನೆಲ್ ರಿಚಿ ಮುಂತಾದವರು ಉಪಸ್ಥಿತರಿದ್ದರು. ಈ ಸಮಾರಂಭದ ವೇಳೆ ಸಭೆಯಲ್ಲಿದ್ದವರು "ದೇವರೇ ಕಿಂಗ್ ಚಾರ್ಲ್ಸ್‌ನನ್ನು ರಕ್ಷಿಸು" ಎಂದು ಘೋಷಣೆ ಕೂಗಿದರು. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಂಗ್ಲೆಂಡ್ ಮಾತ್ರವಲ್ಲದೆ, ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಕಿಂಗ್ ಚಾರ್ಲ್ಸ್ III ಅವರು ತಮ್ಮ ಬಕಿಂಗ್ಹ್ಯಾಮ್ ಅರಮನೆಯಿಂದ ಅಲಂಕೃತ ಸಾರೋಟ್ನಲ್ಲಿ ಆಗಮಿಸಿದರು. ಈ ಸಂದರ್ಭದಲ್ಲಿ ಕೆಲ ರಿಪಬ್ಲಿಕನ್ ಪ್ರತಿಭಟನಾಕಾರರು "ನನ್ನ ರಾಜನಲ್ಲ (ನಾಟ್ ಮೈ ಕಿಂಗ್)" ಎಂದು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾ ನಿರತ ಕೆಲವರನ್ನು ಅಧಿಕಾರಿಗಳು ಬಂಧಿಸಿದರು.
ಕಿಂಗ್ ಚಾರ್ಲ್ಸ್ ಅವರು ಕಡುಗೆಂಪು ಮತ್ತು ಕೆನೆ ನಿಲುವಂಗಿಯನ್ನು ಧರಿಸಿ, ಬೈಬಲ್ ಮೇಲೆ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ " ಚರ್ಚ್ ಆಫ್ ಇಂಗ್ಲೆಂಡ್ ಎಲ್ಲಾ ನಂಬಿಕೆಗಳು ಮತ್ತು ನಂಬಿಕೆಗಳ ಜನರು ಮುಕ್ತವಾಗಿ ವಾಸಿಸುವ ವಾತಾವರಣವನ್ನು ಬೆಳೆಸಲು ಪ್ರಯತ್ನಿಸುತ್ತದೆ. ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಪ್ರಮಾಣವಚನ ಓದಿದರು. ಇದೇ ಮೊದಲ ಬಾರಿಗೆ ಮಹಿಳಾ ಪಾದ್ರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇನ್ನು, ಈ ರಾಜರು ಬ್ರಿಟನ್‌ನ ಅಸ್ಮಿತೆಯ ಪ್ರತೀಕವಾಗಿದ್ದಾರೆ. ರಾಜ್ಯದ ಮುಖ್ಯಸ್ಥರಾಗಿ ಮತ್ತು ರಾಷ್ಟ್ರೀಯ ಗುರುತಿನ ಸಂಕೇತವಾಗಿ ಮುಂದುವರೆಯುತ್ತಾರೆ. ಅಲ್ಲದೆ ಬಹುಸಂಸ್ಕೃತಿಯ ರಾಷ್ಟ್ರವನ್ನು ಒಂದುಗೂಡಿಸಲು ಚಾರ್ಲ್ಸ್ ಕೆಲಸ ಮಾಡಬೇಕಾಗುತ್ತದೆ. ವಿಶೇಷವಾಗಿ ಯುವ ಜನರಲ್ಲಿ ರಾಜಪ್ರಭುತ್ವವನ್ನು ಪ್ರಸ್ತುತಪಡಿಸಲು ಮುಂದಾಗಬೇಕಾಗುತ್ತದೆ.
ಇದನ್ನೂ ಓದಿ : ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ: ಎಪ್ಪತ್ತು ವರ್ಷದ ಬಳಿಕ ವೈಭವಕ್ಕೆ ಸಾಕ್ಷಿಯಾಗುತ್ತಿರುವ ಲಂಡನ್