ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ 2 ವರ್ಷದ ಜರ್ಮನ್ ಶೆಫರ್ಡ್ ನಾಯಿ, ಕಮಾಂಡರ್ ಶ್ವೇತಭವನದ ಮೈದಾನದಲ್ಲಿ ಮತ್ತೊಬ್ಬ ರಹಸ್ಯ ಸೇವೆಯ ಉದ್ಯೋಗಿಗೆ ಕಚ್ಚಿದೆ. ಶ್ವೇತಭವನದಲ್ಲಿ ರಹಸ್ಯ ಸೇವಾ ಸಿಬ್ಬಂದಿಯನ್ನು ಕಚ್ಚಿದ ಘಟನೆಗಳಲ್ಲಿ ಇದು 11ನೇ ಪ್ರಕರಣ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ರಹಸ್ಯ ಸೇವೆಯ ಸಮವಸ್ತ್ರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು, ಬೈಡನ್ ಅವರ ಸಾಕು ನಾಯಿ ಕಮಾಂಡರ್ ಸಮೀಪ ಬಂದಿದ್ದಾರೆ. ಆ ವೇಳೆ ನಾಯಿ ಕಚ್ಚಿದೆ. ತಕ್ಷಣವೇ ಸ್ಥಳದಲ್ಲೇ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಅಧಿಕಾರಿ ಆರೋಗ್ಯವಾಗಿದ್ದಾರೆ ಎಂದು ಯುಎಸ್ ಸೀಕ್ರೆಟ್ ಸರ್ವಿಸ್ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಅಧಿಕಾರಿಗೆ ನಾಯಿ ಕಚ್ಚಲು ಕಾರಣ ಹಾಗೂ ಘಟನೆಯ ಬಗ್ಗೆ ಸೀಕ್ರೆಟ್ ಸರ್ವಿಸ್ ಅಥವಾ ಶ್ವೇತಭವನವಾಗಲಿ ಯಾವುದೇ ಹೆಚ್ಚಿನ ವಿವರ ನೀಡಿಲ್ಲ.
ಕಮಾಂಡರ್, ಇದುವರೆಗೆ 10 ಸೀಕ್ರೆಟ್ ಸರ್ವಿಸ್ ಸಿಬ್ಬಂದಿಗೆ ಕಚ್ಚಿರುವುದು ಈ ಹಿಂದೆ ವರದಿಯಾಗಿತ್ತು. ಅದರಲ್ಲೊಂದು ಗಂಭೀರ ಸ್ವರೂಪದ ಘಟನೆ ನಡೆದಿತ್ತು. 2022ರ ನವೆಂಬರ್ನಲ್ಲಿ ರಹಸ್ಯ ಸೇವಾ ಏಜೆಂಟ್ ಒಬ್ಬನ ತೊಡೆ ಹಾಗೂ ತೋಳಿಗೆ ಕಚ್ಚಿ, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜೋ ಬೈಡನ್ ಅವರ ಹಿಂದಿನ ನಾಯಿ ಮೇಜರ್, ಸೀಕ್ರೆಟ್ ಸರ್ವಿಸ್ ಹಾಗೂ ಶ್ವೇತಭವನ ಸಿಬ್ಬಂದಿಯನ್ನು ಕಚ್ಚುವುದು ಮತ್ತು ಆಕ್ರಮಣಕಾರಿಯಾಗಿ ವರ್ತಿಸಿದ ಕಾರಣ, ಅದನ್ನು ಕಳುಹಿಸಿ, ನಂತರ ಕಮಾಂಡರ್ ಅನ್ನು ಕರೆತಂದಿದ್ದರು. ಆದರೆ ಎರಡು ವರ್ಷದ ಈ ಕಮಾಂಡರ್ ಕೂಡ 2021ರಲ್ಲಿ ಶ್ವೇತಭವನಕ್ಕೆ ಆಗಮಿಸಿದಾಗಿನಿಂದ ರಹಸ್ಯ ಸೇವೆಯ ಹಲವಾರು ಸಿಬ್ಬಂದಿಯನ್ನು ಕಚ್ಚಿದೆ. 2021 ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹೊತ್ತಿಗೆ, ಈ ಕಮಾಂಡರ್ ನಾಯಿಯನ್ನು ತಮ್ಮ ಸಹೋದರ ಜೇಮ್ಸ್ ಅವರು ಉಡುಗೊರೆಯಾಗಿ ನೀಡಿದ್ದರು.
ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಅಮೆರಿಕ ಅಧ್ಯಕ್ಷ ಹಾಗೂ ಅವರ ಕುಟಂಬಕ್ಕೆ ಭದ್ರತಾ ರಕ್ಷಣೆಯನ್ನು ನೀಡುತ್ತಾರೆ. ಇದರಲ್ಲಿ ಹಲವಾರು ಅಧಿಕಾರಿಗಳನ್ನು ಕಾರ್ಯನಿರ್ವಾಹಕ ಕಟ್ಟಡ ಹಾಗೂ ಅದರ ವಿಸ್ತಾರವಾದ ಮೈದಾನದ ಸುತ್ತ ನಿಯೋಜಿಸಲಾಗುತ್ತದೆ.
ಇದನ್ನೂ ಓದಿ: ಆಡಳಿತದ ಪ್ರಮುಖ ಹುದ್ದೆಗಳಿಗೆ ಭಾರತೀಯ-ಅಮೆರಿಕನ್ ಮೂಲದವರಿಗೆ ಮಣೆ ಹಾಕಿದ ಬೈಡನ್