ವಾಷಿಂಗ್ಟನ್: ತಂತ್ರಜ್ಞಾನ ದೈತ್ಯ ಸಂಸ್ಥೆಗಳಾದ ಗೂಗಲ್, ಮೈಕ್ರೋಸಾಫ್ಟ್ ಮತ್ತು ಅಮೆಜಾನ್ ಕಂಪನಿಗಳು ಸಿಬ್ಬಂದಿ ಕಡಿತ ಹೆಚ್ಚಿಸಿದ್ದು, ಇದರಲ್ಲಿ ಶೇಕಡಾ 40 ರಷ್ಟು ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದ ಜಾಬ್ ವೀಸಾದಡಿ ಆ ದೇಶಗಳಲ್ಲಿರುವ ಭಾರತೀಯರು ಉದ್ಯೋಗ ನಷ್ಟದಿಂದ, ಭಾರತಕ್ಕೆ ವಾಪಸ್ಸಾಗುವ ಸ್ಥಿತಿ ಎದುರಾಗಿದೆ. ಅಲ್ಲಿಯೇ ಉಳಿದುಕೊಳ್ಳಲು ಅವರು ಮತ್ತೊಂದು ನೌಕರಿ ಗಿಟ್ಟಿಸಿಕೊಳ್ಳಬೇಕಿದೆ.
ಅಮೆರಿಕದಲ್ಲಿರುವ ಸಾವಿರಾರು ಟೆಕಿಗಳು ಉದ್ಯೋಗ ವೀಸಾ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಉದ್ಯೋಗ ಕಳೆದುಕೊಂಡವರು ತಕ್ಷಣವೇ ಮತ್ತೊಂದು ಉದ್ಯೋಗಕ್ಕೆ ಸೇರಬೇಕು. ಇಲ್ಲವಾದಲ್ಲಿ ಜಾಬ್ ವೀಸಾ ಅಮಾನತಾಗಲಿದೆ. ಇದು ಟೆಕಿಗಳನ್ನು ಸಂಕಷ್ಟಕ್ಕೆ ದೂಡಿದ್ದು, ಪ್ರಸ್ತುತ ಎಲ್ಲ ಕಂಪನಿಗಳು ಸಿಬ್ಬಂದಿ ಕಡಿತ ಮಾಡುತ್ತಿದ್ದು, ಹೊಸ ಉದ್ಯೋಗ ಪಡೆಯುವುದು ಸವಾಲಾಗಿದೆ.
ಕಳೆದ ವರ್ಷ ನವೆಂಬರ್‌ನಿಂದ ಸುಮಾರು 2 ಲಕ್ಷ ಐಟಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಇದರಲ್ಲಿ ಗೂಗಲ್, ಮೈಕ್ರೋಸಾಫ್ಟ್, ಫೇಸ್‌ಬುಕ್ ಮತ್ತು ಅಮೆಜಾನ್ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಸಿಬ್ಬಂದಿಯನ್ನು ಕೈಬಿಟ್ಟಿವೆ. ಇದರಲ್ಲಿ 30 ರಿಂದ 40 ಪ್ರತಿಶತದಷ್ಟು ಭಾರತೀಯ ಟೆಕಿಗಳು ಇದ್ದಾರೆ. ಇವರೆಲ್ಲರೂ H-1B ಮತ್ತು L1 ವೀಸಾ ಪಡೆದವರು.
ವೀಸಾಗಳ ಮಹತ್ವವೇನು?: H-1B ಇದು ಅಮೆರಿಕದ ಕಂಪನಿಗಳಿಗೆ ತಾಂತ್ರಿಕ ಪರಿಣತಿಯ ವಿಶೇಷ ಉದ್ಯೋಗಗಳಿಗೆ ವಿದೇಶಿಯರಿಗೆ ನೀಡುವ ವೀಸಾ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಇದು ಅವಕಾಶ ಮಾಡಿಕೊಡುತ್ತದೆ. ಇನ್ನು ಮ್ಯಾನೇಜರ್ ಅಥವಾ ವಿಶೇಷ ಹುದ್ದೆಗಳಿಗೆ ತಾತ್ಕಾಲಿಕ ಇಂಟ್ರಾಕಂಪನಿ ವರ್ಗಾವಣೆದಾರರಿಗೆ L-1A ಮತ್ತು L-1B ವೀಸಾಗಳನ್ನು ನೀಡಲಾಗುತ್ತದೆ.
ವಲಸೆಯೇತರ ವೀಸಾ ಪಡೆದ ಭಾರತೀಯರೇ ಅಧಿಕವಾಗಿದ್ದು ಉದ್ಯೋಗದ ಆಧಾರದ ಮೇಲೆ ನೀಡಲಾದ H-1B, L-1B ವೀಸಾ ಕೂಡ ಇದೀಗ ಕೈತಪ್ಪಲಿದೆ. ಇವರೆಲ್ಲ ಅಮೆರಿಕದಲ್ಲಿ ಉಳಿಯಬೇಕಾದರೆ, ನಿಗದಿತ ಅವಧಿಯಲ್ಲಿ ಹೊಸ ಉದ್ಯೋಗ ಪಡೆದುಕೊಂಡು ವೀಸಾ ನವೀಕರಣ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅನಿವಾರ್ಯವಾಗಿ ಅವರು ದೇಶ ತೊರೆಯಬೇಕು ಎಂಬುದು ಅಲ್ಲಿನ ಕಾನೂನು.
3 ತಿಂಗಳಲ್ಲಿ 2 ಲಕ್ಷ ಟೆಕಿಗಳು ವಜಾ: ಕಳೆದ ವರ್ಷದ ಅಂತ್ಯದಿಂದ ಹಲವಾರು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದ್ದು, 3 ತಿಂಗಳಲ್ಲಿ 2 ಲಕ್ಷಕ್ಕೂ ಅಧಿಕ ಟೆಕಿಗಳು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರತಿವರ್ಷ 10 ಸಾವಿರ ಭಾರತೀಯ ಟೆಕಿಗಳು ವರ್ಕಿಂಗ್ ವೀಸಾ ಪಡೆದು ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ದು, ಅದರಲ್ಲಿ ಶೇಕಡಾ 40 ರಷ್ಟು ಮಂದಿ ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ. ವೀಸಾ ಉಳಿಸಿಕೊಳ್ಳಲು ಪರ್ಯಾಯ ಉದ್ಯೋಗ ಹುಡುಕೊಳ್ಳಬೇಕಿ. ಸದ್ಯ ಎಲ್ಲ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದ್ದು, ಉದ್ಯೋಗ ಪಡೆಯಲು ತೀವ್ರ ಪಡಿಪಾಟಲು ಉಂಟಾಗಿದೆ.
ಯಾವೆಲ್ಲಾ ಕಂಪನಿ, ಎಷ್ಟು ಉದ್ಯೋಗ ಕಡಿತ?: ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್ ಜಾಗತಿಕವಾಗಿ ತನ್ನ 12 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಇದು ಸಂಸ್ಥೆಯ ಒಟ್ಟಾರೆ ಸಿಬ್ಬಂದಿಯ ಶೇ 6 ರಷ್ಟಾಗಿದೆ. ಕಂಪನಿಯಿಂದ ಹೊರಬಿದ್ದ ಉದ್ಯೋಗಿಗಳಿಗೆ ಪರ್ಯಾಯ ಕೆಲಸ, ಸಂಸ್ಥೆಯ 60 ದಿನಗಳ ನೋಟಿಸ್ ಅವಧಿ ಮೊತ್ತವನ್ನು ನೀಡುವುದೂ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಗೂಗಲ್ ಸಿಇಒ ಸುಂದರ್ ಪಿಚ್ಚೈ ತಿಳಿಸಿದ್ದರು.
ಇನ್ನು, ಜಗತ್ತಿನ ನಂಬರ್ ಒನ್ ಸಾಫ್ಟ್ವೇರ್ ಕಂಪನಿಯಾಗಿರುವ ಮೈಕ್ರೋಸಾಫ್ಟ್ 11,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿದೆ. ಇದು ಸಂಸ್ಥೆಯ ಒಟ್ಟಾರೆ ಉದ್ಯೋಗಿಗಳ ಶೇ 5 ರಷ್ಟಾಗಿದೆ. ಕಳೆದ ವರ್ಷ ಕೂಡ ಸಂಸ್ಥೆ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೈಬಿಟ್ಟಿತ್ತು. ಸಂಸ್ಥೆಯು ಒಟ್ಟಾರೆ ಒಂದೂವರೆ ಲಕ್ಷ ಜನರನ್ನು ಕೆಲಸದಿಂದ ವಜಾ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ವಿಶ್ವಾದ್ಯಂತ ತನ್ನ 18 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತಿದೆ ಎಂದು ಅಮೆಜಾನ್ ಘೋಷಿಸಿದೆ. ಇದರಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾರತದಲ್ಲಿಯೇ ಉದ್ಯೋಗ ನಷ್ಟ ಹೊಂದಲಿದ್ದಾರೆ. ಐದು ತಿಂಗಳ ವೇತನವನ್ನು ಮುಂಗಡವಾಗಿ ಪಾವತಿಸುವ ಮೂಲಕ ಉದ್ಯೋಗಿಗಳಿಗೆ ಇಮೇಲ್ ಸಂದೇಶ ಕಳುಹಿಸಿ ವಜಾ ಮಾಡಲಾಗಿದೆ. ಇದಕ್ಕೂ ಮೊದಲು 2022ರ ನವೆಂಬರ್ನಲ್ಲಿ ಸಂಸ್ಥೆ 10 ಸಾವಿರ ಉದ್ಯೋಗಿಗಳಿಗೆ ಗೇಟ್ಪಾಸ್ ನೀಡಿತ್ತು.
ಫೇಸ್ಬುಕ್ನ ಮಾತೃ ಸಂಸ್ಥೆಯಾದ ಮೆಟಾ ಕೂಡ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಕಡಿತ ನಡೆಸಿದೆ. ಸಂಸ್ಥೆ 11,000 ಉದ್ಯೋಗಿಗಳನ್ನು ವಜಾ ಮಾಡಿದೆ. 87 ಸಾವಿರ ಉದ್ಯೋಗಿಗಳಲ್ಲಿ ಶೇ 13 ರಷ್ಟು ಜನರು ಕೆಲಸ ಕಂಪನಿಯಿಂದ ಹೊರಬಿದ್ದಿದ್ದಾರೆ.
ಇದನ್ನೂ ಓದಿ: ಸಾಮೂಹಿಕ ಉದ್ಯೋಗ ಕಡಿತ: ವೆಫಾಕ್ಸ್‌ನ ಸಿಇಒ ಜೂಲಿಯನ್ ಟೈಕ್ ಟೀಕೆ