ತೆಹ್ರಾನ್(ಇರಾನ್): ಇರಾನ್ ಜೈಲಿನಲ್ಲಿರುವ ನೊಬೆಲ್ ಪ್ರಶಸ್ತಿ ವಿಜೇತೆ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ನರ್ಗೆಸ್ ಮೊಹಮ್ಮದಿ ಅವರು ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ನರ್ಗೆಸ್ ಜೈಲಿನಲ್ಲಿರುವ ಇತರ ಖೈದಿಗಳಿಗೆ ನೀಡುತ್ತಿರುವ ವೈದ್ಯಕೀಯ ಆರೈಕೆಯ ಮಿತಿ ಮತ್ತು ಇರಾನ್ನಲ್ಲಿ ಹಿಜಾಬ್ ಕಡ್ಡಾಯಗೊಳಿಸಿರುವುದನ್ನು ಖಂಡಿಸಿ ಹೋರಾಟ ನಡೆಸುತ್ತಿದ್ದಾರೆ.
ನರ್ಗೆಸ್ ಮೊಹಮ್ಮದಿ ಮಾನವ ಹಕ್ಕುಗಳ ಹೋರಾಟಗಾರ್ತಿ. ಇರಾನ್ನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆಗಳನ್ನು ವಿರೋಧಿಸಿ ನಡೆಸಿದ ಸತತ ಹೋರಾಟಕ್ಕಾಗಿ ಇವರಿಗೆ ಕಳೆದ ಅಕ್ಟೋಬರ್ ತಿಂಗಳಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸದ್ಯ ಇರಾನ್ ರಾಜಧಾನಿ ತೆಹ್ರಾನ್ನ ಎವಿನ್ ಜೈಲಿನಲ್ಲಿ ಇರಿಸಲಾಗಿದೆ.
ಮೊಹಮ್ಮದಿ ಕುಟುಂಬಸ್ಥರು ಮಾಹಿತಿ ನೀಡಿರುವ ಪ್ರಕಾರ, ನರ್ಗೆಸ್ ಕಳೆದ ಕೆಲವು ಗಂಟೆಗಳಿಂದ ಜೈಲಿನಲ್ಲಿರುವ ಅವ್ಯವಸ್ಥೆಯ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ನಾವು ಆಕೆಯ ದೈಹಿಕ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದೇವೆ. ಕೇವಲ ನೀರು, ಸಕ್ಕರೆ, ಉಪ್ಪು ಮಾತ್ರ ಸೇವಿಸುತ್ತಿದ್ದಾರೆ. ಔಷಧ ತೆಗೆದುಕೊಳ್ಳುವುದನ್ನೂ ನಿಲ್ಲಿಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನರ್ಗೆಸ್ಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ. ಜೈಲಾಧಿಕಾರಿಗಳು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಹೃದಯ, ಶ್ವಾಸಕೋಶದ ಸಮಸ್ಯೆಗಳಿಂದಲೂ ಬಳಲುತ್ತಿದ್ದಾರೆ. ಆದ್ದರಿಂದ ಜೈಲಿನ ಹೊರಗಡೆ ತುರ್ತು ಚಿಕಿತ್ಸೆ ನೀಡುವ ಅಗತ್ಯವಿದೆ. ನರ್ಗೆಸ್ಗೆ ಏನಾದರೂ ಅನಾರೋಗ್ಯ ತೊಂದರೆ ಉಂಟಾದರೆ ಅದಕ್ಕೆ ಇರಾನ್ ಸರ್ಕಾರವೇ ಕಾರಣವಾಗುತ್ತದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
1979ರ ಬಳಿಕ ಇರಾನ್ನಲ್ಲಿ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ನರ್ಗೆಸ್ ಮೊಹಮ್ಮದಿ ಹಿಜಾಬ್ ಕಡ್ಡಾಯವನ್ನು ವಿರೋಧಿಸುತ್ತಾ ಬಂದವರು. ಯಾವುದೇ ಸಂದರ್ಭಗಳಲ್ಲಿಯೂ ಹಿಜಾಬ್ ಧರಿಸುವುದನ್ನು ಅವರು ನಿರಾಕರಿಸುತ್ತಿದ್ದಾರೆ. ನರ್ಗೆಸ್ ಪ್ರತಿಭಟನೆಗೆ ವಿಶ್ವದೆಲ್ಲೆಡೆಯಿಂದ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ನಾರ್ವೇಜಿಯನ್ ನೊಬೆಲ್ ಸಮಿತಿ ಅಧ್ಯಕ್ಷ ಬೆರಿಟ್ ರೀಸ್ ಆ್ಯಂಡರ್ಸನ್ ಬೆಂಬಲಿಸಿದ್ದಾರೆ. ನರ್ಗೆಸ್ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಮಹಿಳಾ ಖೈದಿಗಳು ಹಿಜಾಬ್ ಧರಿಸುವುದು ಮತ್ತು ಚಿಕಿತ್ಸೆ ಸಂದರ್ಭದಲ್ಲಿ ಹಿಜಾಬ್ ಧರಿಸಬೇಕಿರುವುದು ಅಮಾನವೀಯ ಮತ್ತು ನೈತಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನರ್ಗೆಸ್ ಸತ್ಯಾಗ್ರಹವು ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತದೆ. ನರ್ಗೆಸ್ ಮತ್ತು ಮಹಿಳಾ ಖೈದಿಗಳಿಗೆ ಬೇಕಾದ ಆರೋಗ್ಯ ಸವಲತ್ತುಗಳನ್ನು ಸರ್ಕಾರ ಕೂಡಲೇ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಪೆನ್ ಇಂಟರ್ನ್ಯಾಷನಲ್ ಸಂಸ್ಥೆ ಕೂಡ ನರ್ಗೆಸ್ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಆಕೆಯ ಆರೋಗ್ಯದಲ್ಲಿ ವಿಚಾರ ಸಂಬಂಧ ಇರಾನ್ ಸರ್ಕಾರವೇ ಸಂಪೂರ್ಣ ಹೊಣೆಯಾಗುತ್ತದೆ. ಅವರು ಮೊದಲಾಗಿ ಜೈಲಿನಲ್ಲೇ ಇರಬಾರದು. ಕೂಡಲೇ ಬಿಡುಗಡೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ನರ್ಗೆಸ್ ಮೊಹಮ್ಮದಿಯನ್ನು ಕಳೆದ 22 ವರ್ಷಗಳ ಹಿಂದೆ ಮೊದಲ ಬಾರಿಗೆ ಬಂಧಿಸಲಾಗಿತ್ತು. ಬಳಿಕ ಅವರು ತಮ್ಮ ಜೀವನವನ್ನು ಜೈಲು ಮತ್ತು ಹೊರಗೆ ಮಹಿಳಾ ಹಕ್ಕುಗಳ ಪರವಾಗಿ ಹೋರಾಟ ನಡೆಸುತ್ತಾ ಕಳೆದಿದ್ದಾರೆ. ಕಳೆದ ನವೆಂಬರ್‌ನಲ್ಲಿ ಮತ್ತೆ ಬಂಧಿಸಲಾಗಿದ್ದು, ಸದ್ಯ ಜೈಲಿನಲ್ಲಿದ್ದಾರೆ.
ಇದಕ್ಕೂ ಮುನ್ನ, ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದ ಮಹ್ಸಾ ಅಮಿನಿ, ಜೈಲಿನಲ್ಲೇ ಮೃತಪಟ್ಟಿದ್ದರು. ಪೊಲೀಸರು ನಡೆಸಿದ ಅಮಾನವೀಯ ಹಲ್ಲೆಯಿಂದ ಆಕೆ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣ ಸಂಬಂಧ ನರ್ಗೆಸ್ ಇರಾನಿನಾದ್ಯಂತ ಪ್ರತಿಭಟನೆ ನಡೆಸಿದ್ದರು. ಇದಕ್ಕಾಗಿ ಅವರಿಗೆ ನೊಬೆಲ್ ಪ್ರಶಸ್ತಿ ಒಲಿದುಬಂದಿತ್ತು. ಟೆಹ್ರಾನ್ ಮೆಟ್ರೋದಲ್ಲಿ ಹಿಜಾಬ್ ಧರಿಸದ ಕಾರಣ ಹಲ್ಲೆಗೊಳಗಾಗಿ ಮೃತಪಟ್ಟಿದ್ದ ಅರ್ಮಿತಾ ಗೆರವಂಡ್ ಸಾವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಹಮಾಸ್ ಹತ್ತಿಕ್ಕಲು ಇಸ್ರೇಲ್ ಶಪಥ: ಗಾಜಾದ ನಿರಾಶ್ರಿತ ಶಿಬಿರದ ಮೇಲೆ ವೈಮಾನಿಕ ದಾಳಿ, 52 ಸಾವು