ರೋಮ್ (ಇಟಲಿ): ನಾವು ಕೆಲಸ ಮಾಡುವ ಕಚೇರಿಗಳಲ್ಲಿ ಅಬ್ಬಬ್ಬಾ ಅಂದ್ರು ಒಂದು ವಾರ, ಒಂದು ತಿಂಗಳು ರಜೆ ತೆಗೆದುಕೊಳ್ಳಬಹುದು. ಆದರೆ, ಇಟಲಿಯ ಈ ಶಿಕ್ಷಕಿ ಮಾತ್ರ ಇದಕ್ಕೆ ಅಪವಾದ. ಇವರು ಬರೋಬ್ಬರಿ 24 ವರ್ಷದಲ್ಲಿ 20 ವರ್ಷ ರಜೆ ಹಾಕಿದ್ದಾರೆ. ಕೆಲಸ ಮಾಡಿದ್ದು ಮಾತ್ರ ಬರೀ 4 ವರ್ಷ. ಇದರಿಂದ ಇವರನ್ನು ಇಟಲಿಯ 'ಅತಿ ಕೆಟ್ಟ ಶಿಕ್ಷಕಿ' ಎಂಬ ಪಟ್ಟ ಕಟ್ಟಲಾಗಿದೆ. ಅಲ್ಲದೇ, ವೃತ್ತಿಯಿಂದ ಅಮಾನತು ಮಾಡಲಾಗಿದೆ.
ಸಿಂಜಿಯೊ ಪಾವೊಲಿನಾ ಡಿ ಲಿಯೊ(56) ರಜೆಯನ್ನೇ ಹುದ್ದೆಯನ್ನಾಗಿ ಮಾಡಿಕೊಂಡ ಶಿಕ್ಷಕಿಯ ಹೆಸರು. ಇಟಲಿಯ ಶಾಲೆಯೊಂದರಲ್ಲಿ ಸಾಹಿತ್ಯ ಮತ್ತು ತತ್ವಶಾಸ್ತ್ರವನ್ನು ಬೋಧಿಸುತ್ತಿದ್ದರು. ಕಳೆದ 24 ವರ್ಷಗಳಿಂದ ಆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇಷ್ಟು ವರ್ಷಗಳಲ್ಲಿ ಈ ಶಿಕ್ಷಕಿ ಶಾಲೆಗೆ ಹೋಗಿರುವುದು ಬರೀ 4 ವರ್ಷಗಳು ಮಾತ್ರ. ಉಳಿದ 20 ವರ್ಷಗಳ ಕಾಲ ಆಕೆ ಬೇರೆ ಬೇರೆ ಕಾರಣಗಳನ್ನು ಕೊಟ್ಟು ಶಾಲೆಗೆ ರಜೆ ಹಾಕಿದ್ದಾರೆ. ಆದರೆ, ತಿಂಗಳ ಸಂಬಳವನ್ನು ಮಾತ್ರ ಒಂದು ರೂಪಾಯಿ ಬಿಡದೇ ಪಡೆದುಕೊಂಡಿದ್ದಾರೆ.
ಪರೀಕ್ಷೆ ವೇಳೆಯೂ ಗೈರು: ಇಟಲಿಯ ಮಾಧ್ಯಮಿಕ ಶಾಲೆಯಲ್ಲಿ ಸಾಹಿತ್ಯ ಮತ್ತು ತತ್ವಶಾಸ್ತ್ರವನ್ನು ಬೋಧಿಸುತ್ತಿದ್ದ ಸಿಂಜಿಯೊ, ಪರೀಕ್ಷೆ ಸಮಯದಲ್ಲೂ ಚಕ್ಕರ್ ಹಾಕುತ್ತಿದ್ದರು. ವಿದ್ಯಾರ್ಥಿಗಳು ಆಕೆಗೆ ಸಂದೇಶ ಕಳಿಸಿ, ಪಾಠ ಮಾಡಿ ಎಂದು ಗೋಗರೆದರೂ ಆಕೆ ಕ್ಯಾರೇ ಎನ್ನುತ್ತಿರಲಿಲ್ಲವಂತೆ. ಪಾಠ ಮಾಡದಿದ್ದರೂ ರಜೆ ಬಳಿಕ ಬರುವ ಈ ಮೇಡಂ ವಿದ್ಯಾರ್ಥಿಗಳಿಗೆ ತನಗಿಷ್ಟ ಬಂದಂತೆ ಗ್ರೇಡ್‌ಗಳನ್ನು ಕೊಟ್ಟಿದ್ದಾರೆ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ.
67 ಸಲ ಅನಾರೋಗ್ಯ ಪತ್ರ ಸಲ್ಲಿಕೆ: ರಜೆಯನ್ನೇ ಹುದ್ದೆಯನ್ನಾಗಿ ಮಾಡಿಕೊಂಡಿದ್ದ ಶಿಕ್ಷಕಿ ಸಿಂಜಿಯೊ 67 ಸಲ ಅನಾರೋಗ್ಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಕೆಲಸದ ವೇಳೆ ಅಪಘಾತವಾಗಿದೆ ಅಂತೇಳಿ 2 ಗೈರು ಹಾಜರಿ ನಮೂದಿಸಿದ್ದಾರೆ. ಅನಾರೋಗ್ಯ, ಮಗುವನ್ನು ನೋಡಿಕೊಳ್ಳುವ, ಅಂಗವೈಕಲ್ಯವಿರುವ ಸಂಬಂಧಿಕರಿಗೆ ಸಹಾಯ ಮಾಡುವ, ವಿವಿಧ ಕೋರ್ಸ್ಗಳಿಗೆ ತರಬೇತಿ ಪಡೆಯಬೇಕು ಎಂದು ಕಾರಣ ನೀಡಿ ಸಾಲು ಸಾಲು ರಜೆಗಳನ್ನು ಪಡೆದುಕೊಂಡಿದ್ದಾರೆ. ಹೀಗೆ ಕಾರಣ ನೀಡುತ್ತಲೇ 20 ವರ್ಷ ರಜೆ ಪಡೆದುಕೊಂಡಿದ್ದಾರೆ ಎಂಬುದು ಅಚ್ಚರಿಯ ಸಂಗತಿ.
ಶಿಕ್ಷಕಿ ಕೆಲಸದಿಂದ ವಜಾ: ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಜೂನ್ 22ರಂದು ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಆದರೆ, ಈ ವಿಚಾರವನ್ನು ಪ್ರಶ್ನಿಸಿ ಶಿಕ್ಷಕಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಆಕೆಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಬಳಿಕ ತೀರ್ಪು ಬದಲಿಸಿರುವ ಸರ್ವೋಚ್ಛ ನ್ಯಾಯಾಲಯ ಶಿಕ್ಷಕಿ ಮಕ್ಕಳಿಗೆ ಪಾಠ ಹೇಳಿಕೊಡಲು ಅಸಮರ್ಥೆ ಎಂದು ಘೋಷಿಸಿದೆ.
ಇವರೇ ಮೊದಲಲ್ಲ: ಸುದೀರ್ಘ ರಜೆಗಳನ್ನು ಪಡೆದುಕೊಂಡು ಉದ್ಯೋಗವನ್ನು ದುರ್ಬಳಕೆ ಮಾಡಿಕೊಂಡವರದಲ್ಲಿ ಶಿಕ್ಷಕಿ ಸಿಂಜಿಯೊ ಮೊದಲಲ್ಲ. ಸಾರ್ವಜನಿಕ ಆರೋಗ್ಯ ಕಾರ್ಯಕರ್ತರಾಗಿದ್ದ ಸಾಲ್ವಟೋರ್ ಸ್ಕುಮೇಸ್ ಎಂಬಾತ 15 ವರ್ಷಗಳ ಕಾಲ ರಜೆ ಪಡೆದುಕೊಂಡಿದ್ದ. ಈತನನ್ನು ಅಲ್ಲಿ 'ಗೈರುಹಾಜರಿಯ ರಾಜ' ಎಂದೇ ಕರೆಯಲಾಗುತ್ತದೆ.
ಇದನ್ನೂ ಓದಿ: ಕನ್ಯೆ ಸಿಗದೆ ಮದುವೆ ಆಗಲಿಲ್ಲ.. ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ