ಕಿಬ್ಬುಟ್ಜ್ ರೀಮ್ (ಇಸ್ರೇಲ್): ಅಕ್ಟೋಬರ್ 7 ರಂದು ಹಮಾಸ್ ಉಗ್ರರ ದಾಳಿಯಿಂದ ಎರಡು ಬಾರಿ ಪಾರಾದ ಇಸ್ರೇಲ್ ನಾಗರಿಕರೊಬ್ಬರ ಅನುಭವ ಇಲ್ಲಿದೆ. ಇಸ್ರೇಲ್ನಲ್ಲಿ ವಾಸಿಸುವ ಸಿಲ್ಬರ್ಬರ್ಗ್ ಎಂಬವರು ಮೊದಲಿಗೆ ಟ್ರೈಬ್ ಆಫ್ ನೋವಾ ಸಂಗೀತ ಉತ್ಸವದ ಮೇಲೆ ನಡೆದ ಹಮಾಸ್ ದಾಳಿಯಲ್ಲಿ ಪಾರಾಗಿದ್ದರು. ಅದಾಗಿ ಕೆಲವೇ ಹೊತ್ತಿನಲ್ಲಿ ಅವರು ಮತ್ತೊಂದು ದಾಳಿಯನ್ನು ಎದುರಿಸಬೇಕಾಯಿತು.
ಅಕ್ಟೋಬರ್ 7ರಂದು ಪ್ಯಾಲೆಸ್ಟೈನ್ ನ ಹಮಾಸ್ ಉಗ್ರರು ಟ್ರೈಬ್ ಆಫ್ ನೋವಾ ಸಂಗೀತ ಉತ್ಸವದ ಸ್ಥಳಕ್ಕೆ ಗುಂಪುಗುಂಪಾಗಿ ಬಂದು ಕನಿಷ್ಠ 260 ಜನರನ್ನು ಕೊಂದು, ಅದೆಷ್ಟೋ ಜನರನ್ನು ಒತ್ತೆಯಾಳುಗಳನ್ನಾಗಿ ತೆಗೆದುಕೊಂಡು ಹೋಗಿದ್ದರು.
ಸಂಗೀತ ಉತ್ಸವದ ಜಾಗದಿಂದ ಪಾರಾಗಿ ಕಾರಿನಲ್ಲಿ ಹೋಗುತ್ತಿದ್ದ ಸಿಲ್ಬರ್ಬರ್ಗ್ ಅವರಿಗೆ ತಮಗಿಂತ ಮುಂದೆ ಇಬ್ಬರು ಉಗ್ರರು ಮೋಟರ್ಸೈಕಲ್ನಲ್ಲಿ ಹೋಗುವುದು ಕಾಣಿಸಿತ್ತು. ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದ ಅವರು ಕಂಡ ಕಾರುಗಳ ಮೇಲೆ ಗುಂಡಿನ ಸುರಿಮಳೆಗೈಯುತ್ತಿದ್ದರು. ಒಬ್ಬ ಉಗ್ರ ವಾಹನ ಚಲಾಯಿಸುತ್ತಿದ್ದರೆ, ಮತ್ತೊಬ್ಬ ಹಿಂದೆ ಕುಳಿತು ಕಂಡ ಎಲ್ಲ ಕಾರುಗಳ ಮೇಲೆ ಗುಂಡು ಹಾರಿಸುತ್ತಿದ್ದ ಎಂದು 50 ವರ್ಷದ ಸಿಲ್ಬರ್ಬರ್ಗ್ ಹೇಳಿದರು. ಇಬ್ಬರು ಉಗ್ರರಲ್ಲಿ ಓರ್ವ ಬುಲೆಟ್ ಪ್ರೂಫ್ ಕವಚ ಧರಿಸಿದ್ದ. ಇಂಥ ಸಮಯದಲ್ಲಿ ಸಿಲ್ಬರ್ಬರ್ಗ್ ಮನಸಿನಲ್ಲಿ ಒಂದು ನಿರ್ಧಾರ ಮಾಡಿದರು. ಉಗ್ರರನ್ನು ನೋಡಿದ ತಕ್ಷಣವೇ ಒಂದೋ ಅವರನ್ನು ಸಾಯಿಸಬೇಕು ಅಥವಾ ನಾವು ಸಾಯಬೇಕು ಎಂಬುದು ಸಿಲ್ಬರ್ಬರ್ಗ್ ಅವರಿಗೆ ಖಚಿತವಾಗಿತ್ತು.
ಇಷ್ಟು ಆಲೋಚನೆ ಬಂದಿದ್ದೇ ತಡ ಸಿಲ್ಬರ್ಬರ್ಗ್ ತಕ್ಷಣವೇ ತಮ್ಮ ಕಾರಿನ ವೇಗ ಹೆಚ್ಚಿಸಿ ಮೋಟರ್ ಸೈಕಲ್ ಸವಾರರಿಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದರು. ಈ ಸಮಯದಲ್ಲಿ ಹಿಂದೆ ಕುಳಿತು ಗುಂಡು ಹಾರಿಸುತ್ತಿದ್ದ ಹಮಾಸ್ ಉಗ್ರ ಸ್ಥಳದಲ್ಲೇ ಸತ್ತು ಹೋಗಿದ್ದ. ಮತ್ತೊಬ್ಬ ಬದುಕಿದ್ದರೂ ಗಾಯಗಳಿಂದ ನರಳಾಡುತ್ತಿದ್ದ. ಅಲ್ಲಿಗೆ ಉಗ್ರರನ್ನು ಬಿಟ್ಟು ಸಿಲ್ಬರ್ಬರ್ಗ್ ಮತ್ತು ಅವರ ಸ್ನೇಹಿತ ಕಾರಿನಲ್ಲಿ ವೇಗವಾಗಿ ಮುಂದೆ ಚಲಿಸಿದರು. ನಂತರ 20 ನಿಮಿಷಗಳ ಕಾಲ ಕಾರು ಚಲಾಯಿಸಿಕೊಂಡು ಹೋದ ಅವರು ಸ್ನೇಹಿತನೊಬ್ಬನ ಮನೆ ತಲುಪಿ ಸುರಕ್ಷಿತ ನೆಲೆಯಲ್ಲಿ ಆಶ್ರಯ ಪಡೆದರು.
ಇಸ್ರೇಲಿ ಮೂಲದ ಜರ್ಮನ್ ಆಗಿರುವ ಸಿಲ್ಬರ್ ಬರ್ಗ್ ಈ ಬಗ್ಗೆ ಮಾತನಾಡಿ ತಾವು ಅನುಭವಿಸಿದ ಭಯಾನಕ ಕ್ಷಣಗಳ ಬಗ್ಗೆ ವಿವರಿಸಿದರು. ತಾವು ದೀರ್ಘಕಾಲದಿಂದ ರಾಜಕೀಯವಾಗಿ ತಟಸ್ಥ ನಿಲುವು ಹೊಂದಿದ್ದು, ಪ್ಯಾಲೆಸ್ಟೈನ್ ಜನರ ಜೊತೆಗೆ ಸೌಹಾರ್ದದಿಂದ ಬದುಕೋಣ ಎಂಬುದು ತಮ್ಮ ನಿಲುವಾಗಿತ್ತು ಎಂದರು. ಆದರೆ ಹಮಾಸ್ನ ಈ ಬಾರಿಯ ರಾಕ್ಷಸಿ ದಾಳಿಯ ನಂತರ ತಮ್ಮ ಮನಸು ಬದಲಾಗಿದ್ದು, ಹಮಾಸ್ನೊಂದಿಗೆ ಶಾಂತಿ ಸ್ಥಾಪನೆ ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು. ಅವರು ನಮ್ಮನ್ನು ಕೊಲ್ಲಲು ಬಯಸುತ್ತಾರೆ, ಅವರನ್ನು ಸುಮ್ಮನೆ ಬಿಡಲಾಗದು ಎಂದರು ಸಿಲ್ಬರ್ ಬರ್ಗ್.
ಇದನ್ನೂ ಓದಿ : ಯುಎಸ್ ಅಧ್ಯಕ್ಷೀಯ ಚುನಾವಣಾ ಸಮೀಕ್ಷೆ: ಬೈಡನ್ರನ್ನು 4 ಅಂಕಗಳಿಂದ ಹಿಂದಿಕ್ಕಿದ ನಿಕ್ಕಿ ಹ್ಯಾಲೆ